ಮಾಜಿ ಪ್ರಧಾನಿ ಇಂದಿರಾಗಾಂಧಿ ಜನ್ಮಶತಮಾನೋತ್ಸವ ಕುರಿತು ಸಮಾಲೋಚನಾ ಸಭೆ

ಮಂಗಳೂರು, ಅ.7: ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಜನ್ಮ ಶತಮಾನೋತ್ಸವವನ್ನು ಸಾರ್ವಜನಿಕವಾಗಿ ಕರಾವಳಿ ಕರ್ನಾಟಕದಲ್ಲಿ ಆಚರಿಸುವ ಕುರಿತು ನಗರದ ಖಾಸಗಿ ಹೋಟೆಲ್‌ನಲ್ಲಿ ಸಮಾಲೋಚನಾ ಸಭೆಯು ಸಂಸದ ಹಾಗೂ ಮಾಜಿ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಆಸ್ಕರ್ ಫೆರ್ನಾಂಡಿಸ್, ಇಂದಿರಾಗಾಂಧಿಯವರು ಜನರ ಉಸಿರಾಗಿದ್ದರು, ಬಡಜನತೆಯ ದೇವರಾಗಿದ್ದರು. ಅವರ ಆಗಿನ ಕಾಲದ ಬಡವರ ಪರವಾದ ‘ಗರೀಬಿ ಹಠಾವೋ’ ಹಾಗೂ 20 ಅಂಶದ ಕಾರ್ಯಕ್ರಮಗಳನ್ನು ಸೋನಿಯಾಗಾಂಧಿಯವರು ಯುಪಿಎ ಸರಕಾರದ ಅವಧಿಯಲ್ಲಿ ಆಹಾರದ ಹಕ್ಕು, ಉದ್ಯೋಗದ ಹಕ್ಕು, ಮಾಹಿತಿ ಹಕ್ಕು ಹಾಗೂ ಶಿಕ್ಷಣದ ಹಕ್ಕು ಇತ್ಯಾದಿ ಕಾಯ್ದೆ ಮೂಲಕ ತಂದು ಬದ್ಧತೆಯನ್ನು ತೋರಿಸಿದರು. ಆದರೆ ಅದನ್ನು ಯಶಸ್ವಿಯಾಗಿ ತೆಗೆದುಕೊಂಡು ಹೋಗುವಲ್ಲಿ ವಿಫಲರಾದೆವು ಎಂದು ಹೇಳಿದರು. ಈ ಬಾರಿ ವರ್ಷಾದ್ಯಂತ ನಡೆಯಲಿರುವ ಇಂದಿರಾಗಾಂಧಿ ಜನ್ಮಶತಮಾನೋತ್ಸವ ಸಮಯದಲ್ಲಿ ಯುವಜನತೆ ಮಹಿಳೆ ಮತ್ತು ಬಡವರಿಗೆ ಪರಿಣಾಮಕಾರಿ ರೀತಿಯಲ್ಲಿ ಇಂದಿರಾಗಾಂಧಿಯವರ ಸಾಧನೆ ಮತ್ತು ಮುಂದಿನ ಯೋಜನೆಯನ್ನು ಮುಟ್ಟಿಸಲಿದ್ದೇವೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಎಐಸಿಸಿ ಸದಸ್ಯ ಪಿ.ವಿ.ಮೋಹನ್, ಇಂದಿರಾ ಕಾಲದಲ್ಲಿದ್ದ ಸೆಕ್ಯೂಲರ್ ಶಕ್ತಿಗಳ ಸಾಮಾಜಿಕ ಕಾರ್ಯಸೂಚಿ, ಸಾಮಾಜಿಕ ಉಪಸ್ಥಿತಿ, ಸಾಮಾಜಿಕ ಹೋರಾಟಗಳು ಹಾಗೂ ಸಾಮಾಜಿಕ ಒಕ್ಕೂಟಗಳು ಈಗ ಸಂಪೂರ್ಣ ನೇಪಥ್ಯಕ್ಕೆ ಸರಿದಿವೆ. ಕೋಮು ಶಕ್ತಿಗಳು ಧಾರ್ಮಿಕ ಕಾರ್ಯಸೂಚಿಯನ್ನು ಮುಂದಿಟ್ಟು ಈ ಜಾಗವನ್ನು ಆಕ್ರಮಿಸಿ ವಿಜೃಂಭಿಸುತ್ತಿವೆ. ಇಂದಿರಾಗಾಂಧಿ ಜನ್ಮಶತಮಾನೋತ್ಸವದ ಸಂದರ್ಭದಲ್ಲಿ ಈ ದಿಶೆಯಲ್ಲಿ ಚಿಂತನೆ ನಡೆಯಬೇಕು ಎಂದು ಹೇಳಿದರು.
ಬ್ಯಾಂಕನ್ನು ರಾಷ್ಟ್ರೀಕರಣಗೊಳಿಸುವ ಮೂಲಕ ಬಡವರು ಬ್ಯಾಂಕ್ ಖಾತೆಯನ್ನು ಹೊಂದುವಂತೆ ಮಾಡಿದವರು ಇಂದಿರಾಗಾಂದಿ. ಅಮೆರಿಕಾದವರು ಈಗ ಬ್ಯಾಂಕಿನ ರಾಷ್ಟ್ರೀಕರಣದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಪ್ರೊ. ವಿಶ್ವನಾಥ್ ಹೇಳಿದರು.
ರಾಜಕೀಯ ಶಾಸ್ತ್ರದ ಹಿರಿಯ ವಿದ್ವಾಂಸ ಪ್ರೊ.ರಾಜರಾಮ ತೋಳ್ಪಾಡಿ ಮಾತನಾಡಿ, ಇಂದಿರಾ ಗಾಂಧಿಯವರ ಬಗ್ಗೆ ಗಂಭೀರವಾದ ಬರವಣಿಗೆಯ ಕೆಲಸ ನಡೆದಿಲ್ಲ. ಕನ್ನಡದಲ್ಲಿ ಅವರ ಬಗ್ಗೆ ಕೃತಿಯ ಅನುವಾದ ಕೆಲಸಗಳು ಆಗಬೇಕು ಎಂದರು.
ಮಂಗಳೂರು ವಿಶ್ವವಿದ್ಯಾಲಯದ ಪ್ರೊ.ಧರ್ಮ, ದಲಿತ ಚಿಂತಕ ಲೋಲಾಕ್ಷ, ಉದ್ಯಮಿ ರಮೇಶ್ ಶೆಟ್ಟಿ ಸಾಮಾಜಿಕ ಕಾರ್ಯಕರ್ತ ಸುರೇಶ್ ಶೆಟ್ಟಿ, ಪ್ರೊ. ನಾಬರ್ಟ್ ಲೋಬೊ, ಮುಖಂಡರಾದ ನಾಗೇಶ್ ಕುಮಾರ್, ಸುಭೋದಯ ಆಳ್ವ ಮುಂತಾದವರು ಮಾತನಾಡಿ ಸಲಹೆಗಳನ್ನು ನೀಡಿದರು.
ವೇದಿಕೆಯಲ್ಲಿ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ಎ. ಮುಹಮ್ಮದ್ ಹನೀಫ್, ಮುಖಂಡರಾದ ಸುರೇಶ್ ಬಲ್ಲಾಳ್, ತೇಜೋಮಯ, ಬಲರಾಜ್ ರೈ, ಪಸ್ಥಿತರಿದ್ದರು. ಎಂ.ಎ. ಗಫೂರ್ ಸ್ವಾಗತಿಸಿದರು.







