‘ಸ್ವಾಭಿಮಾನಿ ಸಂಘರ್ಷ ಜಾಥಾ’ದಡಿ ಐಕ್ಯತೆ!
ಅ.9ರಂದು ಉಡುಪಿಯಲ್ಲಿ ಸಮಾವೇಶ

ಮಂಗಳೂರು, ಅ.6: ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿಯಡಿ ಬೆಂಗಳೂರಿನಿಂದ ಹೊರಟಿರುವ ಚಲೋ ಉಡುಪಿ ಎಂಬ ‘ಸ್ವಾಭಿಮಾನಿ ಸಂಘರ್ಷ ಜಾಥಾ’ವು ರಾಜ್ಯದ ವಿವಿಧ ಚಳವಳಿಗಳು ಒಂದೇ ಬ್ಯಾನರ್, ಬಾವುಟ ಹಾಗೂ ಲಾಂಛನಡಿ ಐಕ್ಯತೆಯನ್ನು ಪ್ರದರ್ಶಿಸುತ್ತಿದೆ ಎಂದು ಸಮಿತಿಯ ಪ್ರಮುಖರಾದ ಎಂ. ದೇವದಾಸ್ ತಿಳಿಸಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತರು ಹಾಗೂ ದಮನಿತರ ಮೇಲೆ ಕೋಮುವಾದಿ ಶಕ್ತಿಗಳಿಂದ ನಿರಂತರ ದಾಳಿಯನ್ನು ಖಂಡಿಸಿ ಈ ಜಾಥಾವನ್ನು ರೂಪಿಸಲಾಗಿದೆ ಎಂದವರು ಹೇಳಿದರು. ಚಲೋ ಉಡುಪಿ ಜಾಥಾವು ಅ. 8ರಂದು ಉಡುಪಿ ತಲುಪಲಿದೆ. ಜಾಥಾ ತಂಡವು ಕೊಲೆಗೀಡಾದ ಪ್ರವೀಣ್ ಪೂಜಾರಿ ಮನೆಗೆ ಅಂದು ಭೇಟಿ ನೀಡಲಿದೆ. ಅ. 9ರಂದು ಬೆಳಗ್ಗೆ ಸುಮಾರು 11 ಗಂಟೆಗೆ ಅಜ್ಜರಕಾಡು ಮೈದಾನದಿಂದ ಜಾಥಾ ಹೊರಟು ಬೀಡಿನಗುಡ್ಡೆಯಲ್ಲಿ ಸಮಾವೇಶಗೊಳ್ಳಲಿದೆ. ಅಲ್ಲಿ ಬಹಿರಂಗ ಸಭೆ ನಡೆಯಲಿದೆ. ಸಭೆಯಲ್ಲಿ ಗುಜರಾತ್‌ನ ಊನಾ ಹೋರಾಟದ ಜಿಗ್ನೇಶ್ ಮೆವಾನಿ ಸೇರಿದಂತೆ ಖ್ಯಾತ ಹೋರಾಟಗಾರರು ಭಾಗವಹಿಸಲಿದ್ದಾರೆ. ದ.ಕ. ಜಿಲ್ಲೆಯಿಂದ ಸುಮಾರು 2000 ಮಂದಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.
ದಾದ್ರಿಯಲ್ಲಿ ದನದ ಮಾಂಸದ ಅಡುಗೆ ತಯಾರಿಸಿದ ಗುಮಾನಿ ಮೇಲೆ ಮುಸ್ಲಿಂ ಕುಟುಂಬದ ಮೇಲಿನ ದಾಳಿ, ಹೈದರಾಬಾದ್‌ನ ರೋಹಿತ್ ವೇಮುಲ ಸಾಂಸ್ಥಿಕ ಹತ್ಯೆ, ಜೆಎನ್‌ಯುವಿನಲ್ಲಿ ಪ್ರಗತಿಪರ ವಿದ್ಯಾರ್ಥಿ ಚಳವಳಿಯ ನಾಯಕರ ಮೇಲಿನ ದಾಳಿ, ಗುಜರಾತಿನ ಊನದಲ್ಲಿ ನಡೆದ ದಲಿತರ ಮೇಲಿನ ದಾಳಿಗಳು, ಉಡುಪಿಯ ಪ್ರವೀಣ್ ಪೂಜಾರಿ ಪ್ರಕರಣ ಸಮಾಜದ ಬಲಾಢ್ಯ ಬಲಪಂಥೀಯ ಶಕ್ತಿಗಳು ನಡೆಸುತ್ತಿರುವ ದಮನಗಳಾಗಿವೆ. ಪ್ರಜಾತಂತ್ರದಲ್ಲಿ ವಿಶ್ವಾಸವಿಟ್ಟಿರುವ ದೇಶದಲ್ಲಿ ಕೆಲ ಶಕ್ತಿಗಳು ಮನುವಾದ, ಮನುಸ್ಮತಿಯನ್ನು ಆಚರಣೆಗೆ ತರಲು ನಡೆಸುತ್ತಿರುವ ವ್ಯವಸ್ಥಿಯ ಪಿತೂರಿಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಜಾಥಾ ನಿರಂತರವಾಗಿ ಮುಂದುವರಿಯಲಿದೆ ಎಂದು ಅವರು ಹೇಳಿದರು.
100ಕ್ಕೂ ಅಧಿಕ ಸಂಘಟನೆಗಳು, ಚಳವಳಿಗಳನ್ನು ಒಳಗೊಂಡ ಈ ಹೋರಾಟ ಕೇವಲ ಪ್ರತಿಭಟನೆ ಮಾತ್ರವಲ್ಲ, ಇದು ಸಾಮಾಜಿಕ ಪರಿವರ್ತನೆಗೊಂದು ದಾರಿ ಎಂದು ಹೋರಾಟಗಾರ ಮುನೀರ್ ಕಾಟಿಪಳ್ಳ ಅಭಿಪ್ರಾಯಿಸಿದರು.
ಈ ಜಾಥಾವು ಹೊಸ ಮನ್ವಂತರದ ಸ್ಥಾಪನೆ ಎಂದು ಹಿರಿಯ ವಕೀಲರಾದ ದಯಾನಂದ ಕೋಟ್ಯಾನ್ ಅಭಿಪ್ರಾಯಿಸಿದರು.
ಗೋಷ್ಠಿಯಲ್ಲಿ ಪಿ. ಕೇಶವ, ನಿರ್ಮಲ್ ಕುಮಾರ್, ವಿಶು ಕುಮಾರ್, ರಘು ಎಕ್ಕಾರ್, ಗುಲಾಬಿ ಬಿಳಿಮಲೆ, ಚರಣ್ ಶೆಟ್ಟಿ, ವಾಸುದೇವ ಬೆಳ್ಳೆ, ಅಶೋಕ್ ಕೊಂಚಾಡಿ ಉಪಸ್ಥಿತರಿದ್ದರು.







