ಎತ್ತಿನಹೊಳೆ ಯೋಜನೆ ವಿರೋಧಿಸಿ ನಡೆಯಲಿದೆ ಹೀಗೂ ಒಂದು ಪ್ರತಿಭಟನೆ!

ಮಂಗಳೂರು, ಅ. 6: ಎತ್ತಿನಹೊಳೆ ಯೋಜನೆಯನ್ನು ವಿರೋಧಿಸಿ, ಸಹ್ಯಾದ್ರಿ ಸಂಚಯದ ವತಿಯಿಂದ ಅ. 9ರಂದು ಜಿಲ್ಲಾಧಿಕಾರಿ ಕಚೇರಿ ಎದುರು ನೇತ್ರಾವತಿ ನದಿಯ 9 ಉಪನದಿಗಳ ಸಾಂಕೇತಿಕ ರೂಪವಾಗಿ ನವದುರ್ಗೆಯರ ನದೀ ರೋದನ ಎಂಬ ವಿನೂತನ ನೇತ್ರಾವತಿ ಉಳಿಸಿ ಪ್ರತಿಭಟನೆ ನಡೆಯಲಿದೆ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನೇತ್ರಾವತಿಯ ರಕ್ಷಣೆಗಾಗಿ ಅವೈಜ್ಞಾನಿಕವಾಗಿರುವ ಎತ್ತಿನಹೊಳೆ ಯೋಜನೆಯನ್ನು ವಿರೋಧಿಸಿ ಸಾಕಷ್ಟು ಪ್ರತಿಭಟನೆ, ಹೋರಾಟಗಳು ವ್ಯಕ್ತವಾಗುತ್ತಿದ್ದರೂ ರಾಜ್ಯ ಸರಕಾರವು ತನ್ನ ಹಠಮಾರಿ ತಳೆದಿರುವುದು ಕರಾವಳಿ ಜಿಲ್ಲೆಯ ಮೇಲೆ ಸರಕಾರವು ಮಾಡುವ ದೌರ್ಜನ್ಯವಾಗಿದೆ. ಸರಕಾರದ ಈ ಹಠಮಾರಿ ನಿಲುವನ್ನು ಖಂಡಿಸಿ, ಸಹ್ಯಾದ್ರಿ ಸಂಚಯವು ನವರಾತ್ರಿಯ 9ನೆ ದಿನವಾದ ಅ. 9ರಂದು ಬೆಳಿಗ್ಗೆ ಗಂಟೆ 10.30ಕ್ಕೆ ಈ ಪ್ರತಿಭಟನೆ ನಡೆಯಲಿದೆ.
ದುರ್ಗೆಯು ಮಹಿಷಾಸುರನೆಂಬ ರಾಕ್ಷಸನನ್ನು ಸಂಹಾರ ಮಾಡಿರುವ ರೀತಿಯಲ್ಲಿಯೇ ದಕ್ಷಿಣ ಕನ್ನಡ ಜಿಲ್ಲೆಯ ಜನತೆಯು ನೇತ್ರಾವತಿಗೆ ಕಂಟಕವಾಗಿರುವ ರಾಜಕೀಯ ವ್ಯವಸ್ಥೆಯ ರಾಕ್ಷಸೀಯ ರೂಪವನ್ನು ಅಂತ್ಯಗೊಳಿಸಬೇಕೆಂಬುದು ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ. ನೇತ್ರಾವತಿಯ 9 ಉಪನದಿಗಳು 9 ದುರ್ಗೆಯರಾಗಿ ತಮ್ಮ ರೋದನವನ್ನು ವ್ಯಕ್ತಪಡಿಸಿ ದಕ್ಷಿಣ ಕನ್ನಡ ಜಿಲ್ಲೆಗೆ ಕುಡಿಯುವ ನೀರಿಗೆ ಸಮಸ್ಯೆಯಾಗುವಂತಹ ಹಾಗೂ ಪಶ್ಚಿಮ ಘಟ್ಟಕ್ಕೆ ಮಾರಣಾಂತಿಕ ಗಾಯವಾಗಲಿರುವ ಎತ್ತಿನಹೊಳೆ ಯೋಜನೆಯನ್ನು ನಿಲ್ಲಿಸುವಂತೆ ಬೇಡಿಕೊಳ್ಳುತ್ತಿರುವುದನ್ನು ಇಲ್ಲಿ ಅಭಿವ್ಯಕ್ತಪಡಿಸಲಾಗುವುದು.
ನೇತ್ರಾವತಿಯ 9 ಉಪನದಿಗಳಾಗಿರುವ ನವದುರ್ಗೆಯರು ಕೈಯಲ್ಲಿ ನೀರಿನ ತಂಬಿಗೆಯೊಂದಿಗೆ ಮಂಗಳಾದೇವಿ ದೇವಸ್ಥಾನಕ್ಕೆ ಹೋಗಿ ಎತ್ತಿನಹೊಳೆ ಯೋಜನೆಯ ಯೋಜನಾಕಾರರು ತಮ್ಮ ಹಠವನ್ನು ಬಿಟ್ಟು ಇನ್ನಾದರೂ ಈ ಅಸಂಬದ್ಧ ಯೋಜನೆಯನ್ನು ನಿಲ್ಲಿಸಲಿ ಎಂದು ಪ್ರಾರ್ಥಿಸಿ ದೇವರಿಗೆ ಕಲಶ ಅರ್ಪಣೆ ಮಾಡಲಾಗುವುದು ಎಂದು ಸಹ್ಯಾದ್ರಿ ಸಂಚಯದ ಪತ್ರಿಕಾ ಪ್ರಕಟನೆ ತಿಳಿಸಿದೆ.







