ಮೂಡಿಗೆರೆ: ಕ್ಲಸ್ಟರ್‌ಮಟ್ಟದ ಪ್ರತಿಭಾ ಕಾರಂಜಿ

ಮೂಡಿಗೆರೆ, ಅ.6: ಸರಕಾರ ರಾಜ್ಯದ ಜನತೆಗೆ ಹತ್ತು ಹಲವು ಭಾಗ್ಯಗಳನ್ನು ನೀಡಿದೆ. ಆದರೆ ವಿದ್ಯಾರ್ಥಿಗಳಿಗೆ ಮಾತ್ರ ಭಾಗ್ಯದ ಕೊರತೆ ಉಂಟಾಗಿದೆ ಎಂದು ತಾಪಂ ಸದಸ್ಯ, ಮಾಜಿ ಅಧ್ಯಕ್ಷ ರಂಜನ್ ಅಜಿತ್‌ಕುಮಾರ್ ತಿಳಿಸಿದರು.
ತಾಲೂಕಿನ ಬಣಕಲ್ ಹೋಬಳಿಯ ಬಾನಹಳ್ಳಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪಲ್ಗುಣಿ ಕ್ಲಸ್ಟರ್‌ಮಟ್ಟದ ಹಿರಿಯ ಹಾಗೂ ಕಿರಿಯ ಶಾಲೆಗಳ ಪ್ರತಿಭಾಕಾರಂಜಿ 2016-17ನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿಯೊಬ್ಬರೂ ದೈಹಿಕವಾಗಿ ಪ್ರಬಲರಾಗಿ ಬೆಳೆಯಬೇಕು. ಅದಕ್ಕೆ ಕ್ರೀಡೆಗಳು ಸಹಕಾರಿ. ಸರಕಾರ ಪಾಠದ ನಡುವೆ ಒಂದು ಗಂಟೆಗಳ ಕಾಲ ಆಟದ ಭಾಗ್ಯವನ್ನು ನೀಡಿದಲ್ಲಿ ಆ ವಿದ್ಯಾರ್ಥಿಗಳಲ್ಲಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಲು ಸಾಧ್ಯವಾಗುತ್ತದೆ. ಪ್ರತಿಭಾ ಕಾರಂಜಿಗಳಿಗೆ ಸರಕಾರ ಹೆಚ್ಚಿನ ಅನುದಾನ ಬಿಡುಗಡೆ ಮಾಡುವ ಅಗತ್ಯತೆ ಇದೆ ಎಂದರು.
ತಾಪಂ ಅಧ್ಯಕ್ಷ ಕೆ.ಸಿ. ರತನ್ ಮಾತನಾಡಿ. ಇತ್ತೀಚಿನ ದಿನಗಳಲ್ಲಿ ಕೇವಲ ಪಠ ್ಯಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಆಟೋಟಕ್ಕೆ ಪೋಷಕರ ಪ್ರೋತ್ಸಾಹ ಕಡಿಮೆಯಿದೆ. ಈ ಧೋರಣೆ ಬದಲಾಗಬೇಕು. ಎಲ್ಲ ಸರಕಾರಿ ಶಾಲೆಗಳಲ್ಲಿ ದೈಹಿಕ ಶಿಕ್ಷಕರ ನೇಮಕಾತಿಯಾಗಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರಕಾರವನ್ನು ಒತ್ತಾಯಿಸುವುದಾಗಿ ತಿಳಿಸಿದರು.
ಜಿಪಂ ಸದಸ್ಯ ಶಾಮಣ್ಣ ಬಣಕಲ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ರವಿ ವಹಿಸಿದ್ದರು.







