ಯಕ್ಷಗಾನ ಕಲಾವಿದರಿಗೆ ಆರೋಗ್ಯ ಕಾರ್ಡ್ ವಿತರಣೆ

ಉಡುಪಿ, ಅ.6: ಒತ್ತಡದ ನಡುವೆ ಕಾರ್ಯಕ್ರಮ ನೀಡುವ ಯಕ್ಷಗಾನ ಕಲಾವಿದರು ತಮ್ಮ ಆರೋಗ್ಯದ ಬಗ್ಗೆ ಲಕ್ಷ ಹೊಂದಿರುವುದು ಕಡಿಮೆ. ಉತ್ತಮ ಆರೋಗ್ಯವಿದ್ದಲ್ಲಿ ಉತ್ತಮ ಪ್ರದರ್ಶನ ನೀಡಬಹುದು. ಆದ್ದರಿಂದ ಯಕ್ಷಗಾನ ಕಲಾವಿದರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಅಂಬಲಪಾಡಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಜಿ. ಶಂಕರ್ ಹೇಳಿದ್ದಾರೆ.
ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಹಾಗೂ ಮಣಿಪಾಲ ವಿವಿ ಆಶ್ರಯದಲ್ಲಿ ಬುಧವಾರ ಮಣಿಪಾಲ ಇಂಟರಾಕ್ಟ್ ಸಭಾಭವನದಲ್ಲಿ ಉಡುಪಿ ಯಕ್ಷಗಾನ ಕಲಾರಂಗದ 236 ಮಂದಿ ಸದಸ್ಯ ಯಕ್ಷಗಾನ ಕಲಾವಿದರಿಗೆ ಮಣಿಪಾಲ ಸುರಕ್ಷಾ ಆರೋಗ್ಯ ಕಾರ್ಡ್ ವಿತರಿಸಿ ಅವರು ಮಾತನಾಡುತಿದ್ದರು.
ಅಧ್ಯಕ್ಷತೆ ವಹಿಸಿದ್ದ ಮಣಿಪಾಲ ವಿವಿ ಸಹಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್ ಮಾತನಾಡಿ, ಯಕ್ಷಗಾನ ಕಲಾವಿದರು ಪುರಾಣ ಇತಿಹಾಸಗಳ ಬಗ್ಗೆ ಜ್ಞಾನವುಳ್ಳ ಪ್ರತಿಭಾವಂತರು. ಕಲೆಯ ಮೂಲಕ ಪ್ರೇಕ್ಷಕರನ್ನು ಸಂತೋಷ ಪಡಿಸುವ ಯಕ್ಷಗಾನ ಕಲಾವಿದರು ಆರೋಗ್ಯವಂತರಾಗಿರಬೇಕು ಎಂದರು.
ಇತ್ತೀಚೆಗೆ ನಿಧನರಾದ ಯಕ್ಷಗಾನ ಕಲಾವಿದರಾದ ರಾಜು ಕುಲಾಲ್ ಮತ್ತು ಎಳಜಿತ್ ನಾರಾಯಣ ಗೌಡ ಅವರ ವಾರೀಸುದಾರರಿಗೆ ತಲಾ 50,000ರೂ. ಮೊತ್ತದ ಗುಂಪು ವಿಮೆ ಪರಿಹಾರಧನ ಹಾಗೂ ಇಬ್ಬರು ಕಲಾವಿದರಿಗೆ ಮೆಡಿಕ್ಲೈಮ್ ವಿಮಾ ಮೊತ್ತವನ್ನು ವಿತರಿಸಲಾಯಿತು.
ಯಕ್ಷಗಾನ ಕಲಾರಂಗ ಅಧ್ಯಕ್ಷ ಗಣೇಶ ರಾವ್ ಸ್ವಾಗತಿಸಿದರು. ಉಪಾಧ್ಯಕ್ಷ ಗಂಗಾಧರ ರಾವ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಮುರಳಿ ಕಡೆಕಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮಣಿಪಾಲ ವಿವಿಯ ಬಾಬಣ್ಣ ವಂದಿಸಿದರು.







