ಮೆಲ್ಕಾರ್: ಅಭಿವೃದ್ಧಿ ಕಾಮಗಾರಿಗೆ ಮತ್ತೆ ಚಾಲನೆ

ಬಂಟ್ವಾಳ, ಅ. 6: ಮೆಲ್ಕಾರ್ ಅಭಿವೃದ್ಧಿ ಕಾಮಗಾರಿಗೆ ಮತ್ತೆ ಚಾಲನೆ ದೊರೆತಿದ್ದು ಗುರುವಾರ ಮೆಲ್ಕಾರ್ ಜಂಕ್ಷನ್‌ನಿಂದ ಎರಡು ಕಿ.ಮೀ.ವರೆಗಿನ ರಸ್ತೆಯನ್ನು ಅಗಲೀಕರಣಗೊಳಿಸುವ ನಿಟ್ಟಿನಲ್ಲಿ ಬಂಟ್ವಾಳ ಪುರಸಬೆ ಪೊಲೀಸರ ಸಹಕಾರದೊಂದಿಗೆ ರಸ್ತೆ ಬದಿಯನ್ನು ಅಕ್ರಮಿಸಿದ್ದ ಅಂಗಡಿಗಳ ಸಾಮಾಗ್ರಿಗಳನ್ನು ತೆರವು ಕಾರ್ಯಾಚರಣೆ ನಡೆಯಿತು.
ಮೆಲ್ಕಾರ್‌ನಲ್ಲಿರುವ ಮೀನು ಮತ್ತು ತರಕಾರಿ ಮಾರುಕಟ್ಟೆಯ ಮುಂಭಾಗದಲ್ಲಿ ರಸ್ತೆಯನ್ನು ಅಕ್ರಮಿಸಿಕೊಂಡು ಅಂಗಡಿದಾರರು ಮಾರಾಟದ ಸಾಮಾನುಗಳನ್ನು ಫುಟ್‌ಪಾತ್‌ನಲ್ಲಿಟ್ಟಿದ್ದರು. ಮತ್ತು ಅಂಗಡಿಗಳ ಮಾಡುಗಳು ಕೂಡಾ ಫುಟ್‌ಪಾತನ್ನು ಅಕ್ರಮಿಸಿತ್ತು. ಇದೀಗ ಮೆಲ್ಕಾರ್‌ನ ಜಂಕ್ಷನ್‌ನಿಂದ ಸಜೀಪವರೆಗಿನ ರಸ್ತೆ ಅಗಲೀಕರಣ ಕಾಮಗಾರಿ ಮತ್ತೆ ಪುನಾರಂಭಗೊಂಡಿರುವ ಹಿನ್ನೆಲೆಯಲ್ಲಿ ಈ ತೆರವು ಕಾರ್ಯಾಚರಣೆ ಆರಂಭಗೊಂಡಿದೆ.
ಪುರಸಭೆ ಮುಖ್ಯಾಧಿಕಾರಿ ಸುಧಾಕರ್, ಆರೋಗ್ಯಾಧಿಕಾರಿ ಪ್ರಸಾದ್ ಬಂಟ್ವಾಳ ಪೊಲೀಸರ ಸಹಕಾರದೊಂದಿಗೆ ಈ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಟ್ರಾಫಿಕ್ ಎಸ್ಸೈ ಚಂದ್ರಶೇಖರಯ್ಯ ಹಾಜರಿದ್ದು ಅಗಲೀಕರಣಕ್ಕಾಗಿ ರಸ್ತೆಯಲ್ಲಿ ಗುರುತು ಹಾಕಿರುವ ಕಡೆಗಳಲ್ಲಿ ಜೆಸಿಬಿ ಮೂಲಕ ತೆರವು ಕಾರ್ಯಾಚರಣೆಗೆ ಮಾರ್ಗದರ್ಶನ ನೀಡಿದರು.
ಮೆಲ್ಕಾರ್ ಅಭಿವೃದ್ಧಿ ಸಮಿತಿಯ ಬೇಡಿಕೆಯಂತೆ ಸಚಿವ ರಮಾನಾಥ ರೈ ಮುತುವರ್ಜಿಯಿಂದ ರಸ್ತೆ ಅಗಲೀಕರಣಕ್ಕೆ 2 ಕೋಟಿ ರೂ. ಅನುದಾನ ಮೀಸಲಿರಿಸಿದ್ದು ಕಾಮಗಾರಿ ಆರಂಭಗೊಂಡಿದೆ.







