ಕಾವೇರಿ: ರಾಜ್ಯ ಸರಕಾರ ನ್ಯಾಯಾಲಯಕ್ಕೆ ಸ್ಪಷ್ಟ ಚಿತ್ರಣ ನೀಡಲಿ:ದೇವೇಗೌಡ ಸಲಹೆ

ಕೊಲ್ಲೂರು, ಅ.7: ಕಾವೇರಿ ಜಲವಿವಾದ 1983ರಿಂದಲೂ ನಡೆದಿದ್ದು, ರಾಜಕೀಯ ಪಕ್ಷಗಳ ಮೇಲಾಟದಿಂದಾಗಿ ಅದು ಇಂದಿನವರೆಗೂ ಮುಂದುವರಿ ದುಕೊಂಡು ಬಂದಿದೆ. ಹೀಗಾಗಿ ಈ ವಿವಾದ ಇನ್ನೂ ತಣ್ಣಗಾಗಿಲ್ಲ. ರಾಜ್ಯ ಸರಕಾರ ನ್ಯಾಯಾಲಯಕ್ಕೆ ವಸ್ತುಸ್ಥಿತಿಯ ಸ್ಪಷ್ಟಚಿತ್ರಣವನ್ನು ನೀಡಬೇಕು ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ಅಧ್ಯಕ್ಷ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಇಂದು ಭೇಟಿ ನೀಡಿದ ಅವರು ಪೂಜೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಇತ್ತೀಚಿನ ಸರ್ಜಿಕಲ್ ದಾಳಿಯ ವಿವಾದದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ಗೌಪ್ಯತೆಯನ್ನು ಕಾಪಾಡಿಕೊಳ್ಳುವುದು ದೇಶದ ಹಿತದೃಷ್ಟಿಯಿಂದ ಒಳ್ಳೆಯದು ಎಂದು ಅಭಿಪ್ರಾಯಪಟ್ಟರು.
ಇಂಥ ಸೂಕ್ಷ್ಮಸಂಗತಿಗಳನ್ನು ಬಹಿರಂಗ ಪಡಿಸಬಾರದು. ಅದರಿಂದ ಜನರನ್ನು ಉದ್ರೇಕಿಸಿದಂತಾಗುತ್ತದೆ. ಇನ್ನು ಮುಂದಾದರೂ ಇಂಥ ವಿಷಯಗಳ ಕುರಿತು ಹೇಳಿಕೆ ನೀಡುವಾಗ ದೇಶದ ಭದ್ರತೆಯನ್ನು ಗಮನದಲ್ಲಿರಿಸಿಕೊಳ್ಳಬೇಕು ಎಂದವರು ನುಡಿದರು.
ಈ ಹಿಂದೆ ಕೂಡಾ ಹಲವು ಬಾರಿ ಇಂಥ ದಾಳಿಗಳು ನಡೆದಿದ್ದರೂ ಅವುಗಳನ್ನು ಹೀಗೆ ಬಹಿರಂಗ ಪಡಿಸಿರಲಿಲ್ಲ ಎಂದವರು ಈಗಿನ ಎನ್‌ಡಿಎ ಸರಕಾರದ ನಡೆಯನ್ನು ಪರೋಕ್ಷವಾಗಿ ಟೀಕಿಸಿದರು.
ಈಗಿನ ಸನ್ನಿವೇಶದಲ್ಲಿ ಪ್ರಾದೇಶಿಕ ಪಕ್ಷಗಳಿಂದ ಮಾತ್ರ ರಾಜ್ಯದ ಹಿತರಕ್ಷಣೆ ಸಾಧ್ಯ. ಎಲ್ಲಾ ರಾಜ್ಯಗಳಲ್ಲೂ ಪ್ರಾದೇಶಿಕ ಪಕ್ಷಗಳು ಬಲಿಷ್ಠವಾಗಿರುವುದು ಆ ರಾಜ್ಯದ ಹಿತದೃಷ್ಟಿಯಿಂದ ಒಳ್ಳೆಯದು ಎಂದರು.
ಜೆಡಿಎಸ್ ನಾಯಕರಾದ ಸಬ್ಲಾಡಿ ಮಂಜಯ್ಯ ಶೆಟ್ಟಿ, ಶ್ರೀಕಾಂತ ಅಡಿಗ ಕೊಲ್ಲೂರು, ಶಾಲಿನಿ ಶೆಟ್ಟಿ ಕೆಂಚನೂರು, ದಕ್ಷತ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.







