ಪತ್ರಕರ್ತರ ‘ಇಸಂ’ ಮಧ್ಯೆ ಜರ್ನಲಿಸಂ ಮರೆಯಾಗಿದೆ: ಸಂತೋಷ್ ಕುಮಾರ್
ಪತ್ರಿಕೋದ್ಯಮ ಮತ್ತು ಸಹಕಾರ ಮಾಹಿತಿ ಕಾರ್ಯಾಗಾರ

ಪುತ್ತೂರು, ಅ.7: ಪತ್ರಕರ್ತರು ಸಕ್ಯುಲರಿಸಂ, ಹಿಂದೂಯಿಸಂ, ಕಮ್ಯುನಿಸಂ ಮಧ್ಯೆ ಜರ್ನಲಿಸಂ ಅನ್ನು ಮರೆತು ಹೋಗಿರುವ ನಾವು ನೈಜ ಜರ್ನಲಿಸಂನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕಾಗಿದೆ ಎಂದು ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಶಾಂತಿನಗರ ಹೇಳಿದರು.
ಪುತ್ತೂರಿನ ದರ್ಬೆ ಸಚ್ಚಿದಾನಂದ ಸೇವಾ ಸದನದಲ್ಲಿ ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಗುರುತಾಲೂಕು ಪತ್ರಕರ್ತರ ಸಂಘದ ಸಹಭಾಗಿತ್ವದಲ್ಲಿ ಗುರುವಾರ ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸಲಾದ ಪತ್ರಿಕೋದ್ಯಮ ಮತ್ತು ಸಹಕಾರ’ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಸರಸ್ವತಿ ಚಾರಿಟೇಬಲ್ ಟ್ರಸ್ಟ್‌ನ ಆಡಳಿತ ನಿರ್ದೇಶಕ ಎಸ್.ಆರ್.ಸತೀಶ್ಚಂದ್ರ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪತ್ರಕರ್ತ ಸುರೇಂದ್ರ ವಾಗ್ಲೆ ಮಾತನಾಡಿ ಪತ್ರಕರ್ತರು ತಮ್ಮ ವರದಿಯಲ್ಲಿ ಜನರಿಗೆ ಇರಿಸುಮುರಿಸು ಉಂಟಾಗದಂತೆ ಎಚ್ಚರಿಕೆ ವಹಿಸಬೇಕಾಗಿದ್ದು, ತನ್ನ ಇತಿಮಿತಿಯೊಳಗೆ ನಿರ್ದಿಷ್ಟ ಚೌಕಟ್ಟಿನಲ್ಲಿ ಯಾರಿಗೂ ಧಕ್ಕೆಯಾಗದ ರೀತಿಯಲ್ಲಿ ವರದಿಗಾರಿಕೆ ಮಾಡಬೇಕು. ಶಬ್ದ ಬಳಕೆಯಲ್ಲಿ ಜಾಗರೂಕರಾಗಬೇಕು. ವಿಷಯ ಪ್ರೌಢಿಮೆ ಬೆಳೆಸಿಕೊಳ್ಳಬೇಕು ಎಂದರು.
ಶಿವಮೊಗ್ಗ ಸನ್ಮತಿ ಪ್ರತಿಷ್ಠಾನದ ಮಹದೇವಪ್ಪಸಂಪನ್ಮೂಲ ವ್ಯಕ್ತಿಯಾಗಿ ಬಾಗವಹಿಸಿ ಮಾಹಿತಿ ನೀಡಿದರು. ಶ್ರೀ ಸರಸ್ವತಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಉಪಾಧ್ಯಕ್ಷ ವಿನಯಕುಮಾರ್ ಕಂದಡ್ಕ, ಟ್ರಸ್ಟಿ ಸುನಿಲ್ ಬೋರ್ಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಿಬ್ಬಂದಿ ಶಿವಪ್ರಸಾದ್ ಸ್ವಾಗತಿಸಿದರು. ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ಉದಯ ಕುಮಾರ್ ಯು.ಎಲ್. ವಂದಿಸಿದರು. ಟ್ರಸ್ಟ್‌ನ ಪಿಆರ್‌ಒ ಬಿಪಿನ್ ಚಂದ್ರ ನಿರೂಪಿಸಿದರು.







