ಗ್ರಾಮೀಣ ಭಾಗದ ಕ್ರೀಡಾಪ್ರತಿಭೆಗಳನ್ನು ಗುರುತಿಸಬೇಕು:ವೀಣಾ
ಮಡಿಕೇರಿ ದಸರಾ ಕ್ರೀಡಾಕೂಟ

ಮಡಿಕೇರಿ, ಅ.6: ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಪಠ್ಯ ಚಟುವಟಿಕೆಗಳೊಂದಿಗೆ ಕ್ರೀಡಾ ಚಟುವಟಿಕೆಗಳ ಬಗ್ಗೆಯೂ ಆಸಕ್ತಿ ಮೂಡಿಸುವ ಮೂಲಕ ಕೊಡಗು ಕ್ರೀಡಾ ಜಿಲ್ಲೆ ಎನ್ನುವುದನ್ನು ಸಾರ್ಥಕ ಪಡಿಸಬೇಕೆಂದು ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಕರೆ ನೀಡಿದರು.
ಮಡಿಕೇರಿ ನಗರ ದಸರಾ ಸಮಿತಿಯ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ-2016ರ ಕ್ರೀಡಾ ಜ್ಯೋತಿಯನ್ನು ಬೆಳಗಿಸಿ ಅವರು ಮಾತನಾಡಿದರು.
ಮಕ್ಕಳ ಕ್ರೀಡಾ ಆಸಕ್ತಿಯನ್ನು ಗುರುತಿಸಿ ಅವರಿಗೆ ಶಿಕ್ಷಕರು ಮತ್ತು ಪೋಷಕರು ಅಗತ್ಯ ಪ್ರೋತ್ಸಾಹ ನೀಡಬೇಕೆಂದ ವೀಣಾ ಅಚ್ಚಯ್ಯ, ಮುಂಬರುವ ದಿನಗಳಲ್ಲಿ ದಸರಾ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಕ್ರೀಡಾ ಪ್ರತಿಭೆಗಳು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡುವಂತಾಗಲಿ ಎಂದು ಹಾರೈಸಿದರು.
ದಸರಾ ಸಮಿತಿ ಅಧ್ಯಕ್ಷ ಹಾಗೂ ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಮಾತನಾಡಿ, ಮಡಿಕೇರಿ ದಸರಾ ಪ್ರಯುಕ್ತ ನಡೆಯುತ್ತಿರುವ ಕ್ರೀಡಾಕೂಟದ ಮೂಲಕ ಕ್ರೀಡಾ ಪ್ರತಿಭೆೆಗಳು ಬೆಳಕಿಗೆ ಬರುವಂತಾಗಬೇಕು ಎಂದರು. ಸಮಿತಿಯ ಕಾರ್ಯಾಧ್ಯಕ್ಷ ಮಹೇಶ್ ಜೈನಿ ಮಾತನಾಡಿ, ಮಡಿಕೇರಿ ದಸರಾ ಉತ್ಸವದ ಆಯೋಜನೆಗೆ ರಾಜ್ಯ ಸರಕಾರ 75 ಲಕ್ಷ ರೂ. ಅನುದಾನವನ್ನು ಒದಗಿಸಿದ್ದು, ಅದರ ನೆರವಿನಿಂದ ಉತ್ಸವ ಯಶಸ್ವಿಯಾಗಿ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಷ್ಟ್ರೀಯ ಮಹಿಳಾ ಹಾಕಿ ತಂಡದ ಸದಸ್ಯರಾಗಿ ಆಯ್ಕೆಯಾಗಿರುವ ನಿಡುಮಂಡ ನಿಶಾ ನಂಜಪ್ಪ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ದಸರಾ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಕೆ.ಎಂ. ಗಣೇಶ್, ಪ್ರಧಾನ ಕಾರ್ಯದರ್ಶಿ ಎ.ಸಿ. ಚುಮ್ಮಿ ದೇವಯ್ಯ, ನಗರ ಸಭಾ ಮಾಜಿ ಅಧ್ಯಕ್ಷ ಪಿ.ಡಿ.ಪೊನ್ನಪ್ಪ, ನಗರ ಸಭಾ ಮಾಜಿ ಉಪಾಧ್ಯಕ್ಷೆ ಲೀಲಾ ಶೇಷಮ್ಮ, ದಸರಾ ಕ್ರೀಡಾ ಸಮಿತಿ ಅಧ್ಯಕ್ಷ ಸದಾ ಮುದ್ದಪ್ಪ, ಉಪಾಧ್ಯಕ್ಷರಾದ ಸುನಿಲ್ ನಂಜಪ್ಪ, ವೇಣು ಕುಮಾರ್, ಪ್ರಧಾನ ಕಾರ್ಯದರ್ಶಿ ಕಪಿಲ್ ಕುಮಾರ್, ಕಾರ್ಯದರ್ಶಿ ವಿನೋದ್ ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ವಿವಿಧ ಆಟೋಟ ಸ್ಪರ್ಧೆ:
ಉದ್ಘಾಟನಾ ಕಾರ್ಯಕ್ರಮದ ಬಳಿಕ ವಿವಿಧ ವಯೋಮಾನದ ವಿಭಾಗಗಳಲ್ಲಿ ಓಟದ ಸ್ಪರ್ಧೆ, ಥ್ರೋಬಾಲ್, ಫುಟ್ಬಾಲ್, ಭಾರದ ಗುಂಡು ಎಸೆತ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆದವು. ಪತ್ರಕರ್ತರು ಕೂಡ ಕ್ರೀಡಾ ಕೂಟದಲ್ಲಿ ಪಾಲ್ಗೊಂಡು ಮಿಂಚಿದರು.
ಉಚಿತ ಆಯುರ್ವೇದ ತಪಾಸಣಾ ಶಿಬಿರ ಸೋಮವಾರಪೇಟೆ, ಅ.6: ಜಿಪಂ, ಆಯುಷ್ ಇಲಾಖೆ ಹಾಗೂ ಸರಕಾರಿ ಹೋಮಿಯೋಪತಿ ಮತ್ತು ಆಯುರ್ವೇದ ಆಸ್ಪತ್ರೆಯ ಸಹಯೋಗದಲ್ಲಿ ಬಸವನಹಳ್ಳಿ ಗಿರಿಜನ ಹಾಡಿಯಲ್ಲಿ ಗಿರಿಜನರಿಗೆ ಉಚಿತ ಆಯುರ್ವೇದ ತಪಾಸಣಾ ಶಿಬಿರ ನಡೆಯಿತು.
ಶಿಬಿರವನ್ನು ಗುಡ್ಡೆಹೊಸೂರು ಗ್ರಾಪಂ ಅಧ್ಯಕ್ಷೆ ಭಾರತಿ ಉದ್ಘಾಟಿಸಿದರು. ತಾಪಂ ಸದಸ್ಯೆ ಪುಷ್ಪಾ, ಗ್ರಾಪಂ ಸದಸ್ಯರುಗಳಾದ ಶಶಿ ಭೀಮಯ್ಯ, ಶಂಕರಪ್ಪ, ಆಯುಷ್ ಅಧಿಕಾರಿ ಡಾ. ರಾಮಚಂದ್ರ ಅವರುಗಳು ಉಪಸ್ಥಿತರಿದ್ದರು.
ಡಾ. ಅನಿಲ್, ಡಾ. ಸರಸ್ವತಿ ಅವರುಗಳ ತಂಡ ಗಿರಿಜನರನ್ನು ತಪಾಸಣೆಗೆ ಒಳಪಡಿಸಿ ಚಿಕಿತ್ಸೆ ನೀಡಿದರು.







