ಆಶ್ರಮ ಶಾಲೆ, ವಿದ್ಯಾರ್ಥಿ ನಿಲಯಗಳಿಗೆ ಕಂಪ್ಯೂಟರ್ ವಿತರಣೆ

ಮಡಿಕೇರಿ, ಅ.6 : ಸಮಗ್ರ ಗಿರಿಜನ ಯೋಜನಾ ಇಲಾಖೆ(ಐಟಿಡಿಪಿ) ವ್ಯಾಪ್ತಿಯ 11 ಆಶ್ರಮ ಶಾಲೆಗಳು ಹಾಗೂ 8 ವಿದ್ಯಾರ್ಥಿ ನಿಲಯಗಳಿಗೆ ಇನ್ಫೋಸಿಸ್ ಫೌಂಡೇಶನ್ ವತಿಯಿಂದ ನೀಡಲಾಗಿರುವ 53 ಕಂಪ್ಯೂಟರ್‌ಗಳನ್ನು ಜಿಪಂ ಸಿಇಒ ಚಾರುಲತಾ ಸೋಮಲ್ ವಿತರಿಸಿದರು. ನಗರದ ಡಿ.ದೇವರಾಜ ಅರಸು ಭವನದಲ್ಲಿ ಗುರುವಾರ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ, ಪ್ರಬಂಧ ಸ್ಪರ್ಧೆ, ರಸಪ್ರಶ್ನೆ ಕಾರ್ಯಕ್ರಮ, ಆಶುಭಾಷಣ ಸ್ಪರ್ಧೆ ಕಾರ್ಯಕ್ರಮ ಉದ್ಘಾಟನೆಗೂ ಮೊದಲು ಸಾಂಕೇತಿಕವಾಗಿ ಕಂಪ್ಯೂಟರ್‌ಗಳನ್ನು ವಿತರಿಸಲಾಯಿತು. ಬಳಿಕ ಮಾತನಾಡಿದ ಚಾರುಲತಾ ಸೋಮಲ್, ಆಶ್ರಮ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸುವತ್ತ ವಿಶೇಷ ಆಸಕ್ತಿ ವಹಿಸಬೇಕಿದೆ. ಜೊತೆಗೆ ವಿದ್ಯಾರ್ಥಿಗಳು ಕಡ್ಡಾಯವಾಗಿ ನಿಲಯದಲ್ಲಿದ್ದು, ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ಹರಿಸುವಂತಾಗುವ ನಿಟ್ಟಿನಲ್ಲಿ ಶಿಕ್ಷಕರ ಮತ್ತು ಪೋಷಕರ ಜವಾಬ್ದಾರಿ ಮಹತ್ತರವಾಗಿದೆ ಎಂದು ಅವರು ತಿಳಿಸಿದರು. ಆಶ್ರಮ ಶಾಲೆಗಳಲ್ಲಿ ಶೈಕ್ಷಣಿಕ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ನಲಿಕಲಿ ತರಬೇತಿ, ಕಾರ್ಟೂನ್ ಮಾದರಿಯ ಶಿಕ್ಷಣ ಹೀಗೆ ನಾನಾ ರೀತಿಯ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕೆಲವು ಆಶ್ರಮ ಶಾಲೆಗಳಲ್ಲಿ ಕ್ವಿಝ್ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಬೇಕು ಎಂಬ ಉದ್ದೇಶದಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಇದರ ಉಪಯೋಗ ಗಿರಿಜನ ಮಕ್ಕಳಿಗೆ ತಲುಪಬೇಕು ಎಂದು ಸಿಇಒ ನುಡಿದರು.
ಬಿಸಿಎಂ ಇಲಾಖೆ ಅಧಿಕಾರಿ ಕೆ.ವಿ.ಸುರೇಶ್ ಅವರು ಮಾತನಾಡಿ, ಆಶ್ರಮ ಶಾಲೆಗಳಲ್ಲಿ ಮಕ್ಕಳಿಗೆ ಕಲಿಕೆಗೆ ಒತ್ತು ನೀಡಬೇಕು ಎಂಬ ಉದ್ದೇಶದಿಂದ ಹಲವು ಶೈಕ್ಷಣಿಕ ಚಟುವಟಿಕೆಗಳನ್ನು ಜಾರಿಗೊಳಿಸಲಾಗಿದೆ. ಅವುಗಳ ಪ್ರಯೋಜನ ಪಡೆದು ಶೈಕ್ಷಣಿಕವಾಗಿ ಬೆಳವಣಿಗೆ ಸಾಧಿಸಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು. ಸಮಗ್ರ ಗಿರಿಜನ ಯೋಜನಾ ಅಧಿಕಾರಿ ಕೆ.ಎಚ್.ಸತೀಶ್ ಅವರು ಮಾತನಾಡಿ, ಆಶ್ರಮ ಶಾಲೆಗಳಲ್ಲಿ ಶಿಕ್ಷಣ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಶಿಕ್ಷಕರು ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಿದೆ ಎಂದು ಅವರು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಐಟಿಡಿಪಿ ಇಲಾಖೆಯ ರಂಗನಾಥ್, ರಜನಿಕಾಂತ್, ನಿಂಗರಾಜು, ಆಶ್ರಮ ಶಾಲೆಗಳ ಪ್ರಾಂಶುಪಾಲರು, ನಿಲಯ ಮೇಲ್ವಿಚಾರಕರು ಮತ್ತಿತರರು ಉಪಸ್ಥಿತರಿದ್ದರು.







