ದೈವದ ಮೊರೆಹೋದ ತುಂಬೆ ನೂತನ ಡ್ಯಾಂನ ಸಂತ್ರಸ್ತ ರೈತರು

ಬಂಟ್ವಾಳ, ಅ. 6: ತುಂಬೆ ನೂತನ ವೆಂಟೆಡ್ ಡ್ಯಾಂನಿಂದ ಮುಳುಗಡೆಯಾಗಲಿರುವ ಜಮೀನಿನ ಸಂತ್ರಸ್ತ ರೈತರಿಗೆ ಎದುರಾಗಿರುವ ಭೀತಿಯನ್ನು ನಿವಾರಿಸುವಂತೆ ಆಗ್ರಹಿಸಿ ಇಲ್ಲಿನ ಸಜೀಪ ಮುನ್ನೂರು ಗ್ರಾಮಸ್ಥರು ಗುರುವಾರ ಗ್ರಾಮದೈವ ಮುದೆಲ್‌ಮುಟ್ಟಿ ಶ್ರೀ ನಾಲ್ಕೈತ್ತಾಯ ದೈವಸ್ಥಾನದಲ್ಲಿ ಸಾಮಾಹಿಕ ಪ್ರಾರ್ಥನೆ ಸಲ್ಲಿಸಿದರು.
ರಾಜ್ಯ ರೈತ ಸಂಘದ ಹಸಿರು ಸೇನೆಯ ದ.ಕ. ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ದೈವಸ್ಥಾನದಲ್ಲಿ ಸೇರಿದ ಸಂತ್ರಸ್ತ ರೈತರು ತುಂಬೆ ವೆಂಟೆಡ್ ಡ್ಯಾಂನಿಂದ ಸಜೀಪಮುನ್ನೂರು ಸೇರಿದಂತೆ ಬಂಟ್ವಾಳ ತಾಲೂಕಿನ 5 ಗ್ರಾಮಗಳ ಕೃಷಿ ಭೂಮಿ ಮುಳುಗಡೆಯಾಗಲಿದೆ. ಈ ಸಮಸ್ಯೆಯ ಬಗ್ಗೆ ಕಳೆದ 12 ವರ್ಷಗಳಿಂದ ಜನಪ್ರತಿನಿಧಿಗಳು, ಸಂಬಂಧಪಟ್ಟ ಇಲಾಖೆ ಹಾಗೂ ಸರಕಾರಕ್ಕೆ ದೂರು ಸಲ್ಲಿಸಿದರೂ ಸರಿಯಾದ ಸ್ಪಂದನೆ ಸಿಗದೆ ನೆನೆಗುದಿಗೆ ಬಿದ್ದಿದೆ. ಆದ್ದರಿಂದ ಕೃಷಿಯನ್ನೇ ಅವಲಂಬಿಸಿ ಬದುಕುತ್ತಿರುವ ಇಲ್ಲಿನ ಜನರಿಗೆ ಎದುರಾಗಿರುವ ಈ ಕಂಟಕವನ್ನು ದೈವವು ಪರಿಹರಿಸುವಂತೆ ಪ್ರಾರ್ಥನೆ ಸಲ್ಲಿಸಿದರು.
ತುಂಬೆ ನೂತನ ವೆಂಟೆಡ್ ಡ್ಯಾಂ ಸಂತ್ರಸ್ತ ರೈತರ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ.ಸುಬ್ರಹ್ಮಣ್ಯ ಭಟ್ ಸುದ್ದಿಗಾರರೊಂದಿಗೆ ಮಾತನಾಡಿ, ಹೊಸ ವೆಂಟೆಡ್ ಡ್ಯಾಂನಲ್ಲಿ ಏಳು ಮೀಟರ್‌ಗೆ ನೀರು ಸಂಗ್ರಹಿಸಿದ್ದಲ್ಲಿ ಮುದೆಲ್‌ಮುಟ್ಟಿ ನಾಲ್ಕೈತ್ತಾಯ ದೈವಸ್ಥಾನವು ದ್ವೀಪವಾಗಲಿದೆ. ಜನವರಿಯಲ್ಲಿ ದೈವಸ್ಥಾನದಲ್ಲಿ ದೊಂಪದ ಬಲಿ ನೇಮೋತ್ಸವ ನಡೆಯಲಿದ್ದು ಇಲ್ಲಿಗೆ ಪರಾರಿ ಮನೆಯಿಂದ ಭಂಡಾರ ಬರುವ ರಸ್ತೆಗಳು ಮುಳುಗಡೆಯಾಗುತ್ತವೆ. ದೋಣಿಯ ಮೂಲಕ ಭಂಡಾರ ತರುವ ಸ್ಥಿತಿ ಉಂಟಾಗುತ್ತದೆ. ಈ ಎಲ್ಲಾ ಸಮಸ್ಯೆಗಳ ಬಗ್ಗೆ ಈಗಾಗಲೇ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಮನವರಿಕೆ ಮಾಡಿಕೊಟ್ಟರೂ ಸ್ಪಂದನೆ ಸಿಗದ ಕಾರಣ ನ್ಯಾಯಾಲಯದ ಮೊರೆ ಹೋಗಿದ್ದೇವೆ. ಸರಕಾರ ಇಚ್ಛಾಶಕ್ತಿ ತೋರಿದಲ್ಲಿ ಕ್ಷಣಮಾತ್ರದಲ್ಲಿ ಪರಿಹರಿಸ ಬಹುದಾದ ಈ ಸಮಸ್ಯೆಯನ್ನು 12 ವರ್ಷಗಳಿಂದ ಸತಾಯಿಸಿಕೊಂಡು ಬರುತ್ತಿದೆ. ಆದ್ದರಿಂದ ನಾವು ನಂಬಿದ ದೈವ ದೇವರುಗಳು ನಮ್ಮನ್ನು ರಕ್ಷಣೆ ಮಾಡಲಿ ಎಂದು ಗ್ರಾಮ ದೈವಸ್ಥಾನದಲ್ಲಿ ಸಾಮಾಹಿಕ ಪ್ರಾರ್ಥನೆ ಸಲ್ಲಿಸಿರುವುದಾಗಿ ಅವರು ತಿಳಿಸಿದರು.
ಈ ಸಂದರ್ಭ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮನೋಹರ ಶೆಟ್ಟಿ, ತುಂಬೆ ನೂತನ ವೆಂಟೆಡ್ ಡ್ಯಾಂ ಸಂತ್ರಸ್ತ ರೈತರ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಎನ್.ಕೆ.ಇದಿನಬ್ಬ, ಪ್ರಮುಖರಾದ ಸುದೇಶ್ ಮಯ್ಯ, ತಾಲೂಕು ಘಟಕದ ಅಧ್ಯಕ್ಷ ಶರತ್ ಕುಮಾರ್, ಸಂತ್ರಸ್ತ ರೈತರಾದ ಧನಂಜಯ ಶೆಟ್ಟಿ, ಪ್ರಸಾದ್ ಶೆಟ್ಟಿ, ಶರತ್ ಪಾಡಿಎಂ, ರಾಮ, ಚಿತ್ರಾ ಎಸ್ ರೈ, ಹೇಮಲತಾ ಶೆಟ್ಟಿ ಮತ್ತಿತರರು ಹಾಜರಿದ್ದರು.







