ಸಾಂಕ್ರಾಮಿಕ ರೋಗಗಳಿಂದ ಮಕ್ಕಳನ್ನು ರಕ್ಷಿಸಿ: ತಿಪ್ಪೇರುದ್ರಪ್ಪ
ವಿಶ್ವ ಕೈ ತೊಳೆಯುವ ದಿನಾಚರಣೆ

ಚಿಕ್ಕಮಗಳೂರು, ಅ.7: ಪೋಷಕರು ತಮ್ಮ ಮಕ್ಕಳಿಗೆ ಸ್ವಚ್ಛತೆಯ ಬಗ್ಗೆ ತಿಳಿ ಹೇಳುವ ಮೂಲಕ ಸಾಂಕ್ರಾಮಿಕ ರೋಗಗಳಿಂದ ರಕ್ಷಿಸಬೇಕು ಎಂದು ಪತ್ರಕರ್ತ ಬಿ.ತಿಪ್ಪೇರುದ್ರಪ್ಪ ಹೇಳಿದರು.
ನಗರದ ಆಝಾದ್ ಪಾರ್ಕ್ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಶುಕ್ರವಾರ ನಡೆದ ‘ಸಮುದಾಯದತ್ತ ಶಾಲೆ ಹಾಗೂ ವಿಶ್ವ ಕೈತೊಳೆಯುವ ದಿನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವದಲ್ಲಿ 61 ಮಿಲಿಯನ್‌ನಷ್ಟು ಮಕ್ಕಳು ಅಪೌಷ್ಟಿಕತೆ ಮತ್ತು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿದ್ದಾರೆ. ಇದಕ್ಕೆ ಮೂಲ ಕಾರಣ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಮತ್ತು ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಅರಿವಿಲ್ಲದಿರುವುದು ಎಂದರು.
ಮಕ್ಕಳು ಈ ದೇಶದ ಸಂಪತ್ತು, ಭವಿಷ್ಯದ ಆಸ್ತಿ. ಅವರು ಆರೋಗ್ಯವಂತರು ಮತ್ತು ಸದೃಢರಾಗಿದ್ದರೆ ರಾಷ್ಟ್ರ ಸುಭದ್ರವಾಗಿರುತ್ತದೆ ಎಂದ ಅವರು, ಸ್ವಚ್ಛತೆಯ ಬಗ್ಗೆ ಅರಿವಿಲ್ಲದಿರುವುದರಿಂದ ಮಕ್ಕಳು ಧೂಳು, ಕೆಸರು ಮತ್ತು ನೀರು ಸೇರಿದಂತೆ ಎಲ್ಲೆಂದರಲ್ಲಿ ಆಟವಾಡುತ್ತಿರುತ್ತಾರೆ ಬಯಲಿನಲ್ಲಿ ಶೌಚಕ್ಕೆ ಹೋಗುತ್ತಾರೆ, ಅಶುದ್ಧವಾದ ಆಹಾರ ಸೇವಿಸುತ್ತಾರೆ ಇದರಿಂದಾಗಿ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಾರೆ ಎಂದರು.
ಈ ಹಿನ್ನೆಲೆಯಲ್ಲಿ ಪೋಷಕರು ತಮ್ಮ ಮಕ್ಕಳ ಬಗ್ಗೆ ಅಸಡ್ಡೆ ತೋರಬಾರದು ಅವರನ್ನು ಪ್ರತಿ ಹಂತದಲ್ಲೂ ತಿದ್ದಿ ತೀಡುವ ಮೂಲಕ ಅವರಲ್ಲಿ ಸ್ವಚ್ಛತೆಯ ಅರಿವು ಮೂಡಿಸಬೇಕು ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಜಗದೀಶಾಚಾರ್ ಮಾತನಾಡಿ, ಮಕ್ಕಳು ಆರೋಗ್ಯವಂತರಾಗಿ ಬಾಳಬೇಕಾದರೆ ಅವರು ಸ್ವಚ್ಛವಾಗಿರುವುದನ್ನು ಕಲಿಯಬೇಕು ಎಂದು ಸಲಹೆ ಮಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ದೈಹಿಕ ಶಿಕ್ಷಕ ಎಸ್.ಇ.ಲೋಕೇಶ್ವರಾಚಾರ್, ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ವಿದ್ಯಾರ್ಥಿಗಳಿಗೆ ಕೈಕಾಲು ತೊಳೆಯುವುದು ಸೇರಿದಂತೆ ಸ್ವಚ್ಛತೆಯ ಕುರಿತು ಪ್ರಾತ್ಯಕ್ಷಿಕೆ ಮೂಲಕ ಹೇಳಿಕೊಡಲಾಯಿತು.
ಮುಖ್ಯ ಶಿಕ್ಷಕಿ ಗೀತಾ ಅಧ್ಯಕ್ಷತೆ ವಹಿಸಿದ್ದರು. ಮಾರ್ಗದರ್ಶಿ ಶಿಕ್ಷಕ ಕಟ್ಟಿಮನಿ, ಶಿಕ್ಷಕಿಯರಾದ ನಾಗವೇಣಿ, ಜಯಂತಿ,ಸಾವಿತ್ರಿ ಉಪಸ್ಥಿತರಿದ್ದರು.







