ಮುಸ್ಲಿಮ್ ಪ್ರಯಾಣಿಕನ ವಿರುದ್ಧ ಜನಾಂಗೀಯ ತಾರತಮ್ಯ: ಅಧಿಕಾರಿಗಳಿಗೆ ದೂರು

ಸಾಂಟಾ ಕ್ಲಾರಾ (ಕ್ಯಾಲಿಫೋರ್ನಿಯ), ಅ. 6: ಮುಸ್ಲಿಮ್ ಪ್ರಯಾಣಿಕರೊಬ್ಬರ ವಿರುದ್ಧ ಜನಾಂಗೀಯ ತಾರತಮ್ಯ ನಡೆಸಲಾಗಿದೆ ಎಂದು ಆರೋಪಿಸಿ ಮಾನವಹಕ್ಕುಗಳ ಸಂಘಟನೆಯೊಂದು ಸೌತ್‌ವೆಸ್ಟ್ ಏರ್‌ಲೈನ್ಸ್ ವಿರುದ್ಧ ಫೆಡರಲ್ ಅಧಿಕಾರಿಗಳಿಗೆ ದೂರು ನೀಡಿದೆ.
ಕೌನ್ಸಿಲ್ ಆನ್ ಅಮೆರಿಕನ್-ಇಸ್ಲಾಮಿಕ್ ರಿಲೇಶನ್ಸ್ ಸಂಘಟನೆಯು ಖೈರುಲ್ದೀನ್ ಮಖ್‌ಝೂಮಿ ಪರವಾಗಿ ಬುಧವಾರ ಸಾರಿಗೆ ಇಲಾಖೆಗೆ ದೂರು ಸಲ್ಲಿಸಿದೆ.
ಬರ್ಕ್‌ಲೇಯ ಕ್ಯಾಲಿಫೋರ್ನಿಯ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಮಖ್‌ಝೂಮಿ ಎಪ್ರಿಲ್‌ನಲ್ಲಿ ಲಾಸ್ ಏಂಜಲಿಸ್‌ನಿಂದ ಓಕ್‌ಲ್ಯಾಂಡ್‌ಗೆ ಪ್ರಯಾಣಿಸಲು ಸೌತ್‌ವೆಸ್ಟ್ ಏರ್‌ಲೈನ್ಸ್ ವಿಮಾನವನ್ನು ಹತ್ತಿದ್ದರು. ಅವರು ಟೆಲಿಫೋನ್‌ನಲ್ಲಿ ಅರೇಬಿಕ್ ಭಾಷೆಯಲ್ಲಿ ಮಾತನಾಡುತ್ತಿದ್ದ ವೇಳೆ ‘ಐಸಿಸ್’ ಎಂಬುದಾಗಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ವಿಮಾನದಿಂದ ಹೊರದಬ್ಬಲಾಗಿತ್ತು.
ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಬಾನ್ ಕಿ ಮೂನ್ ಭಾಗವಹಿಸಿದ್ದ ಸಭೆಯೊಂದರಲ್ಲಿ ತಾನು ಮಾಡಿದ್ದ ಭಾಷಣದ ಬಗ್ಗೆ ತಾನು ಚಿಕ್ಕಪ್ಪನೊಂದಿಗೆ ಮಾತನಾಡುತ್ತಿದ್ದೆ ಹಾಗೂ ಈ ಸಂದರ್ಭದಲ್ಲಿ ಐಸಿಸ್ ಬಗ್ಗೆ ಪ್ರಸ್ತಾಪ ಬಂದಿತ್ತು ಎಂದು ಮಖ್‌ಝೂಮಿ ಹೇಳಿದ್ದಾರೆ.
ಮಖ್‌ಝೂಮಿ ಭಯೋತ್ಪಾದನೆ ಸಂಘಟನೆಯ ಹೆಸರನ್ನು ಹೇಳುತ್ತಿರುವುದನ್ನು ಅರಬ್ಬಿ ಮಾತನಾಡುವ ಇನ್ನೋರ್ವ ಪ್ರಯಾಣಿಕ ಕೇಳಿಸಿಕೊಂಡು ಸಿಬ್ಬಂದಿಗೆ ವರದಿ ಮಾಡಿದ್ದಾರೆ ಎಂದು ಏರ್‌ಲೈನ್ ಹೇಳಿದೆ.





