ಪತ್ನಿ ಆತ್ಮಹತ್ಯೆ ಪ್ರಕರಣ: ಪತಿಗೆ 5 ವರ್ಷ ಕಠಿಣ ಶಿಕ್ಷೆ

ಮಂಗಳೂರು, ಅ.6: ಪತ್ನಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿ ಆತ್ಮಹತ್ಯೆಗೆ ಕಾರಣವಾಗಿದ್ದ ಪತಿಗೆ ನಗರದ ಒಂದನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರನ್ಯಾಯಾಲಯವು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಬೆಳ್ತಂಗಡಿ ತಾಲೂಕಿನ ಮದ್ಯಡ್ಕ ನಿವಾಸಿ ಅಹ್ಮದ್ ಹಮೀದ್ (35) ಎಂಬ ಅಪರಾಧಿಗೆ ಆತ್ಮಹತ್ಯೆಗೆ ಪ್ರೇರಣೆ ನೀಡಿದ ಅಪರಾಧದಲ್ಲಿ 5 ವರ್ಷ ಕಠಿಣ ಸಜೆ ಮತ್ತು 50 ಸಾವಿರ ರೂ. ದಂಡ ಹಾಗೂ ಮಾನಸಿಕ ಹಿಂಸೆ ಮತ್ತು ಕಿರುಕುಳ ನೀಡಿದ ಅಪರಾಧಕ್ಕೆ 2 ವರ್ಷ ಶಿಕ್ಷೆ ಹಾಗೂ 25,000 ರೂ. ದಂಡ ವಿಧಿಸಿ ನ್ಯಾಯಾಧೀಶ ಟಿ.ಎಂ.ಜೋಶಿ ತೀರ್ಪು ನೀಡಿದ್ದಾರೆ. ದಂಡ ತೆರಲು ತಪ್ಪಿದರೆ 9 ತಿಂಗಳು ಮತ್ತು 6 ತಿಂಗಳು ಹೆಚ್ಚುವರಿ ಶಿಕ್ಷೆ ಅನುಭವಿಸಲು ಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿದೆ.
ಘಟನೆಯ ಹಿನ್ನೆಲೆ
ಅಹ್ಮದ್ ಹಮೀದ್ ಎಂಬವರಿಗೆ 2007ರಲ್ಲಿ ಬಂಟ್ವಾಳದ ನೆಟ್ಲ ಮುಡ್ನೂರು ನಿವಾಸಿ ಹಾಜಿರಾ (20) ಎಂಬರೊಂದಿಗೆ ವಿವಾಹ ಮಾಡಿ ಕೊಡಲಾಗಿತ್ತು. ಮದುವೆಯಾದ ಒಂದೂವರೆ ವರ್ಷದ ಬಳಿಕ ದಂಪತಿಗೆ ಹೆಣ್ಣು ಮಗು ಜನಿಸಿತು. ಈ ನಡುವೆ ಹಮೀದ್ ತನ್ನ ಹೆಂಡತಿಗೆ ನಿರಂತರ ಕಿರುಕುಳ ಮತ್ತು ಮಾನಸಿಕ ಹಿಂದೆ ನೀಡುತ್ತಿದ್ದ. ಇದರಿಂದ ಬೇಸತ್ತ ಹಾಜಿರಾ ಮಗುವಿನೊಂದಿಗೆ ತನ್ನ ತಾಯಿಯ ಮನೆಗೆ ಬಂದಿದ್ದರು.
2011ರಲ್ಲಿ ಹಮೀದ್ ಉದ್ಯೋಗಕ್ಕೆಂದು ವಿದೇಶಕ್ಕೆ ತೆರಳಿದ್ದು, ವಿದೇಶದಿಂದಲೂ ಈತ ತನ್ನ ಹೆಂಡತಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದನೆಂದು ಆರೋಪಿಸಲಾಗಿತ್ತು. ಇದರಿಂದ ಬಹಳ ನೊಂದುಕೊಡಿದ್ದ ಹಾಜಿರಾ ತನ್ನ 2011ರ ಮಾರ್ಚ್ 31ರಂದು ತನ್ನ ತಾಯಿ ಮನೆಯಲ್ಲಿರುವಾಗ ವಿಷ ಸೇವನೆ ಮಾಡಿಕೊಂಡಿದ್ದಾರೆ. ಅವರನ್ನು ಮನೆಯವರು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಿ ಬಳಿಕ ಅಲ್ಲಿಂದ ಎಪ್ರಿಲ್ 4ರಂದು ನಗರದ ಎ.ಜೆ.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಕೆ ಎಪ್ರಿಲ್ 5ರಂದ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.
ಈ ಬಗ್ಗೆ ವಿಟ್ಲ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅಂದಿನ ಇನ್ಸ್‌ಪೆಕ್ಟರ್ ರಕ್ಷಿತ್ ಎ.ಕೆ. ಅವರು ಈ ಬಗ್ಗೆ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.







