ಉಗ್ರರ ವಿರುದ್ಧ ಕಠಿಣ ಕ್ರಮಕ್ಕೆ ಸೇನೆಗೆ ಸೂಚಿಸಿದ ಪಾಕಿಸ್ತಾನ

ಹೊಸದಿಲ್ಲಿ,ಅ.6 : ಉರಿ ಉಗ್ರ ದಾಳಿಯ ನಂತರ ವಿಶ್ವದಾದ್ಯಂತ ಟೀಕೆಗೊಳಗಾಗಿರುವ ಪಾಕಿಸ್ತಾನ ತಾನೀಗ ಅಂತಾರಾಷ್ಟ್ರೀಯ ಸಮುದಾಯದಲ್ಲಿ ಒಂಟಿಯಾಗಿ ಬಿಡುವ ಭಯ ಹೊಂದಿದ್ದು ತನ್ನ ಪ್ರಬಲ ಸೇನೆಗೆ ಜೈಶ್-ಇ-ಮುಹಮ್ಮದ್ ಸಹಿತ ಇತರ ಉಗ್ರ ಗುಂಪುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಿದೆಯೆಂದು ಅಲ್ಲಿನ ಪತ್ರಿಕೆ ಡಾನ್ ವರದಿ ಮಾಡಿದೆ.
ಮಂಗಳವಾರದಂದು ಪಾಕಿಸ್ತಾನ ಸರಕಾರದ ಹಿರಿಯ ಅಧಿಕಾರಿಗಳು ಸೇನಾ ಅಧಿಕಾರಿಗಳೊಂದಿಗೆ ಅಭೂತಪೂರ್ವವೆಂದು ಬಣ್ಣಿಸಲಾದಮಾತುಕತೆಗಳನ್ನು ರಹಸ್ಯ ಸ್ಥಳವೊಂದರಲ್ಲಿ ನಡೆಸಿದ್ದಾರೆಂದೂ ಡಾನ್ ವರದಿ ಮಾಡಿದೆ.
ಸರಕಾರವು ನಿಷೇಧಿತ ಹಾಗೂ ಇತರ ಉಗ್ರ ಸಂಘಟನೆಗಳ ವಿರುದ್ಧ ಕಾರ್ಯಾಚರಣೆ ನಡೆಸಿದ್ದೇ ಆದಲ್ಲಿಆ ವಿಚಾರದಲ್ಲಿ ಮಿಲಿಟರಿ ನೇತೃತ್ವದ ಗುಪ್ತಚರ ಏಜನ್ಸಿಗಳು ಹಸ್ತಕ್ಷೇಪ ನಡೆಸಬಾರದೆಂದು ಸರಕಾರ ಹೇಳಿದೆಯೆನ್ನಲಾಗಿದೆ.
ಅಂತೆಯೇ ಪಠಾಣ್ ಕೋಟ್ ದಾಳಿ ಸಂಬಂಧಿತ ತನಿಖೆಯನ್ನು ಸಂಪೂರ್ಣಗೊಳಿಸಲಾಗುವುದುಹಾಗೂ ಮುಂಬೈ ದಾಳಿ ಸಂಬಂಧ ರಾವಲ್ಪಿಂಡಿಯ ಉಗ್ರವಾದ ವಿರೋಧಿ ನ್ಯಾಯಾಲಯದಲ್ಲಿ ವಿಚಾರಣೆ ಪುನರಾರಂಭಿಸಲಾಗುವುದು, ಎಂದೂ ಸರಕಾರ ಹೇಳಿದೆಯೆಂದು ತಿಳಿದು ಬಂದಿದೆ.
ಮಂಗಳವಾರ ನಡೆದ ರಹಸ್ಯ ಸಭೆಯ ನೇತೃತ್ವವನ್ನು ಪ್ರಧಾನಿ ನವಾಝ್ ಶರೀಫ್ ಅವರೇ ವಹಿಸಿದ್ದು ಹಿರಿಯ ಕ್ಯಾಬಿನೆಟ್ ಸಚಿವರು ಕೂಡ ಭಾಗವಹಿಸಿದ್ದರು.







