ಮದ್ಯಪಾನ ಸಮಾಜದ ಬಹುದೊಡ್ಡ ಶಾಪ: ಯಡಿಯೂರಪ್ಪ
ಜನಜಾಗೃತಿ ಜಾಥಾ, ಮಹಿಳಾ ಸಮಾವೇಶ, ಪಾನಮುಕ್ತರಿಗೆ ಅಭಿನಂದನಾ ಕಾರ್ಯಕ್ರಮ

ಶಿಕಾರಿಪುರ, ಅ.7: ಮದ್ಯಪಾನ ಸಮಾಜಕ್ಕೆ ಅಂಟಿದ ಬಹು ದೊಡ್ಡ ಶಾಪವಾಗಿದ್ದು, ಮದ್ಯವ್ಯರ್ಜನ ಶಿಬಿರಗಳ ಮೂಲಕ ವೀರೇಂದ್ರ ಹೆಗಡೆ ದಂಪತಿ ಕ್ರಾಂತಿಕಾರಕ ಬದಲಾವಣೆಯಲ್ಲಿ ತೊಡಗಿಕೊಂಡಿದ್ದಾರೆ ಎಂದು ಸಂಸದ ಬಿ.ಎಸ್.ಯಡಿಯೂರಪ್ಪ ಹೇಳದ್ದಾರೆ.
ಶುಕ್ರವಾರ ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಶ್ರೀ.ಕ್ಷೇ.ಧ.ಗ್ರಾ.ಯೋ ವತಿಯಿಂದ ನಡೆದ ಜನಜಾಗೃತಿ ಜಾಥಾ, ಮಹಿಳಾ ಸಮಾವೇಶ, ಪಾನಮುಕ್ತರಿಗೆ ಅಭಿನಂದನಾ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತ ಆಧ್ಯಾತ್ಮಿಕತೆಯ ತಾಯಿನಾಡು. ಭಾರತದತ್ತ ಜಗತ್ತು ಹೆಚ್ಚಿನ ಗಮನಹರಿಸಿದೆ. ನಾವು 21 ನೆ ಶತಮಾನದಲ್ಲಿದ್ದರೂ ನಮ್ಮ ಸಂಸ್ಕೃತಿ, ಆಚಾರ, ವಿಚಾರ, ನಡೆ, ನುಡಿಯ ಬಗ್ಗೆ ಪ್ರತಿಯೊಬ್ಬರೂ ಗಮನಹರಿಸಬೇಕಿದೆ ಎಂದರು.
ಶ್ರೀ.ಕ್ಷೇ.ಧ.ಗ್ರಾ.ಯೋ. ಪೂಜ್ಯ ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ರಾಜ್ಯದ 23 ಜಿಲ್ಲೆಗಳಲ್ಲಿ ಜನಜಾಗೃತಿ ಅಭಿಯಾನ, ಸಹಸ್ರಾರು ಮದ್ಯವರ್ಜನ ಶಿಬಿರಗಳು, 72 ಸಾವಿರಕ್ಕೂ ಅಧಿಕ ಮದ್ಯವ್ಯಸನಿಗಳನ್ನು ಮುಕ್ತರಾಗಿಸಿದ ಹಿರಿಮೆ ಹೊಂದಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸ್ವಾಸ್ಥ ಸಂಕಲ್ಪದ ಮೂಲಕ ಕಲ್ಪಿಸಲು ಅಸಾಧ್ಯವಾದ ರೀತಿಯಲ್ಲಿ ಕ್ರಾಂತಿಕಾರಕ ಬದಲಾವಣೆಯಲ್ಲಿ ತೊಡಗಿಸಿಕೊಂಡಿದೆ ಎಂದು ಶ್ಲಾಘಿಸಿದರು.
ಮದ್ಯಪಾನ ಮಾನವಕುಲಕ್ಕೆ ಅಂಟಿದ ದೊಡ್ಡ ಶಾಪ. ಧಾರ್ಮಿಕವಾಗಿ ನಿಷೇಧಿಸಲ್ಪಟ್ಟ ಮದ್ಯಪಾನ ಪಂಚಮಹಾ ಪಾಪಗಳಲ್ಲಿ ಒಂದಾಗಿದೆ ಎಂದ ಅವರು ಕುಡಿತದಿಂದ ದುಷ್ಕೃತ್ಯದಲ್ಲಿ ತೊಡಗಿ ದೈಹಿಕ, ಮಾನಸಿಕವಾಗಿ ಜರ್ಜರಿತರಾಗಿ ಸಂಸಾರ ಬೀದಿಪಾಲಾಗಲಿದೆ.ದೇಶದಲ್ಲಿ ಶೇ.30 ಕ್ಕಿಂತ ಅಧಿಕ ಜನತೆ ಮದ್ಯದ ದಾಸರಾಗಿದ್ದಾರೆ ಎಂದರು.
ಮಹಿಳೆ ಆರ್ಥಿಕ,ಸಾಮಾಜಿಕ,ಶೈಕ್ಷಣಿಕವಾಗಿ ಅಭಿವೃದ್ದಿಹೊಂದಲು ಮಹಿಳಾ ಸ್ವಸಹಾಯ ಸಂಘಗಳು ಪ್ರಬಲವಾಗಬೇಕಾಗಿದೆ ಎಂದ ಅವರು ಸಂಘದಿಂದ ಆರ್ಥಿಕ ಸಾಮಾಜಿಕ ಬದಲಾವಣೆ ಸಾದ್ಯ ಸರಕಾರ ವೀರೇಂದ್ರಹೆಗ್ಗಡೆ ಕೇವಲ ಜಾಗೃತಿಯನ್ನು ರೂಪಿಸಬಹುದಾಗಿದ್ದು ಮಾನಸಿಕವಾಗಿ ವ್ಯಕ್ತಿ ಸಿದ್ದವಾಗಬೇಕಾಗಿದೆ ಎಂದರು.
ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಶಿವಮೊಗ್ಗ ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಪೆಡಂಭೂತವಾಗಿ ಸಮಾಜವನ್ನು ಕಾಡುತ್ತಿರುವ ಮದ್ಯಪಾನ ತ್ಯಜಿಸಿ ಜಾಗೃತಿಗಾಗಿ ಹಲವು ಶರಣರು, ಸ್ವಾಮಿಗಳು ಶ್ರಮಿಸುತ್ತಿದ್ದಾರೆ ಎಂದರು. ಮದ್ಯವರ್ಜನ ಶಿಬಿರದ ಮೂಲಕ ಶ್ರೀ.ಕ್ಷೇ.ಧ.ಗ್ರಾ.ಯೋ. ಸಾಮಾನ್ಯ ಜನತೆಗೆ ಆಶಾಕಿರಣವಾಗಿದೆ ಎಂದರು.
ಆರಂಭದಲ್ಲಿ ಶ್ರೀ ಹುಚ್ಚುರಾಯಸ್ವಾಮಿ ದೇವಾಲಯದಿಂದ ಜನಜಾಗೃತಿ ಜಾಥಾ ನಡೆಯಿತು. ಪಾನಮುಕ್ತರನ್ನು, ಸ್ವಾಸ್ಥ ಸಂಕಲ್ಪ ಯೋಜನೆಯಡಿ ಶಾಲಾ ಕಾಲೇಜುಗಳಲ್ಲಿ ಉಪನ್ಯಾಸ ನೀಡಿದ ಶಿಕ್ಷಕ ಮಹೇಶ್ವರಪ್ಪ ಅವರನ್ನು ಅಭಿನಂದಿಸಲಾಯಿತು.
ಅಧ್ಯಕ್ಷತೆಯನ್ನು ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಪ್ರೇಮ ಕುಮಾರ ಗೌಡ ವಹಿಸಿ ಮಾತನಾಡಿದರು. ವೇದಿಕೆಯ ರಾಜ್ಯಾದ್ಯಕ್ಷ ಸತೀಶ ಹೊನ್ನವಳ್ಳಿ, ಉಪಾಧ್ಯಕ್ಷ ಉದಯಶೆಟ್ಟಿ, ಸದಸ್ಯ ಶಶಿಧರ ಚುರ್ಚುಗುಂಡಿ, ಭಾಸ್ಕರ್, ಶಿವರಾಯಪ್ರಭು, ಕೇಂದ್ರ ಒಕ್ಕೂಟದ ಅಧ್ಯಕ್ಷ ಧನಪಾಲ್ ಮತ್ತಿತರರು ಉಪಸ್ಥಿತರಿದ್ದರು.
ಲಕ್ಷ್ಮಿ ಸಂಗಡಿಗರು ಪ್ರಾರ್ಥಿಸಿದರು. ಪುರುಷೋತ್ತಮ ಸ್ವಾಗತಿಸಿ ವಂದಿಸಿದರು.







