ಜನರ ಪ್ರೀತಿ ವಿಶ್ವಾಸ ಸಂಪಾದಿಸಿದರೆ ರಾಜಕಾರಣದಲ್ಲಿ ಯಶಸ್ಸು ಖಚಿತ: ಧರ್ಮೇಗೌಡ

ಚಿಕ್ಕಮಗಳೂರು, ಅ.6: ಪ್ರೀತಿ ವಿಶ್ವಾಸದ ಮೂಲಕ ಸಾಮಾನ್ಯ ಜನರ ನಾಡಿ ಮಿಡಿತ ಅರ್ಥೈಸಿಕೊಂಡು ರಾಜಕಾರಣ ಮಾಡಿದರೆ ಯಶಸ್ಸು ಖಚಿತ ಎಂದು ಮಾಜಿ ಶಾಸಕ ಎಸ್.ಎಲ್.ಧರ್ಮೇಗೌಡ ತಿಳಿಸಿದ್ದಾರೆ.
ಅವರು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷರಾಗಿ ಮರು ಆಯ್ಕೆಯಾದ ಚಂದಯ್ಯ ಅವರನ್ನು ಅಭಿನಂದಿಸಿ ಮಾತನಾಡಿದರು. ಚಂದಯ್ಯ ಅವರು ಬಯಲುಸೀಮೆ ಭಾಗದ ಜನರ ನಾಡಿ ಮಿಡಿತವನ್ನು ಅರ್ಥೈಸಿಕೊಂಡು ಸರಳ ವ್ಯಕ್ತಿತ್ವದ ಮೂಲಕ ಸಾಮಾನ್ಯ ಜನರ ಕಷ್ಟ ಸುಖಕ್ಕೆ ಸ್ಪಂದಿಸುತ್ತಾ ಬಂದಿರುವ ಪರಿಣಾಮ ಆ ಭಾಗದಲ್ಲಿ ಗ್ರಾಪಂ, ತಾಪಂ ಸೇರಿದಂತೆ ಪಕ್ಷದ ಹಲವರು ಜನಪ್ರತಿನಿಧಿಯಾಗಿ ಆಯ್ಕೆಯಾಗಲು ಸಹಕಾರಿಯಾಗಿದ್ದಾರೆ ಎಂದು ಹೇಳಿದರು.
ಸೌಮ್ಯ ಸ್ವಭಾವದಿಂದಲೇ ಗ್ರಾಮೀಣ ಭಾಗದಲ್ಲಿ ಬಡವರಿಗೆ ಕೈಲಾದ ಸಮಾಜ ಸೇವೆ ಮಾಡಿದರೆ ರಾಜಕಾರಣದಲ್ಲಿ ಉನ್ನತವಾಗಿ ಬೆಳೆಯಲು ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಸಂಘಟನೆ ಬಲಪಡಿಸಬೇಕು ಎಂರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಎಚ್. ದೇವರಾಜ್ ಮಾತನಾಡಿ, ಪಕ್ಷದ ತತ್ವ ಸಿದ್ಧಾಂತವನ್ನು ಪಾಲಿಸಿಕೊಂಡು ಸಂವಿಧಾನಾತ್ಮಕವಾಗಿ ಎಲ್ಲ ಜಾತಿ, ಧರ್ಮದವರನ್ನು ಗುರುತಿಸಿ ಪಕ್ಷದಲ್ಲಿ ಸ್ಥಾನ ನೀಡಲಾಗಿದೆ. ಸಾಮಾಜಿಕ ನ್ಯಾಯದ ಪರಿಕಲ್ಪನೆಯಡಿ ಎಲ್ಲರನ್ನು ಒಂದೇ ಭಾವನೆಯಿಂದ ಕಂಡು ಪಕ್ಷವನ್ನು ಬಲವರ್ಧನೆ ಮಾಡಬೇಕು ಎಂದು ನುಡಿದರು.
ಕಾವೇರಿ ನೀರಿನ ವಿಚಾರದಲ್ಲಿ ರಾಷ್ಟ್ರೀಯ ನಾಯಕ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ತೆಗೆದುಕೊಂಡ ನಿರ್ಧಾರ ಸಮಂಜಸವಾಗಿದೆ ಎನ್ನುವುದಕ್ಕೆ ಪಕ್ಷಭೇದ ಮರೆತು ಎಲ್ಲ ಮುಖಂಡರು ಸ್ವಾಗತಿಸಿರುವುದೇ ಸಾಕ್ಷಿ ಎಂದರು.
ಜಿಲ್ಲಾಧ್ಯಕ್ಷ ಎಚ್.ಎಸ್. ಮಂಜಪ್ಪ, ಚಂದ್ರಪ್ಪ, ಕಾರ್ಯಾಧ್ಯಕ್ಷ ಎಂ.ಸಿ. ಅಶೋಕ್, ಹೊಲದಗದ್ದೆ ಗಿರೀಶ್, ಜ್ಯೋತಿ ಈಶ್ವರ್, ಪದ್ಮಾ ತಿಮ್ಮೇಗೌಡ, ಬೈರೇಗೌಡ, ಸೋಮೇಗೌಡ, ಜೈರಾಜ್ ಅರಸ್, ಡಿ.ಕೆ. ಚಂದ್ರೇಗೌಡ, ನಾಗೇಶ್‌ರಾಜ್, ಅಣ್ಣಪ್ಪಶೆಟ್ಟಿ, ಚಂದ್ರಶೇಖರ್ ಮತ್ತಿತರರಿದ್ದರು.







