ಬಾಕಿ್ಸಂಗ್ ಭವಿಷ್ಯ ಹೊಸಕಿ ಹಾಕುತ್ತಿರುವ ಕ್ರೀಡಾಡಳಿತ

ಭಾರತದ ಬಾಕ್ಸಿಂಗ್ ಕ್ಷೇತ್ರ ನಾಲ್ಕು ವರ್ಷದಲ್ಲಿ ಎರಡನೆ ಬಾರಿಗೆ ಪೋಷಕ ಸಂಸ್ಥೆ ಇಲ್ಲದ ಅನಾಥ ಸ್ಥಿತಿ ಎದುರಿಸುತ್ತಿದೆ. ಅಖಿಲ ಭಾರತೀಯ ಬಾಕ್ಸಿಂಗ್ ಅಸೋಸಿಯೇಶನ್ ಶೀರ್ಷಿಕೆಯಡಿ ಬಾಕ್ಸರ್‌ಗಳನ್ನು ಸ್ಪರ್ಧೆಗಳಿಗೆ ಕಳುಹಿಸುವುದು, ಶಿಬಿರಗಳನ್ನು ಆಯೋಜಿಸುವುದು ಮುಂತಾದ ದೈನಂದಿನ ವ್ಯವಹಾರಗಳನ್ನು ನಿಭಾಯಿಸುತ್ತಿದೆ. ಆದರೆ ಬಹುತೇಕ ಬಾಕ್ಸರ್‌ಗಳ ಸ್ಥಿತಿ ಡೋಲಾಯಮಾನವಾಗಿದೆ.
ಒಲಿಂಪಿಕ್ಸ್ ಗೋಲ್ಡ್ ಕ್ವೆಸ್ಟ್‌ನಂಥ ಸಂಘಟನೆಗಳು ಮೇರಿ ಕೋಮ್ ಹಾಗೂ ಸರಿತಾ ಅವರಂಥ ಬಾಕ್ಸರ್‌ಗಳನ್ನು ಅನುಭವ ಪ್ರವಾಸಕ್ಕಾಗಿ ಲಿವರ್‌ಪೂಲ್‌ನಂಥ ಕಡೆಗಳಿಗೆ ಕಳುಹಿಸುತ್ತಿದೆ. ಆದರೆ ಉಳಿದವರಿಗೆ ಆ ಅದೃಷ್ಟ ಇಲ್ಲ. ಕಳೆದ ನಾಲ್ಕು ವರ್ಷಗಳಿಂದ ಯಾವ ಸ್ಪರ್ಧೆಯೂ ಇಲ್ಲ. ಹಾಗಿದ್ದ ಮೇಲೆ ಪ್ರತಿಭೆಗಳನ್ನು ಎಲ್ಲಿ ಹಾಗೂ ಹೇಗೆ ಗುರುತಿಸಲು ಸಾಧ್ಯ ಎಂದು ಒಲಿಂಪಿಕ್ಸ್ ಗೋಲ್ಡ್ ಕ್ವೆಸ್ಟ್‌ನ ವೀರನ್ ರೆಸ್ಕಿನಾ ಪ್ರಶ್ನಿಸುತ್ತಾರೆ.
‘‘ಬಾಕ್ಸಿಂಗ್ ಹೊರತುಪಡಿಸಿ ಇತರ ಪ್ರತಿಯೊಂದು ಕ್ರೀಡೆಯಲ್ಲೂ ಈಗ ಎರಡನೆ ಸಾಲಿನ ಅಥ್ಲೀಟ್‌ಗಳನ್ನು ಗುರುತಿಸಿ, ಅವರನ್ನು ಮುಂದಿನ 2020ರ ಒಲಿಂಪಿಕ್ಸ್‌ಗೆ ಸಜ್ಜುಗೊಳಿಸಲಾಗುತ್ತಿದೆ. ಆದರೆ ಬಾಕ್ಸಿಂಗ್‌ನಲ್ಲಿ ಅಂಥ ಯಾವ ಪ್ರಯತ್ನವೂ ನಡೆದಿಲ್ಲ. ಈ ಸಮಸ್ಯೆಗೆ ತಕ್ಷಣಕ್ಕೆ ಪರಿಹಾರವೂ ಇಲ್ಲ. ಈ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಭಾರತದ ಬಾಕ್ಸರ್‌ಗಳು 2016ರ ರಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದರೂ, ಭಾರತ ಧ್ವಜದಡಿ ಸ್ಪರ್ಧಿಸುವುದು ಖಚಿತವಿರಲಿಲ್ಲ’’
ಸಬರಾನಂದ ಸೋನವಾಲ್ ಕ್ರೀಡಾ ಖಾತೆಯ ಜವಾಬ್ದಾರಿ ವಹಿಸಿಕೊಂಡಾಗಿನಿಂದಲೂ ಕ್ರೀಡೆ ಎಂದೂ ಅವರ ಆದ್ಯತೆಯಾಗಿರಲೇ ಇಲ್ಲ.
ಇದೀಗ ಅಸ್ಸಾಂನ ಮುಖ್ಯಮಂತ್ರಿ, ದಿಬ್ರೂಗಡದ 52 ವರ್ಷ ವಯಸ್ಸಿನ ಬೆಂಕಿ ಚೆಂಡು ನಾಯಕ ಅಧಿಕಾರ ವಹಿಸಿಕೊಂಡಾಗ ಈಶಾನ್ಯದ ಕ್ರೀಡಾ ಸಚಿವ ಎಂದು ಬಣ್ಣಿಸಲಾಗಿತ್ತು. ರಾಷ್ಟ್ರೀಯ ಕ್ರೀಡಾ ವಿಶ್ವವಿದ್ಯಾನಿಲಯ ಮಣಿಪುರದಲ್ಲಿ ಆರಂಭವಾಗಬೇಕು ಎಂಬ ಒತ್ತಡವನ್ನೂ ತಂದರು. ಹಣಕಾಸು ಸಚಿವ ಅರುಣ್ ಜೇಟ್ಲಿ ಇದನ್ನು ಬಜೆಟ್‌ನಲ್ಲಿ ಘೋಷಿಸಿದ ಒಂದೂವರೆ ವರ್ಷದ ಬಳಿಕ ಇದೀಗ ಕೆಲಸ ಆರಂಭವಾಗಿದೆ.
2016ರಲ್ಲಿ ಅವರು ದಕ್ಷಿಣ ಏಷ್ಯಾ ಕ್ರೀಡಾಕೂಟವನ್ನು ಈಶಾನ್ಯ ಭಾರತಕ್ಕೆ ತಂದರು. ಗುವಾಹಟಿ ಹಾಗೂ ಶಿಲ್ಲಾಂಗ್‌ನಲ್ಲಿ ಕ್ರೀಡಾಕೂಟ ನಡೆಯಿತು. ಇದು ಅವರ ಪಕ್ಷದ ಯುವಶಕ್ತಿಯನ್ನು ಬಲಗೊಳಿಸಲು ವೇದಿಕೆಯಾಗಿ ಮಾರ್ಪಟ್ಟಿತು. ಈ ಮೂಲಕ ರಾಜ್ಯದ ಭವಿಷ್ಯದ ಮುಖ್ಯಮಂತ್ರಿ ಹುದ್ದೆಗೆ ಅವರ ಉಮೇದುವಾರಿಕೆಯನ್ನು ಮತಷ್ಟು ಬಲಪಡಿಸಲು ಸಾಧ್ಯವಾಯಿತು.
ಆದರೆ ದಕ್ಷಿಣ ಏಷ್ಯಾ ಕ್ರೀಡಾಕೂಟವನ್ನು ಸೋನವಾಲ್ ಅವರ ರಾಜ್ಯವೇ ಆಯೋಜಿಸಿದರೂ, ವ್ಯವಸ್ಥೆ ಹಾಗೂ ಮೂಲಸೌಕರ್ಯ ಹೇಳಿಕೊಳ್ಳುವಂತೆ ಅಭಿವೃದ್ಧಿಯಾಗಲಿಲ್ಲ. ಸಮರ್ಪಕವಾದ ಕ್ರೀಡಾ ಗ್ರಾಮ ಇಂದಿಗೂ ಇಲ್ಲ. ಕ್ರೀಡಾಪಟುಗಳು, ತರಬೇತುದಾರರು ಹಾಗೂ ಪೂರಕ ಸಿಬ್ಬಂದಿಯ ವಾಸ್ತವ್ಯವನ್ನು ಪದೇ ಪದೇ ಬದಲಿಸಬೇಕಾಗಿತ್ತು.
ನೇಪಾಳಿ ಅಧಿಕಾರಿಗಳ ಒಂದು ತಂಡ ಪುಟ್ಟ ಹೊಟೇಲ್‌ನ ಬ್ಯಾಂಕ್ವೆಟ್ ಹಾಲ್‌ನಲ್ಲಿ ರಾತ್ರಿ ಕಳೆಯಬೇಕಾಯಿತು. ಬಳಿಕ ಅದನ್ನು ಅಥ್ಲೀಟ್‌ಗಳ ವಾಸ್ತವ್ಯಕ್ಕೆ ಛತ್ರವಾಗಿ ಮಾರ್ಪಡಿಸಲಾಯಿತು. ಕೆಲ ಭಾರತೀಯ ಕ್ರೀಡಾಪಟುಗಳ ವಾಸ್ತವ್ಯಕ್ಕೆ ಶಾಲೆಯಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಅದು ಕೂಡಾ ಸ್ಪರ್ಧೆ ನಡೆಯುವ ಪ್ರದೇಶದಿಂದ 25 ಕಿಲೋಮೀಟರ್ ದೂರದಲ್ಲಿ. ಫುಟ್‌ಬಾಲ್ ಕ್ರೀಡಾಂಗಣ ಸಿದ್ಧವಾಗದ ಹಿನ್ನೆಲೆಯಲ್ಲಿ ಕೊನೆಕ್ಷಣದಲ್ಲಿ ಪಂದ್ಯದ ಸ್ಥಳವನ್ನು ಬದಲಿಸಬೇಕಾಯಿತು.
ಸೋನವಾಲ್ ಅವರು ರಾಜಕೀಯ ವೃತ್ತಿಯಲ್ಲಿ ಮುಖ್ಯಮಂತ್ರಿ ಹುದ್ದೆಗೆ ಭಡ್ತಿ ಪಡೆಯಲೂ, ಹಿನ್ನೆಲೆಯನ್ನು ಭದ್ರಪಡಿಸಿಕೊಂಡರು. ಆದರೆ ಕ್ರೀಡೆಯ ಬಗೆಗಿನ ಅವರ ಕಾಳಜಿ ಮಾತ್ರ ಮತ್ತಷ್ಟು ಕಡಿಮೆಯಾಯಿತು. ಕ್ರೀಡಾ ಸಚಿವಾಲಯ ಇರುವ ಶಾಸ್ತ್ರಿಭವನದಲ್ಲಿ ಅವರ ದರ್ಶನವೇ ವಿರಳವಾಯಿತು. ಅಸ್ಸಾಂನಲ್ಲಿರುವ ತಮ್ಮ ಮನೆಯಿಂದಲೇ ಬಹುತೇಕ ಕಾರ್ಯಭಾರ ನಿಭಾಯಿಸುತ್ತಿದ್ದರು. ಕ್ರೀಡಾ ಕಾರ್ಯದರ್ಶಿ ರಾಜೀವ್ ಯಾದವ್ ಹಾಗೂ ಭಾರತದ ಕ್ರೀಡಾ ಪ್ರಾಧಿಕಾರದ ಮಹಾನಿರ್ದೇಶಕ ಇಂಜೇತಿ ಶ್ರೀನಿವಾಸ್ ಅವರು ದಿಲ್ಲಿಯಲ್ಲಿ ಸಂಪೂರ್ಣ ಕಾರ್ಯಭಾರ ನಿಭಾಯಿಸುತ್ತಿದ್ದರು.
ಭಾರತೀಯ ಬಾಕ್ಸಿಂಗ್‌ನ ಆಡಳಿತಾತ್ಮಕ ತಂಡವನ್ನು ನೇಮಿಸುವ ಬಗ್ಗೆ ಹಲವು ಪತ್ರಿಕಾಗೋಷ್ಠಿಗಳಲ್ಲಿ ಸೋನವಾಲ್ ಅವರನ್ನು ಕೇಳಿದಾಗಲೂ ಅವರ ಬಳಿ ಯಾವ ಮಾಹಿತಿಯೂ ಇರಲಿಲ್ಲ. ಪತ್ರಕರ್ತರ ಸಮ್ಮುಖದಲ್ಲೇ ಅವರ ಕಾರ್ಯದರ್ಶಿ ವಿಷಯ ವಿವರಿಸುತ್ತಿದ್ದರು. ತಾತ್ಕಾಲಿಕ ಸಮಿತಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬ ಗಿಣಿಪಾಠ ಒಪ್ಪಿಸುತ್ತಿದ್ದರು.
ಖ್ಯಾತ ಕ್ರೀಡಾಪಟುಗಳು ಮತ್ತು ರಾಜಕಾರಣಿಗಳು ಭಾಗವಹಿಸುವ ಸಮಾರಂಭ ತಪ್ಪಿಸಿಕೊಳ್ಳದ ಸೋನವಾಲ್, ಯಾವುದೇ ಕ್ರೀಡಾ ಶಿಬಿರಗಳಿಗೆ ಭೇಟಿ ನೀಡಿದ್ದು ವಿರಳ.
ತರಬೇತುದಾರರಾದ ಅನೂಪ್ ಕುಮಾರ್ ಹಾಗೂ ದಾಮೋದರನ್ ಚಂದ್ರಲಾಲ್ ಅವರು ಹೊಸದಿಲ್ಲಿ ಇಂದಿರಾಗಾಂಧಿ ಕ್ರೀಡಾಂಗಣದ ಡೈನಿಂಗ್ ಹಾಲಿನಲ್ಲಿ ಕುಳಿತಿದ್ದರು. ಇಬ್ಬರೂ ಮಹಿಳಾ ತಂಡದ ತರಬೇತಿಯನ್ನು ಆಗಷ್ಟೇ ಪೂರ್ಣಗೊಳಿಸಿದ್ದರು. ಚೀನಾದಲ್ಲಿ ನಡೆಯಬೇಕಿದ್ದ ಏಷ್ಯಾ- ಓಶಾನಿಯಾ ಒಲಿಂಪಿಕ್ಸ್ ಅರ್ಹತಾ ಪಂದ್ಯಕ್ಕೆ ತಂಡವನ್ನು ಸಜ್ಜುಗೊಳಿಸುತ್ತಿದ್ದರು. ಅವರು ತಂಡದ ವಿಶ್ಲೇಷಣೆಯಲ್ಲಿ ತೊಡಗಿದ್ದಾಗ, ಹಬೆಯಾಡುವ ವೆಜಿಟೇಬಲ್ ಕ್ಲಿಯರ್ ಸೂಪ್ ಕ್ಯಾಂಟೀನ್‌ನಿಂದ ಬಂತು. ಕುಮಾರ್ ತಮ್ಮ ಸೂಪ್‌ಗೆ ಒಂದಷ್ಟು ವಿನಿಗರ್ ಸೇರಿಸಿಕೊಂಡು, ‘‘ಎಲ್ಲವೂ ಮುಗಿಯಲಿದೆ. ನಿಮಗೆ ಅರ್ಥವಾಯಿತೇ?’’ ಎಂದು ಪ್ರಶ್ನಿಸಿದರು.
ಏನು ಎಂದು ನಾನು ಸಹಜವಾಗಿಯೇ ಪ್ರಶ್ನಿಸಿದೆ. ‘‘ಅಮೆಚೂರ್ ಬಾಕ್ಸಿಂಗ್’’ಎಂದು ಅವರು ಥಟ್ಟನೆ ಉತ್ತರಿಸಿದರು. ‘‘ಇದು ಕೊನೆಗೊಳ್ಳುತ್ತಿದೆ. ಇದರ ಆರಂಭದ ವೇಳೆಗೇ ನಾವಿದ್ದೆವು. ಬಹುಶಃ ಕೊನೆಯನ್ನು ಕೂಡಾ ನೋಡುತ್ತೇವೆ. ನಮ್ಮ ಮುಂದೆ ಕರಾಳ ದಿನಗಳಿವೆ’’ ಎಂದು ಚಂದ್ರಲಾಲ್ ಧ್ವನಿಗೂಡಿಸಿದರು.
ಇಬ್ಬರೂ ಮುಕ್ತವಾಗಿ ಮಾತನಾಡಲು ಒಂದಷ್ಟು ಸಮಯಾವಕಾಶ ತೆಗೆದುಕೊಂಡರು. 15 ವರ್ಷಗಳಿಂದ ಅವರು ಕಟ್ಟಿ ಬೆಳೆಸಿದ ಕ್ರೀಡೆಯ ಅಧೋಗತಿ ಬಗ್ಗೆ ಸ್ಪಷ್ಟ ಬೇಸರ ಕಾಣಿಸುತ್ತಿತ್ತು. ಆಡಳಿತಾತ್ಮಕ ಜಗಳದಿಂದಾಗಿ ಇಡೀ ವ್ಯವಸ್ಥೆ ಅಧೋಗತಿಗೆ ಇಳಿದದ್ದರಿಂದ ಬಾಕ್ಸರ್‌ಗಳಿಗೆ ಮಾತ್ರ ನಷ್ಟವಾದದ್ದಲ್ಲ; ತರಬೇತಿದಾರರಿಗೂ ಯಾವುದೇ ದಿಕ್ಕು- ದೆಸೆ ಇಲ್ಲದಂತಾಗಿದೆ.
‘‘ಇದು ಒಲಿಂಪಿಕ್ಸ್ ಕ್ರೀಡಾವರ್ಷ. ಅದರ ಅರ್ಥವೇನು ನಿಮಗೆ ಗೊತ್ತೆ?’’ ಎಂದು ಚಂದ್ರಲಾಲ್ ಪ್ರಶ್ನಿಸಿದರು.
ಅಂದರೆ ವಿವಿಧ ದೇಶಗಳು ತಮ್ಮ ಬಾಕ್ಸರ್‌ಗಳಿಗೆ ಹೊರಜಗತ್ತಿನ ಸ್ಪರ್ಧಾಕಣಗಳನ್ನು ಪರಿಚಯಿಸಲು ಪ್ರವಾಸ ಹಮ್ಮಿಕೊಳ್ಳುತ್ತವೆ. ಅಂದರೆ ಅವರ ತಿನಸು, ಪಾನೀಯ, ಜಿಮ್‌ನಲ್ಲಿ ನಡೆಸುವ ಕಸರತ್ತು ಹೀಗೆ ಪ್ರತಿಯೊಂದು ಚಟುವಟಿಕೆಗಳನ್ನು ಲೆಕ್ಕಾಚಾರ ಮಾಡಿ, ಯೋಜನೆ ರೂಪಿಸಲಾಗುತ್ತದೆ. ಅಂದರೆ ಒಲಿಂಪಿಕ್ಸ್ ನಡೆಯುವ ವೇಳೆಗೆ ಬಾಕ್ಸರ್ ಅತ್ಯುತ್ತಮ ಕ್ಷಮತೆ ತೋರುವಂತೆ ಯೋಜನೆ ರೂಪಿಸಲಾಗುತ್ತದೆ.
ವಿಶ್ವದ ಅತ್ಯುತ್ತಮ ಬಾಕ್ಸರ್‌ಗಳು ಹಸಿದ ಹುಲಿಗಳಾಗಿದ್ದಾರೆ. ನಿಕೋಲಾ ಆಡಮ್ಸ್, ‘‘ನಾಲ್ಕು ವರ್ಷದ ಹಿಂದೆ ಲಂಡನ್ ಒಲಿಂಪಿಕ್ಸ್‌ನಲ್ಲಿ ಮೇರಿ ಕೋಮ್ ವಿಭಾಗದಲ್ಲಿ ಚಿನ್ನ ಗೆದ್ದಿದ್ದರು. ನಾನು ಆ ಸಂದರ್ಭ ಅಲ್ಲಿದ್ದು, ಪದಕವನ್ನು ಕೊರಳಿಗೆ ಹಾಕಿಸಿಕೊಂಡಿದ್ದೆ. ಪೋಡಿಯಂ ಮೇಲಿದ್ದೆ. ಅದು ಮರುಕಳಿಸಬೇಕು’’ ಎಂದು ಅವರು ಹೇಳಿದ್ದರು. 69 ಕೆ.ಜಿ. ವಿಭಾಗದಲ್ಲಿ ಸರಿತಾ ಅವರಂತೆ ಸ್ಪರ್ಧಿಸಿದ್ದ ಐರ್ಲೆಂಡಿನ ಕೀಟ್ ಟೇಲರ್, ‘‘ನಾನು ಐದು ಬಾರಿಯ ವಿಶ್ವಚಾಂಪಿಯನ್ ಎನ್ನುವುದು ಅಲ್ಲಿ ಲೆಕ್ಕಕ್ಕೆ ಬರುವುದಿಲ್ಲ. ಮತ್ತೊಮ್ಮೆ ಒಲಿಂಪಿಕ್ಸ್ ಚಾಂಪಿಯನ್ ಆಗಲು, ಮೊದಲು ನಾನು ಅರ್ಹತೆ ಪಡೆಯಬೇಕು. ಅದನ್ನು ಪಡೆಯಲು ವಿಶ್ವದ ಇತರ ಬಾಕ್ಸರ್‌ಗಳಂತೆ ಶ್ರಮಪಡಬೇಕು’’ ಎಂದು ಹೇಳಿದ್ದರು.
ಮತ್ತೆ ಭಾರತದ ವಿಚಾರಕ್ಕೆ ಬರೋಣ. ಮೇರಿ ಹಾಗೂ ಸರಿತಾ ಅಂಥ ಬಾಕ್ಸರ್‌ಗಳ ಜತೆ ಕಣಕ್ಕಿಳಿಯಬೇಕು. ಹೊರ ಜಗತ್ತಿನಲ್ಲಿ ಸ್ಪರ್ಧೆ ಹೇಗಿರುತ್ತದೆ ಎಂಬ ಕಲ್ಪನೆಯೂ ಇವರಿಗೆ ಇರುವುದಿಲ್ಲ. ಇಬ್ಬರೂ ಭಾರತದ ಅತ್ಯುತ್ತಮ ಸ್ಪರ್ಧಿಗಳಾಗಿದ್ದರೂ, ಉಳಿದ ಹೊರ ಜಗತ್ತು, ಹೊಸ ಚಾಂಪಿಯನ್‌ಗಳನ್ನು ರೂಪಿಸಲು ಸಾಕಷ್ಟು ಮುಂದುವರಿದಿದೆ.
‘‘ಓಕೆ ಇತರ ದೇಶಗಳ ಗುಣಮಟ್ಟ ಸುಧಾರಿಸಿದೆಯೇ?’’ ಎಂದು ಚಂದ್ರಲಾಲ್ ಪ್ರಶ್ನಿಸಿದರು. ‘‘ಏಕೆಂದರೆ, ಅಲ್ಲಿ ಉತ್ತಮ ವ್ಯವಸ್ಥೆ ಇದೆ. ಯೋಜನೆ ಇದೆ. ನಮ್ಮಲ್ಲಿ ಅದು ಇಲ್ಲ. ನಾವು ಇಂದಿನ ಬಗ್ಗೆ ಮಾತ್ರ ಚಿಂತಿಸುತ್ತೇವೆ. ಅಂದರೆ ಮುಂದಿನ ಸ್ಪರ್ಧೆ ಬಗ್ಗೆ ಮಾತ್ರ. ಪ್ರತಿಯೊಂದೂ ಅಲ್ಪಾವಧಿ. ಇದೇ ವೇಳೆ ಇತರ ದೇಶಗಳು ಮುಂದಿನ ಒಲಿಂಪಿಕ್ಸ್‌ಗೆ ತಯಾರಿ ನಡೆಸುತ್ತಿವೆ. ನಾವು ಕೂಡಾ ವಾಸ್ತವವಾಗಿ 2020ರ ಒಲಿಂಪಿಕ್ಸ್‌ಗೆ ಸಜ್ಜಾಗಬೇಕು. ಆದರೆ ಭವಿಷ್ಯ ಕರಾಳವಾಗಿದೆ. ಆದರೆ ಇದನ್ನು ನಾವು ಒಪ್ಪಿಕೊಳ್ಳಲೇಬೇಕು. ಈ ಕ್ರೀಡೆಯನ್ನು ನಿರ್ವಹಿಸುವ ಉದ್ದೇಶ ಹೊಂದಿರುವವರಿಗೆ ಕ್ರೀಡೆಯ ಮೂಲಭೂತ ಅಂಶಗಳ ಅರಿವೂ ಇಲ್ಲ. ಸ್ಪರ್ಧೆಗಳು ಎಂದರೆ ಉತ್ಸವ ಎಂದು ತಿಳಿದುಕೊಂಡಿದ್ದಾರೆ. ಆದ್ದರಿಂದ ಅವರು ಈ ಬಗ್ಗೆ ಆಸಕ್ತಿ ವಹಿಸುತ್ತಿದ್ದಾರೆ. ಆದರೆ ಸ್ಪರ್ಧೆಗಿಂತ ಮೊದಲಿನ ವೇಗ ನಿಜವಾಗಿಯೂ ಪ್ರಮುಖವಾಗುತ್ತದೆ’’.
‘‘ಬಹುತೇಕ ಹಿರಿಯ ತರಬೇತುದಾರರನ್ನು ಮೂಲೆಗುಂಪು ಮಾಡಲಾಗಿದ್ದು, ಈ ಕಹಿ ಅನುಭವದಿಂದ ಅವರು ಹೊರ ಹೋಗಿದ್ದಾರೆ. ಕಿರಿಯ ತರಬೇತುದಾರರು, ವಿದೇಶಗಳಲ್ಲಿ ನಡೆಯುವ ಎಐಬಿಎ ಕೋಚಿಂಗ್‌ಗೆ ಆದ್ಯತೆ ನೀಡುತ್ತಿದ್ದಾರೆ. ಆಗ ಮಾತ್ರ ಅವರು ಸ್ಟಾರ್ ಕೋಚ್ ಎಂಬ ಹಣೆಪಟ್ಟಿ ಗಳಿಸಲು ಸಾಧ್ಯವಾಗುತ್ತದೆ ಹಾಗೂ ಬಾಕ್ಸರ್‌ಗಳ ಜತೆ ವಿದೇಶಗಳಿಗೆ ತೆರಳುವ ಅವಕಾಶವಾಗುತ್ತದೆ’’ ಎಂಬ ಕಲ್ಪನೆ ಅವರದ್ದು. ‘‘ಮಹಿಳಾ ಕೋಚ್‌ಗಳ ಬಗ್ಗೆ ನನ್ನ ವಿರೋಧವೇನೂ ಇಲ್ಲ. ಆದರೆ ಈಗ ತರಬೇತುದಾರರಾಗಿರುವವರು ನಮ್ಮ ವಿದ್ಯಾರ್ಥಿಗಳಾಗಿದ್ದವರೇ. ನನ್ನ ಹಲವಾರು ವಿದ್ಯಾರ್ಥಿಗಳು ಇಂದು ಸ್ಟಾರ್ ತರಬೇತಿದಾರರು. ನಾನು ಇಲ್ಲವೇ? ಇದು ಅವಮಾನವಲ್ಲವೇ? ಇಷ್ಟು ವರ್ಷಗಳ ನನ್ನ ಅನುಭವಕ್ಕೆ ಬೆಲೆಯೇ ಇಲ್ಲವೇ? ಈ ತರಬೇತುದಾರರು ಮೇರಿ ಹಾಗೂ ಸರಿತಾ ಅವರಂಥವರ ಜತೆಗೆ ಮಾತನಾಡಲು ಸಾಧ್ಯವೇ? ಇದು ಹೇಗೆ ವಿವೇಚನೆ ಎನಿಸುತ್ತದೆ?’’ ಎಂಬ ಸರಣಿ ಪ್ರಶ್ನೆಗಳನ್ನು ಚಂದ್ರಲಾಲ್ ಮುಂದಿಡುತ್ತಾರೆ.
ಬಾಕ್ಸಿಂಗ್ ತರಬೇತಿ ನಡೆಯುವ ಇಂದಿರಾಗಾಂಧಿ ಸ್ಟೇಡಿಯಂನಲ್ಲಿ ಬಾಕ್ಸರ್‌ಗಳು ಹಾಗೂ ಅವರ ತರಬೇತುದಾರರು, ಕಬಡ್ಡಿ, ಕುಸ್ತಿಯಂಥ ಇತರ ಕ್ರೀಡೆಗಳ ಲಾಭದಾಯಕ ಲೀಗ್‌ಗಳನ್ನು ನೋಡುತ್ತಾರೆ. ಇಷ್ಟಾಗಿಯೂ, ಅವರ ಕ್ರೀಡೆಯ ನಿರಾಶಾದಾಯಕ ಚಿತ್ರಣ ನೋಡಬೇಕಾಗುತ್ತದೆ. ‘‘ನಾನು ಒಬ್ಬ ಕೂಲಿಯ ಕೆಲಸ ಮಾಡುತ್ತೇನೆ ಮೇಡಂ’’ ಎಂದು ಚಂದ್ರಲಾಲ್ ಹೇಳಿದರು. ‘‘ಆದರೆ ಈ ಕೂಲಿ ಕೆಲಸ ಎಲ್ಲಿಯವರೆಗೆ ಮಾಡಲು ಸಾಧ್ಯ?’’ ನನಗೆ ತಿಳಿಯದು ಎಂದು ಹೇಳುತ್ತಾ ಊಟದ ಕೋಣೆಯಿಂದ ಮೇಲಿನ ಮಹಡಿಯಲ್ಲಿರುವ ತಮ್ಮ ಕೋಣೆಯತ್ತ ಹೆಜ್ಜೆ ಹಾಕಿದರು.
ಈಗ ಬಾಕ್ಸಿಂಗ್ ಮುನ್ನಡೆಸುತ್ತಿರುವ ತಾತ್ಕಾಲಿಕ ಸಮಿತಿಯ ನೇತೃತ್ವ ವಹಿಸಿರುವವರು ಕಿಶೆನ್ ನಾರ್ಸಿ. 70ರ ಆಸುಪಾಸಿನಲ್ಲಿರುವ ಅವರ ಬಾಕ್ಸಿಂಗ್ ಜತೆಗಿನ ಸಂಪರ್ಕವೂ 1970ರ ದಶಕದಿಂದೀಚಿನದ್ದು. 1978ರ ಬ್ಯಾಂಕಾಕ್ ಏಷ್ಯನ್ ಗೇಮ್ಸ್‌ನಲ್ಲಿ ಅಧಿಕಾರಿಯಾಗಿ ಅವರು ಪಾಲ್ಗೊಂಡಿದ್ದರು. ಅಲ್ಲಿಂದ ನಂತರ ಅವರು ಎಐಬಿಎನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಹಲವು ವಿಶ್ವಚಾಂಪಿಯನ್‌ಶಿಪ್, ಒಲಿಂಪಿಕ್ಸ್ ಹಾಗೂ ಕಾಮನ್ವೆಲ್ತ್ ಕೂಟದಲ್ಲಿ ತೀರ್ಪುಗಾರರಾಗಿ ಹಾಗೂ ರೆಫ್ರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಅಂತರ್‌ರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಗೆ ರಾಜಾ ರಣಧೀರ್ ಸಿಂಗ್ ಹೇಗೆಯೋ ಹಾಗೆ ನಾರ್ಸಿ ಭಾರತೀಯ ಬಾಕ್ಸಿಂಗ್ ಸಂಸ್ಥೆಗೆ. ಏನು ನಡೆಯಬೇಕು ಎನ್ನುವುದನ್ನು ನಿರ್ಧರಿಸುವ ಸಾಮರ್ಥ್ಯ ಹೊಂದಿದವರು. ಜತೆಗೆ ತಮ್ಮ ದೇಶಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸಲು ಅಧಿಕಾರ ಹೊಂದಿರುವವರು.
ತಮ್ಮ ಅಧಿಕಾರ ಹಾಗೂ ಸಾಮರ್ಥ್ಯದಿಂದಾಗಿ ನಾರ್ಸಿ, ಹಲವು ಬಾರಿ ಹೊಸ ಚುನಾವಣೆಗೆ ಎಐಬಿಎ ವಿಧಿಸಿದ್ದ ಗಡುವನ್ನು ವಿಸ್ತರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಎಲ್ಲವನ್ನೂ ಎದುರಿಸೋಣ. ಸಮಗ್ರ ಬದಲಾವಣೆ ಅನಿವಾರ್ಯ ಎಂದು ಅವರೂ ಒಪ್ಪಿಕೊಳ್ಳುತ್ತಾರೆ. ಕಜಖಿಸ್ತಾನದ ಆಸ್ತಾನದಲ್ಲಿ ಒಲಿಂಪಿಕ್ ಅರ್ಹತಾ ಸ್ಪರ್ಧೆಗಳು ನಡೆಯುವವರೆಗೂ ಯಥಾಸ್ಥಿತಿ ಮುಂದುವರಿದಿತ್ತು.
ಕೃಪೆ: scroll.in
ಬಾಕ್ಸಿಂಗ್ ಹೊರತುಪಡಿಸಿ ಇತರ ಪ್ರತಿಯೊಂದು ಕ್ರೀಡೆಯಲ್ಲೂ ಈಗ ಎರಡನೆ ಸಾಲಿನ ಅಥ್ಲೀಟ್‌ಗಳನ್ನು ಗುರುತಿಸಿ, ಅವರನ್ನು ಮುಂದಿನ 2020ರ ಒಲಿಂಪಿಕ್ಸ್‌ಗೆ ಸಜ್ಜುಗೊಳಿಸಲಾಗುತ್ತಿದೆ. ಆದರೆ ಬಾಕ್ಸಿಂಗ್‌ನಲ್ಲಿ ಅಂಥ ಯಾವ ಪ್ರಯತ್ನವೂ ನಡೆದಿಲ್ಲ. ಈ ಸಮಸ್ಯೆಗೆ ತಕ್ಷಣಕ್ಕೆ ಪರಿಹಾರವೂ ಇಲ್ಲ. ಈ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಭಾರತದ ಬಾಕ್ಸರ್‌ಗಳು 2016ರ ರಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದರೂ, ಭಾರತ ಧ್ವಜದಡಿ ಸ್ಪರ್ಧಿಸುವುದು ಖಚಿತವಿರಲಿಲ್ಲ.







