ಇಸ್ರೇಲ್‌ನಿಂದ ವಿಶ್ವಾಸ ದ್ರೋಹ: ಅಮೆರಿಕ
ಪಶ್ಚಿಮ ದಂಡೆಯಲ್ಲಿ ನೂರಾರು ಮನೆಗಳ ನಿರ್ಮಾಣಕ್ಕೆ ಯೋಜನೆ

ವಾಶಿಂಗ್ಟನ್, ಅ. 6: ಪಶ್ಚಿಮ ದಂಡೆಯ ತೀರಾ ಒಳಗೆ ನೂರಾರು ಹೊಸ ಮನೆಗಳನ್ನು ನಿರ್ಮಿಸಲು ಇಸ್ರೇಲ್ ತೆಗೆದುಕೊಂಡ ನಿರ್ಧಾರವನ್ನು ಬುಧವಾರ ಟೀಕಿಸಿರುವ ಅಮೆರಿಕ, ಇಸ್ರೇಲ್ ವಿಶ್ವಾಸ ದ್ರೋಹ ಮಾಡಿದೆ ಎಂದು ಆರೋಪಿಸಿದೆ.
ಇಸ್ರೇಲ್‌ಗೆ 38 ಬಿಲಿಯ ಡಾಲರ್ ಸೇನಾ ನೆರವು ನೀಡುವ ಪ್ರಸ್ತಾಪವನ್ನು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಈಗಾಗಲೇ ಅಂಗೀಕರಿಸಿರುವುದನ್ನು ಸ್ಮರಿಸಬಹುದಾಗಿದೆ. ಅದೂ ಅಲ್ಲದೆ, ಇತ್ತೀಚೆಗೆ ಮಾಜಿ ಅಧ್ಯಕ್ಷ ಶಿಮೋನ್ ಪೆರೆಸ್‌ರ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳುವುದಕ್ಕಾಗಿ ಜೆರುಸಲೇಂಗೂ ಹೋಗಿ ಬಂದಿದ್ದರು.
ಇಸ್ರೇಲ್‌ಗಿಂತ ಜೋರ್ಡಾನ್‌ಗೆ ಹೆಚ್ಚು ಹತ್ತಿರವಾಗಿರುವ ನೆಲದಲ್ಲಿ 300 ಮನೆಗಳನ್ನು ನಿರ್ಮಿಸುವ ಇಸ್ರೇಲ್‌ನ ಯೋಜನೆಯನ್ನು ಈಗ ಶ್ವೇತಭವನ ಟೀಕಿಸಿದೆ.
ಈ ನಿರ್ಧಾರವು ಈಗಾಗಲೇ ಮರೀಚಿಕೆಯಾಗಿರುವ ಮಧ್ಯಪ್ರಾಚ್ಯ ಶಾಂತಿ ಮತ್ತು ಇಸ್ರೇಲ್‌ನ ಸ್ವಂತ ಭದ್ರತೆಯನ್ನೂ ಅಪಾಯಕ್ಕೀಡುಮಾಡಿದೆ ಎಂದು ಎಚ್ಚರಿಸಿರುವ ಪತ್ರಿಕಾ ಕಾರ್ಯದರ್ಶಿ ಜೋಶ್ ಅರ್ನೆಸ್ಟ್, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಭರವಸೆಯನ್ನು ಇದು ಪ್ರಶ್ನಿಸಿದೆ ಎಂದಿದ್ದಾರೆ.
‘‘ನಮಗೆ ಇಸ್ರೇಲ್ ಸರಕಾರ ಬಹಿರಂಗವಾಗಿ ಭರವಸೆಗಳನ್ನು ನೀಡಿತ್ತು. ಆದರೆ, ಅದರ ಈಗಿನ ನಿರ್ಧಾರ ಅದಕ್ಕೆ ವಿರುದ್ಧವಾಗಿದೆ’’ ಎಂದರು.
ಮುಂದಿನ ವರ್ಷದ ಜನವರಿಯಲ್ಲಿ ಒಬಾಮ ಅಧಿಕಾರದಿಂದ ಕೆಳಗಿಳಿಯುವ ಮೊದಲು, ಮಧ್ಯಪ್ರಾಚ್ಯ ಶಾಂತಿ ಪ್ರಕ್ರಿಯೆಯನ್ನು ಹಳಿಗೆ ತರುವ ಅಂತಿಮ ಪ್ರಯತ್ನದಲ್ಲಿ ಶ್ವೇತಭವನ ಇರುವಾಗ ಈ ಸಾಮಾನ್ಯಕ್ಕಿಂತ ತೀಕ್ಷ್ಣ ಹೇಳಿಕೆಗಳು ಶ್ವೇತಭವನದಿಂದ ಹೊರಬಿದ್ದಿವೆ.
2014ರ ಎಪ್ರಿಲ್‌ನಲ್ಲಿ ಅಮೆರಿಕ ನೇತೃತ್ವದ ಕ್ರಮಗಳು ವಿಫಲವಾದ ಬಳಿಕ ಶಾಂತಿ ಸ್ಥಾಪನೆ ಪ್ರಯತ್ನಗಳು ಕೋಮಾ ಸ್ಥಿತಿಯಲ್ಲಿವೆ.







