ಹಿಂದೂ ನಾವೆಲ್ಲಾ ಒಂದು ಎಂಬುದು ಸುಳ್ಳು: ಗೌರಿ ಲಂಕೇಶ್

ಬೇಲೂರು, ಅ.06: ಚಲೋ ಉಡುಪಿ, ಸ್ವಾಭಿಮಾನಿ ಸಂಘರ್ಷ ಜಾಥಾದ ಮೂರನೆಯ ದಿನವಾದ ಇಂದು ಜಾಥಾವು ಬೇಲೂರನ್ನು ಪ್ರವೇಶಿಸಿತು. ಬೇಲೂರು ಮುಖ್ಯ ರಸ್ತೆಯ ಹಗರೆ ಗ್ರಾಮದಲ್ಲಿ ಚಲೋಉಡುಪಿ ತಂಡವನ್ನು ಬೇಲೂರಿನ ದಲಿತ- ದಮನಿತರ ಸಮೂಹ ಸ್ವಾಗತಿಸಿ, ಹೆದ್ದಾರಿಯಲ್ಲಿ ಮೆರವಣಿಗೆ ನಡೆಸಲಾಯಿತು.
ನಂತರ ನಡೆದ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿದ್ದ ಪತ್ರಕರ್ತೆ ಗೌರಿ ಲಂಕೇಶ್ ಮಾತನಾಡಿ, ಹಿಂದುತ್ವ ಅಂದ್ರೆ ದಲಿತ, ಮಹಿಳಾ ಮತ್ತು ಮನುಷ್ಯರ ವಿರೋಧಿ, ದನದ ಹೆಸರಲ್ಲಿ ಮನುಷ್ಯರನ್ನು ಕೊಲ್ಲುವ ಸಂಸ್ಕೃತಿ. ಹಿಂದೂ ನಾವೆಲ್ಲ ಒಂದು ಎನ್ನುವುವುದು ಪೊಳ್ಳು ಘೋಷಣೆಯಾಗಿದೆ. ಹೀಗೆ ಹೇಳುವವರು ಸಮಾನತೆ ಬಗ್ಗೆ ಮಾತಾಡುವುದಿಲ್ಲ. ಇದನ್ನು ನಾವು ವಿರೋಧಿಸಬೇಕಿದೆ ಎಂದು ಹೆಚ್ಚೆಚ್ಚು ಜನರು ಉಡುಪಿಗೆ ಬರಬೇಕೆಂದು ಮನವಿ ಮಾಡಿದರು.
ಚಲೋ ಉಡುಪಿ ತಂಡದ ಪರವಾಗಿ ಜನಶಕ್ತಿಯ ಗೌರಿ ಮಾತನಾಡಿ. ನಮ್ಮ ಜಾಥಾದ ಘೋಷಣೆ ಆಹಾರ ನಮ್ಮ ಆಯ್ಕೆ, ಭೂಮಿ ನಮ್ಮ ಹಕ್ಕು ಎಂದು. ಊನದಲ್ಲಿ ನಡೆದ ಹಲ್ಲೆ ಖಂಡಿಸಿ ನಡೆದ ಹೋರಾಟದ ಸ್ಫೂರ್ತಿ ಯಿಂದ ಈ ಹೋರಾಟ ರೂಪುಗೊಂಡಿದೆ. ಕರ್ನಾಟಕದಲ್ಲೂ ದನದ ಹೆಸರಲ್ಲಿ ಹಲ್ಲೆಗಳು, ಮತ್ತು ದಲಿತರು ಎರಡು ಎಕರೆ ಭೂಮಿಯೂ ಇಲ್ಲದೆ ಬದುಕುತ್ತಿದ್ದಾರೆ. ಇದಕ್ಕೆಲ್ಲಾ ದಲಿತ ದಮನಿತರ ಪರ, ಮಹಿಳಾ, ಆದಿವಾಸಿ, ಲೈಂಗಿಕ ಅಲ್ಪಸಂಖ್ಯಾತರ ಪರವಾಗಿ ನಮ್ಮ ಹೋರಾಟವನ್ನು ರೂಪಿಸಬೇಕಿದೆ. ಇದು ಸಾಮೂಹಿಕ ನಾಯಕತ್ವದ ಹೋರಾಟ. ದಲಿತರನ್ನು ಸುಟ್ಟ ಬೆಂಕಿ ದೇಶವನ್ನು ಸುಡುತ್ತದೆ ಅನ್ನುವ ಎಚ್ಚರಿಕೆಯನ್ನು ನೀಡಬೇಕಿದೆ. ಹಾಗಾಗಿ ಎಲ್ಲರೂ ಉಡುಪಿಗೆ ಬರಬೇಕೆಂದು ಕೇಳಿಕೊಳ್ಳುತ್ತೇನೆ ಎಂದರು..
ದಲಿತ ಮುಖಂಡ ಈಶ್ವರಪ್ಪ ಅವರು, ಹಗರೆ ಗ್ರಾಮದವರ ಪರವಾಗಿ ಚಲೋಉಡುಪಿ ತಂಡಕ್ಕೆ ಶುಭಕೋರಿ ಮಾತನಾಡಿ ಚಲೋಉಡುಪಿ ತಂಡವನ್ನು ಬೀಳ್ಕೊಟ್ಟರು.







