ಸ್ಮೃತಿ ಇರಾನಿ ನಕಲಿ ಪದವಿ ವಿವಾದ :ದಾಖಲೆ ಸಲ್ಲಿಸುವಂತೆ ಚು.ಆಯೋಗಕ್ಕೆ ನ್ಯಾಯಾಲಯದ ನಿರ್ದೇಶ

ಹೊಸದಿಲ್ಲಿ,ಅ.6: ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು 2004ರ ಸಾರ್ವತ್ರಿಕ ಚುನಾವಣೆಗೆ ಸ್ಪರ್ಧಿಸಿದ್ದ ಸಂದರ್ಭ ತನ್ನ ವಿದ್ಯಾರ್ಹತೆ ಗೆ ಸಂಬಂಧಿಸಿದಂತೆ ಸಲ್ಲಿಸಿದ್ದ ಕೆಲವು ದಾಖಲೆಗಳನ್ನು ತನಗೆ ಒಪ್ಪಿಸುವಂತೆ ಇಲ್ಲಿಯ ಮಹಾನಗರ ನ್ಯಾಯಾಲಯವು ದಿಲ್ಲಿ ರಾಜ್ಯ ಚುನಾವಣಾ ಆಯೋಗಕ್ಕೆ ಗುರುವಾರ ಸೂಚಿಸಿದೆ. ಇರಾನಿ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಸುಳ್ಳು ಮಾಹಿತಿಗಳನ್ನು ನೀಡಿದ್ದಾರೆಂಬ ದೂರಿಗೆ ಸಂಬಂಧಿಸಿದಂತೆ ನ್ಯಾಯಾಲಯದ ನಿರ್ದೇಶ ಹೊರಬಿದ್ದಿದೆ.
ಇರಾನಿಯವರನ್ನು ಪ್ರಕರಣದಲ್ಲಿ ಆರೋಪಿಯಾಗಿ ನ್ಯಾಯಾಲಯಕ್ಕೆ ಕರೆಸಬೇಕೇ ಎಂಬ ಕುರಿತು ತನ್ನ ಆದೇಶವನ್ನು ಪ್ರಕಟಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿರುವ ನ್ಯಾ.ಹರ್ವಿಂದರ್ ಸಿಂಗ್ ಅವರು, ಈ ವಿಷಯದಲ್ಲಿ ಕೆಲವು ಸ್ಪಷ್ಟನೆಗಳು ಅಗತ್ಯವಾಗಿರುವ ಹಿನ್ನೆಲೆಯಲ್ಲಿ ದಾಖಲೆಗಳನ್ನು ಸಲ್ಲಿಸುವಂತೆ ಆಯೋಗದ ಅಧಿಕಾರಿಗಳಿಗೆ ನಿರ್ದೇಶ ನೀಡಿದರು.
ಇರಾನಿ ಅವರು 2004,2011 ಮತ್ತು 2014ರಲ್ಲಿ ತನ್ನ ಶಿಕ್ಷಣಾರ್ಹತೆಯ ಬಗ್ಗೆ ಆಯೋಗಕ್ಕೆ ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿಗಳನ್ನು ನೀಡಿದ್ದಾರೆ ಮತ್ತು ಈ ವಿಷಯದಲ್ಲಿ ಕಳವಳಗಳು ವ್ಯಕ್ತವಾಗಿದ್ದರೂ ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ ಎಂದು ಆರೋಪಿಸಿರುವ ದೂರುದಾರರಾಗಿರುವ ಫ್ರೀಲ್ಯಾನ್ಸ್ ಲೇಖಕ ಅಹ್ಮರ್ ಖಾನ್ ಅವರು, ಚುನಾವಣಾ ಅಭ್ಯರ್ಥಿ ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿಗಳನ್ನು ನೀಡುವುದು ಐಪಿಸಿ ಮತ್ತು ಜನತಾ ಪ್ರಾತಿನಿಧ್ಯ ಕಾಯ್ದೆಯಡಿ ಅಪರಾಧವಾಗಿದೆ ಎಂದು ವಾದಿಸಿದ್ದಾರೆ. ಈ ಅಪರಾಧಕ್ಕಾಗಿ ಆರು ತಿಂಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ.







