ಡಿಸೆಂಬರ್‌ನೊಳಗೆ ಬಗರ್‌ಹುಕುಂ ಅರ್ಜಿಗಳ ವಿಲೇವಾರಿ: ಸಚಿವ ಕಾಗೋಡು
ಪ್ರಗತಿ ಪರಿಶೀಲನಾ ಸಭೆ

ತೀರ್ಹಳ್ಳಿ, ಅ.6: ಅರಣ್ಯ ಹಕ್ಕು, ಬಗರ್‌ಹುಕುಂ ಸಂಬಂಧಪಟ್ಟ ಎಲ್ಲಾ ಅರ್ಜಿಗಳನ್ನು ಡಿಸೆಂಬರ್ ತಿಂಗಳ ಅಂತ್ಯದ ಒಳಗಾಗಿ ವಿಲೇವಾರಿ ಮಾಡಬೇಕು ಎಂದು ರಾಜ್ಯ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಯಾವುದೇ ರೈತರು ಅರ್ಜಿಗಳನ್ನು ಕೊಟ್ಟಾಗ ಯಾವ ಕಾರಣಕ್ಕೂ ಸಬೂಬು ನೀಡಿ ತಿರಸ್ಕರಿಸ ಬಾರದು. ಒಂದು ವೇಳೆ ಅರ್ಜಿಗಳು ತಿರಸ್ಕರಿಸಲು ಯೋಗ್ಯ ಎಂದಾಗಲೂ ಕೂಡ ಅವುಗಳನ್ನು ಸ್ವೀಕರಿಸಿ ಪುನಃ ಪರಿಶೀಲನೆಗೆ ಅವಕಾಶ ಮಾಡಿಕೊಡಬೇಕು ಎಂದು ಹೇಳಿದರು. ಬಹಳಷ್ಟು ರೈತರಿಗೆ ಈಗಲೂ ಅರ್ಜಿ ನೀಡಬೇಕೆಂಬ ಪರಿಜ್ಞಾನ ಇದ್ದಂತಿಲ್ಲ. ಅಂತಹ ಸಂದರ್ಭದಲ್ಲಿ ಆಯಾ ವ್ಯಾಪ್ತಿಗೆೆ ಸಂಬಂಧಪಟ್ಟ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮ ಲೆಕ್ಕಿಗರು ಸ್ವತಃ ತೆರಳಿ ಅರ್ಜಿಗಳನ್ನು ಸ್ವೀಕರಿಸಬೇಕೆಂದು ನುಡಿದರು.
ಪ್ರತಿ ಗ್ರಾಮಗಳಲ್ಲಿ 94ಸಿ ಅರ್ಜಿಯ ಪ್ರಕಾರ ಗ್ರಾಮ ಪಂಚಾಯತ್ ಮಟ್ಟದಲ್ಲಿ 50ರಿ ಂದ 60ರ ನಿವೇಶನವನ್ನು ಕಂದಾಯ ಭೂಮಿಯಲ್ಲಿ ನೀಡಬಹುದಾಗಿದೆ. ಅಲ್ಲದೆ ವಾರಕ್ಕೊಮ್ಮೆ ಕಡ್ಡಾಯವಾಗಿ ಬಗರ್‌ಹುಕುಂ ಅರ್ಜಿ ಪರಿಶೀಲನಾ ಸಭೆ ಕರೆಯಲೇ ಬೇಕು ಎಂದ ಬಗರ್‌ಹುಕುಂ ಸಮಿತಿ ಅಧ್ಯಕ್ಷರಿಗೆ ತಾಕೀತು ಮಾಡಿದರು. ಇದೇ ಸಂದರ್ಭದಲ್ಲಿ ತಾಲೂಕಿನಲ್ಲಿ ಸುಮಾರು 17,237 94ಸಿ, 9,106 ಬಗರ್‌ಹುಕುಂ ಅರ್ಜಿಗಳು, 6,351 ಅರಣ್ಯಹಕ್ಕು ಅರ್ಜಿಗಳು ವಿಲೇವಾರಿಗೆ ಬಂದಿದ್ದು, ಪರಿಶೀಲನಾ ಕಾರ್ಯ ನಡೆಯುತ್ತಿದೆ. ತಾಲೂಕಿನ 120 ಗ್ರಾಮಗಳಲ್ಲಿ ಸ್ಮಶಾನ ನಿರ್ಮಾಣಕ್ಕೆ ನಿವೇಶನ ಗುರುತಿಸಲಾಗಿದೆ ಎಂದು ಉಪ ವಿಭಾಗಾಧಿಕಾರಿ ಕೃಷ್ಣಮೂರ್ತಿ ಸಭೆಗೆ ಮಾಹಿತಿ ನೀಡಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಪಿ. ವಿ. ಇಕ್ಕೇರಿ, ಜಿ.ಪಂ. ಕಾರ್ಯನಿರ್ವಹಣಾಧಿಕಾರಿ ರಾಕೇಶ್, ತಾಪಂ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಡಾ.ಮಂಜುನಾಥ್, ತಹಶೀಲ್ದಾರ್ ಲೋಕೇಶ್ವರಪ್ಪ, ಪಪಂ ಅಧ್ಯಕ್ಷ ಸಂದೇಶ್ ಜವಳಿ ಮುಂತಾದವರು ಉಪಸ್ಥಿತರಿದ್ದರು.







