1965 ರ ಭಾರತ - ಪಾಕ್ ಯುದ್ಧದ ಭೀಕರ ನೆನಪುಗಳನ್ನು ಸ್ಮರಿಸಿದ ನ್ಯಾ. ಠಾಕೂರ್
ಅವರು ನೋಡಿದ ಆಘಾತಕಾರಿ ದೃಶ್ಯಗಳೇನು ?

ಹೊಸದಿಲ್ಲಿ, ಅ. 6 : ಭಾರತ - ಪಾಕಿಸ್ತಾನಗಳ ನಡುವೆ ಸಂಬಂಧ ಬಿಗಡಾಯಿಸಿರುವ ಹಾಗು ಹಲವರು ಯುದ್ಧಕ್ಕೆ ಕರೆಕೊಡುತ್ತಿರುವ ಸಂದರ್ಭದಲ್ಲೇ ದೇಶದ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶ ಟಿ. ಎಸ್. ಠಾಕೂರ್ ಅವರು 1965 ರಲ್ಲಿ ನಡೆದ ಭಾರತ - ಪಾಕ್ ಯುದ್ಧದ ಭೀಕರ ನೆನಪುಗಳನ್ನು ಜನರ ಮುಂದಿಟ್ಟಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಅವರು ಇದನ್ನು ಬಹಿರಂಗಪಡಿಸಿದ್ದಾರೆ.
ಆ ಸಂದರ್ಭದಲ್ಲಿ ಬಾಲಕನಾಗಿದ್ದ ನ್ಯಾ. ಠಾಕೂರ್ ಅವರು ಜಮ್ಮುವಿನಲ್ಲಿದ್ದರು. " ಯುದ್ಧ ನಡೆದು 18-20 ದಿನಗಳ ಬಳಿಕ ಕರ್ನಲ್ ರೂಪ್ ಸಿಂಗ್ ಅವರು ನಮ್ಮನ್ನು ಯುದ್ಧದಲ್ಲಿ ಸಂಪೂರ್ಣ ನಾಶಗೊಂಡ ಹಾಗು ಇದೀಗ ಭಾರತದ ವಶಕ್ಕೆ ಬಂದಿದ್ದ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದರು. ಆಗ ನನಗೆ ಯುದ್ಧದ ಸ್ಮಶಾನ ನೋಡಿದ ನೆನಪು ಇಂದಿಗೂ ಮರೆಯಲು ಸಾಧ್ಯವಿಲ್ಲ. ಅಲ್ಲಿ ಸುಟ್ಟುಹೋದ ಜನರ ಶವಗಳು ಬಿದ್ದಿದ್ದವು ಹಾಗು ಅವುಗಳ ಮೇಲೆ ಮಣ್ಣು ಹಾಕಲಾಗಿತ್ತು. ಅಲ್ಲಿ ಯಾರಿಗೂ ಶವಗಳನ್ನು ವಿಧಿವತ್ತಾಗಿ ಅಂತ್ಯ ಸಂಸ್ಕಾರ ಮಾಡುವ ಸಮಯ, ಅವಕಾಶ ಇರಲಿಲ್ಲ. ಸೇನೆಯ ಶೂಗಳನ್ನು ಹಾಕಿದ ವ್ಯಕ್ತಿಗಳ ಕಾಲುಗಳನ್ನು ನಾಯಿಗಳು ತಿನ್ನುತ್ತಿರುವ ದೃಶ್ಯವನ್ನು ನಾನು ಅಂದು ನೋಡಿದ್ದೇನೆ " ಎಂದು ಅವರು ಹೇಳಿದ್ದಾರೆ.





