ದೇರಳಕಟ್ಟೆ: ‘ಫೋರೆನ್ಸಿಕಾನ್ -2016’ ರಾಷ್ಟ್ರೀಯ ಸಮ್ಮೇಳನ ಉದ್ಘಾಟನೆ

ಕೊಣಾಜೆ, ಅ.7: ಪ್ರಕರಣವೊಂದರ ಸತ್ಯಾಸತ್ಯತೆ ಹೊರಬರಲು ಪೊಲೀಸ್ ಇಲಾಖೆ ಹಾಗೂ ಫೋರೆನ್ಸಿಕ್ ವಿಭಾಗದ ಜೊತೆಗಿನ ಸಂಬಂಧ ಅವಿನಾಭಾವವಾಗಿದ್ದರೆ ಮಾತ್ರ ಪೊಲೀಸ್ ಇಲಾಖೆಗೆ ಅಲ್ಲಿ ತನಿಖೆ ಸುಲಭ ಸಾಧ್ಯ. ವ್ಯಕ್ತಿಯೊಬ್ಬರಿಗೆ ಗುಂಡೇಟು ತಗುಲಿದಾಗ ಗುಂಡು ತಗುಲಿದ ಆ ಕ್ಷಣದಲ್ಲಿ ಗುಂಡು ಎಲುಬಿಗೆ ತಾಗಿ ಹೊರಚೆಲ್ಲಿದಾಗ ಕೆಲವೊಮ್ಮೆ ಫೋರೆನ್ಸಿಕ್ ತಜ್ಞರಿಗೂ ಆ ಪ್ರಕರಣ ಸವಾಲಾಗಿರುತ್ತದೆ. ಆಗ ಬ್ಯಾಲೆಸ್ಟಿಕ್ ತಜ್ಞರ ಸಹಾಯ ಅಗತ್ಯ. ಹಾಗಾಗಿ ಜೀವಿಶಾಸ್ತ್ರ ಸೇರಿದಂತೆ ಕೆಲವೊಂದು ವೈದ್ಯಕೀಯ ವಿಭಾಗದ ಸಹಾಯ ಇಲಾಖೆಗೆ ಅನಿವಾರ್ಯ ಎಂದು ಮಂಗಳೂರು ಪೊಲೀಸ್ ಕಮಿಷನರ್ ಎಂ. ಚಂದ್ರಶೇಖರ್ ಅಭಿಪ್ರಾಯಪಟ್ಟರು.
ನಿಟ್ಟೆ ವಿಶ್ವವಿದ್ಯಾಲಯದ ಕೆ.ಎಸ್.ಹೆಗ್ಡೆ ಮೆಡಿಕಲ್ ಕಾಲೇಜಿನ ಫೋರೆನ್ಸಿಕ್ ಹಾಗೂ ವಿಷವೈದ್ಯ ಶಾಸ್ತ್ರ ವಿಭಾಗದ ವತಿಯಿಂದ ಶುಕ್ರವಾರ ನಡೆದ ಸೌತ್ ಇಂಡಿಯನ್ ಮೆಡಿಕೋ ಲೀಗಲ್ ಅಸೋಸಿಯೇಶನ್‌ನ 13ನೆ ರಾಷ್ಟ್ರೀಯ ಸಮ್ಮೇಳನ ಹಾಗೂ ಕಾರ್ಯಗಾರ ‘ಫೋರೆನ್ಸಿಕಾನ್-2016’ ಉದ್ಘಾಟಿಸಿ ಅವರು ಮಾತನಾಡಿದರು.
ಕೆಲವೊಂದು ಕೇಸುಗಳಲ್ಲಿ ಕಠಿಣ ಸವಾಲುಗಳು ಎದುರಾದಾಗ ನ್ಯಾಯಾಲಯದ ಮುಂದೆ ಅಪರಾಧವನ್ನು ಸಾಬೀತುಪಡಿಸುವಾಗ ಅಲ್ಲಿ ಬಲವಾದ ಸಾಕ್ಷ್ಯಗಳು ಬೇಕಾಗಿದ್ದು ಸಾಕ್ಷಿಯೊಬ್ಬ ಕೊಡುವ ಮೌಖಿಕ ಸಾಕ್ಷ್ಯಕ್ಕಿಂತ ಫೊರೆನ್ಸಿಕ್ ತಜ್ಞರು ಒದಗಿಸುವ ಸಾಕ್ಷ್ಯಗಳು 100ಶೇ. ಹೆಚ್ಚಿನ ಬಲಕೊಡುತ್ತದೆ ಎಂದು ಹೇಳಿದರು. ಕೆಲವು ಪ್ರಕರಣದಲ್ಲಿ ಪರಿಕರಗಳು ಒದಗಿಸುವ ಸಾಕ್ಷ್ಯಗಳು ಸತ್ಯಕ್ಕೆ ದೂರವಾಗಿದ್ದರೂ ಫೊರೆನ್ಸಿಕ್ ತಜ್ಞರ ಜೊತೆಗೆ ಕೊಡುವ ಸಾಕ್ಷ್ಯಕ್ಕೆ ಕೋರ್ಟು ಪ್ರಾಶಸ್ತ್ಯ ಕೊಡುತ್ತದೆ. ಸಾಕ್ಷ್ಯಗಳು ಬಲವಾಗದಿದ್ದರೆ ಮಾತ್ರ ಕೋರ್ಟಿಗೆ ಸತ್ಯವನ್ನು ತಿಳಿಸಲು ಸಾಧ್ಯವಾಗುತ್ತದೆ. ಹಾಗಾಗಿ ತನಿಖೆಯ ಆರಂಭಿಕ ಹಂತದಲ್ಲಿಯೇ ನಡೆದಿರಬಹುದಾದ ಎಲ್ಲ ಸಾಧ್ಯತೆಗಳನ್ನು ತಿಳಿಯಲು ಜ್ಞಾನವನ್ನು ಬಳಸಬೇಕು ಎಂದು ನುಡಿದರು.
ಮಂಗಳೂರಿಗರು ಅದೃಷ್ಟವಂತರು. ಯಾಕೆಂದರೆ ಮಂಗಳೂರಿನಲ್ಲಿ ಒಳ್ಳೆಯ ಫೊರೆನ್ಸಿಕ್ ತಜ್ಞರಿದ್ದಾರೆ. ಇಂತಹ ಸಹಕಾರ ರಾಜ್ಯದ ಇತರ ಭಾಗದಲ್ಲಾಗಲಿ ಉತ್ತರದ ರಾಜ್ಯಗಳಲ್ಲಿ ಕಾಣಲು ಸಾಧ್ಯವಾಗಿಲ್ಲ. ಇಲ್ಲಿನ ಫೊರೆನ್ಸಿಕ್ ತಜ್ಞರು ಪೊಲೀಸ್ ಇಲಾಖೆ ಜೊತೆಗೆ ಪ್ರತಿಕ್ಷಣವೂ ಸಹಕರಿಸುತ್ತಿದ್ದಾರೆ. ಹಾಗೆಯೇ ಇಲ್ಲಿ ನಡೆಯುವ ಕಾರ್ಯಗಾರಗಳು ಸಮ್ಮೇಳನಗಳು ತಜ್ಞರ ಜೊತೆಗೆ ಚರ್ಚಿಸುವುದರಿಂದ ಮಾಹಿತಿ ಸಿಗುವುದರಿಂದ ಬಹಳಷ್ಟು ವಿಷಯಗಳು ತನಿಖೆಗೆ ಸಹಾಯವಾಗುತ್ತದೆ ಎಂದರು.
ನಿಟ್ಟೆ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಪ್ರೊ. ಡಾ.ಎಂ. ಶಾಂತಾರಾಮ ಶೆಟ್ಟಿ ಮಾತನಾಡಿ, ವೈದ್ಯಕೀಯ ಶಾಸ್ತ್ರದಲ್ಲಿ ಫೊರೆನ್ಸಿಕ್ ವಿಭಾಗ ಬಹಳ ಮಹತ್ವ ಪಡೆದುಕೊಂಡಿದ್ದು ಪೊಲೀಸ್ ಇಲಾಖೆಗೆ ಸವಾಲಾಗಿರುವ ಅಪರಾಧ ಕೃತ್ಯಗಳಲ್ಲಿ ಅದು ತನ್ನ ಪಾತ್ರ ಏನು ಎಂಬುದನ್ನು ತೋರಿಸಿಕೊಟ್ಟಿದೆ ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಭೂಷಣ್ ಗುಲಾಬ್ ರಾವ್ ಬೊರಸೆ ಮಾತನಾಡಿ, ತನಿಖೆಗೆ ಅಗತ್ಯವಾದ ದಾಖಲೆ ಸಂಗ್ರಹಕ್ಕೆ ಪ್ರತಿ ಜಿಲ್ಲೆಯಲ್ಲೂ ಫೊರೆನ್ಸಿಕ್ ತಂಡ ರಚನೆ ಆಗಬೇಕಿದ್ದು ಮಹಾರಾಷ್ಟ್ರದಲ್ಲಿ ಈಗಾಗಲೇ ಪೊಲೀಸ್ ಇಲಾಖೆ ಒಂದು ತಂಡ ರಚಿಸಿದೆ. ಕೆಲವೊಂದು ಸಂದರ್ಭ ಕೊಲೆ ಅಥವಾ ಒಂದು ಜೀವ ಕಳೆದುಕೊಂಡಾಗ ಅಲ್ಲಿ ನಡೆದಿರುವ ಎಲ್ಲ ಸಾಧ್ಯತೆಗಳನ್ನು ಫೊರೆನ್ಸಿಕ್ ತಂಡ ಪತ್ತೆಹಚ್ಚಲು ಸಾಧ್ಯವಿದ್ದು ಅವರ ಸಹಕಾರ ಅಗತ್ಯ ಎಂದರು.
ಕಾರ್ಯಕ್ರಮದಲ್ಲಿ ಮಂಗಳೂರು ವಲಯದ ದಕ್ಷ ಪ್ರಾಮಾಣಿಕ ಪೊಲೀಸ್ ಕಾನ್‌ಸ್ಟೇಬಲ್ ಬಾಬು ಶೆಟ್ಟಿ , ಆ್ಯಂಬುಲೆನ್ಸ್ ಚಾಲಕರಾದ ಬೆಳ್ತಂಗಡಿಯ ಅಬ್ದುಲ್ ಜಲೀಲ್ ಹಾಗೂ ಗಂಗಾಧರ್ ಅವರನ್ನು ಸನ್ಮಾನಿಸಲಾಯಿತು.
ಕ್ಷೇಮ ವೈಸ್ ಡೀನ್ ಪ್ರೆೊ. ಡಾ.ಅಮೃತ್ ಮಿರಾಜ್‌ಕರ್ ಹಾಗೂ ಡಾ. ಉದಯ ಕುಮಾರ್ ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಘಟನಾ ಕಾರ್ಯದರ್ಶಿ ಡಾ. ಶನವಾಝ್ ಮಣಿಪ್ಪಾಡಿ ಸ್ವಾಗತಿಸಿದರು. ದಕ್ಷಿಣ ಭಾರತ ಮೆಡಿಕೋ ಲೀಗಲ್ ಎಸೋಸಿಯೇಶನ್‌ನ ಅಧ್ಯಕ್ಷ ಡಾ. ಮಹಾಬಲೇಶ್ ಶೆಟ್ಟಿ ವಂದಿಸಿದರು. ಅನಿಷಾ ಕಾಮತ್ ಹಾಗೂ ತೀಷ್ಟಾ ಶೆಟ್ಟಿ ಉಪಸ್ಥಿತರಿದ್ದರು.







