ಮಂಗಳೂರು ವಿವಿ ಅಥ್ಲೆಟಿಕ್ ಕೂಟಕ್ಕೆ ಚಾಲನೆ

ಉಡುಪಿ, ಅ.7: ಮಂಗಳೂರು ವಿವಿ ಅಂತರ್‌ಕಾಲೇಜು 36ನೇ ಅಥ್ಲೆಟಿಕ್ ಕೂಟಕ್ಕೆ ಶುಕ್ರವಾರ ಅಜ್ಜರಕಾಡಿನಲ್ಲಿರುವ ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣ ದಲ್ಲಿ ಉಡುಪಿ ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ ಅವರು ಚಾಲನೆ ನೀಡಿದರು.
ತೆಂಕನಿಡಿಯೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರವು ಮಂಗಳೂರು ವಿವಿ ಸಹಯೋಗದೊಂದಿಗೆ ಈ ಕ್ರೀಡಾಕೂಟವನ್ನು ಹಮ್ಮಿಕೊಂಡಿದೆ.
ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಶೋಭಾ, ವಿಶ್ವದಲ್ಲಿ ಎರಡನೇ ಅತಿಹೆಚ್ಚು ಜನಸಂಖ್ಯೆ ಯನ್ನು ಹೊಂದಿರುವ ಭಾರತದ ಕ್ರೀಡಾ ಸಾಧನೆ ನಿರಾಶಾದಾಯಕ. ಕ್ರೀಡೆಯಲ್ಲಿ ವಿಶ್ವದ ಉಳಿದ ದೇಶಗಳ ಸಮಕ್ಕೆ ನಿಲ್ಲಲು ಭಾರತ ತುಂಬಾ ದೂರ ಕ್ರಮಿಸಬೇಕಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮೂಡಬಿದರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಮಾತನಾಡಿ, ಕಳೆದ ಬಾರಿ ಚೆನ್ನೈನಲ್ಲಿ ನಡೆದ ಅಖಿಲ ಭಾರತ ಅಂತರ ವಿವಿ ಅಥ್ಲೆಟಿಕ್ ಕೂಟದಲ್ಲಿ ಕೂದಲೆಳೆಯಂತರಿಂದ ಅಗ್ರಸ್ಥಾನ ಕಳೆದುಕೊಂಡ ಮಂಗಳೂರು ವಿವಿ ಈ ಬಾರಿ ಚಾಂಪಿಯನ್ ತಂಡವಾಗಿ ಹೊರಹೊಮ್ಮುವ ವಿಶ್ವಾಸ ವ್ಯಕ್ತಪಡಿಸಿದರು.
ತಮ್ಮ ಸಂಸ್ಥೆಗಳಲ್ಲಿ ಕಲಿಯುತ್ತಿರುವ ಧರಣ್ ಮತ್ತು ಅನು ಕ್ರೀಡೆಯಲ್ಲಿ ಅತ್ಯುತ್ತಮ ಸಾಧನೆ ತೋರುತಿದ್ದು, ಇತ್ತೀಚಿನ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿರುವುದು ತಮ್ಮ ಸಂತಸ ತಂದಿದೆ. ಇಲ್ಲಿ ಹೊಸ ದಾಖಲೆ ಬರೆಯುವ ಕ್ರೀಡಾಪಟುಗಳಿಗೆ 5,000ರೂ. ಪ್ರೋತ್ಸಾಹ ಬಹುಮಾನ ನೀಡುವುದಾಗಿ ಘೋಷಿಸಿದರು.
ಮಂಗಳೂರು ವಿವಿ ರಿಜಿಸ್ಟಾರ್ ಪ್ರೊ.ಕೆ.ಎಂ.ಲೋಕೇಶ್ ಮಾತನಾಡಿ, ಮಂಗಳೂರು ವಿವಿ ಈಗಾಗಲೇ ಕ್ರೀಡಾನೀತಿಯೊಂದನ್ನು ರೂಪಿಸಿ ಜಾರಿಗೆ ತಂದಿದೆ. ಇದರಲ್ಲಿ ಕ್ರೀಡಾಪಟುಗಳಿಗೆ 15 ಗ್ರೇಸ್‌ಮಾರ್ಕ್ ನೀಡಲಾಗುತಿದ್ದು, ಪದವಿಯ ಹಂತದಲ್ಲಿ ಶೇ.5ರಷ್ಟು ಮೀಸಲಾತಿಯನ್ನು ಸಹ ಘೋಷಿಸಲಾಗಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಬಾಲಕೃಷ್ಣ ಎಸ್.ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಪಂ ಸದಸ್ಯ ಜನಾರ್ದನ ತೋನ್ಸೆ, ಉಡುಪಿ ಮತ್ತು ದ.ಕ.ಜಿಲ್ಲಾ ಮೀನು ಮಾರಾಟ ನಿಗಮದ ಅಧ್ಯಕ್ಷ ಯಶ್ಪಾಲ್ ಸುವರ್ಣ, ಪಡುಬಿದ್ರಿ ಯುಪಿಸಿಎಲ್‌ನ ಕಾರ್ಯಕಾರಿ ನಿರ್ದೇಶಕ ಕಿಶೋರ್ ಆಳ್ವ, ಉದ್ಯಮಿಗಳಾದ ಉದಯ ಶೆಟ್ಟಿ ಮುನಿಯಾಲು, ಗಿರೀಶ್ ಶೆಟ್ಟಿ ತೆಳ್ಳಾರು, ಮಂಗಳೂರು ವಿವಿ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಕಿಶೋರ್ ಕುಮಾರ್ ಸಿ.ಕೆ., ಮಂಗಳೂರು ವಿವಿ ದೈಹಿಕ ಶಿಕ್ಷಣ ನಿರ್ದೇಶಕರ ಸಂಘದ ಅಧ್ಯಕ್ಷ ವೇಣುಗೋಪಾಲ ಲೋಂಡಾ, ಸಪೆಷಲ್ ಒಲಿಂಪಿಕ್ಸ್ ವಲಯ ನಿರ್ದೇಶಕ ವಸಂತಕುಮಾರ್ ಉಪಸ್ಥಿತರಿದ್ದರು.
ಎರಡು ದಿನಗಳ ಈ ಕ್ರೀಡಾಕೂಟದಲ್ಲಿ ಮಂಗಳೂರು ವಿವಿಗೆ ಸೇರಿದ 75 ಕಾಲೇಜುಗಳು 1000ಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ಭಾಗವಹಿಸಿರುವ ವಿದ್ಯಾರ್ಥಿ ಕ್ರೀಡಾಪಟುಗಳ ಪರವಾಗಿ ಆತಿಥೇಯ ಕಾಲೇಜಿನ ಕ್ರೀಡಾಪಟು ಮನಿಷ್ ಲಕ್ಷ್ಮಣ್ ಪ್ರತಿಜ್ಞೆ ಸ್ವೀಕರಿಸಿದರು.
ತೆಂಕನಿಡಿಯೂರು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರಾಮಚಂದ್ರ ಪಾಟ್ಕರ್ ಅತಿಥಿಗಳನ್ನು ಸ್ವಾಗತಿಸಿದರೆ, ಡಾ.ದುಗ್ಗಪ್ಪ ಕಜೆಕಾರು ಕಾರ್ಯಕ್ರಮ ನಿರೂಪಿಸಿದರು.







