ಒಳಚರಂಡಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ
29.38 ಲಕ್ಷ ರೂ. ಒಳಚರಂಡಿ ಅಭಿವೃದ್ಧಿ ಯೋಜನೆಗೆ ಚಾಲನೆ

ಹೊನ್ನಾವರ, ಅ.7: ಪಟ್ಟಣದ ಒಳಚರಂಡಿ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು. ಶಾಸಕಿ ಶಾರದಾ ಶೆಟ್ಟಿಯವರ ಮುತುವರ್ಜಿಯಿಂದ 29.38 ಲಕ್ಷ ರೂ.ಗಳ ಒಳಚರಂಡಿ ಅಭಿವೃದ್ಧಿ ಯೋಜನೆ ಪಟ್ಟಣಕ್ಕೆ ಸಿಗುವಂತಾಗಿದೆ. ಇದಕ್ಕೆ ನಾನು ಅವರಿಗೆ ಅಭಿ ನಂದಿಸುತ್ತೇನೆ ಎಂದು ಸಚಿವ ಆರ್.ವಿ. ದೇಶಪಾಂಡೆ ಹೇಳಿದರು.
ಅವರು ಪಟ್ಟಣದ ಪಪಂ ಆವರಣದಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಮತ್ತು ಪಪಂ ಆಶ್ರಯದಲ್ಲಿ ಒಳಚರಂಡಿ ಯೋಜನೆಯ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಹೊಸ ಬಡಾವಣೆಗಳಿಗೆ ಅನುಮತಿ ನೀಡಿದಂತೆ, ಮೂಲಭೂತ ಸೌಕರ್ಯಗಳ ವ್ಯವಸ್ಥೆಯನ್ನೂ ಕಲ್ಪಿಸಬೇಕಾಗಿದೆ. ಕ್ರಿಯಾ ಯೋಜನೆ ರೂಪಿಸುವಾಗಲೇ ಮೂಲಭೂತ ಸೌಕರ್ಯ ಇರಬೇಕು. ಅವು ಇಲ್ಲದಿದ್ದರೆ ಜನಸಾಮಾನ್ಯರಿಗೆ ತೊಂದರೆಯಾಗುತ್ತದೆ. ಜನಪ್ರತಿನಿಧಿಗಳು ಇದಕ್ಕೆ ಹೆಚ್ಚು ಗಮನ ನೀಡಬೇಕು. ಸರಕಾರ ಮೂಲಭೂತ ಸೌಕರ್ಯ ಕಲ್ಪಿಸಲು ಗ್ರಾಮೀಣ ಹಾಗೂ ಪಟ್ಟಣಗಳಿಗೆ ಹೆಚ್ಚಿನ ಯೋಜನೆ ರೂಪಿಸಿದೆ ಎಂದರು.
ರಸ್ತೆ, ದಾರಿದೀಪ, ಒಳಚರಂಡಿಗಳ ವ್ಯವಸ್ಥೆ ಕಲ್ಪಿಸಿದಾಗ ಕೈಗಾರಿಕೆ ಬರುವಂತಾಗುತ್ತದೆ. ಆರ್ಥಿಕ ಉನ್ನತಿ, ಉದ್ಯೋಗ ಸೃಷ್ಟಿಯಾಗುತ್ತದೆ. ಮೂಲಭೂತ ಸೌಕರ್ಯಕ್ಕೆ ಸರಕಾರ ಹೆಚ್ಚಿನ ಒತ್ತು ನೀಡುತ್ತಿದೆ. ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸು ನನಸಾಗಿಸಲು ಸ್ವಚ್ಛತೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು. ನಗರೊತ್ಥಾನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮೂರನೆ ಯೋಜನೆಯಡಿ ಪಟ್ಟಣಕ್ಕೆ 7.5 ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದರು.
ಶಾಸಕಿ ಶಾರದಾ ಶೆಟ್ಟಿ ಮಾತನಾಡಿ, ಪಟ್ಟಣದಲ್ಲಿ ಬಹುಕಾಲದ ಬೇಡಿಕೆಯಾದ ಒಳಚರಂಡಿ ಯೋಜನೆಯನ್ನು ಅನುಷ್ಠಾನಕ್ಕೆ ತಾಂತ್ರಿಕ ಕಾರಣಗಳಿಂದ ನೆನೆಗುದಿಗೆ ಬಿದ್ದಿತ್ತು. ತ್ಯಾಜ್ಯ ನೀರು ಗಟಾರದಲ್ಲಿ ಹರಿಯುವಂತಾಗಿತ್ತು. ಇದಕ್ಕೆ ಶಾಶ್ವತ ಪರಿಹಾರ ರೂಪಿಸಲು ಉಸ್ತುವಾರಿ ಸಚಿವರು ಹಾಗೂ ಮಂಡಳಿಯ ಅಧ್ಯಕ್ಷ ಬಿ.ಜಿ. ಚಂದ್ರಶೇಖರ ಅವರ ಸಹಕಾರದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗಬಾರದೆಂಬ ದೃಷ್ಟಿಯಿಂದ ಈ ಯೋಜನೆ ರೂಪಿಸಲಾಗಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.
ಹೊನ್ನಾವರ ತಾಲೂಕಿನಲ್ಲಿ ಕೆಲಸಗಳಾಗುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿದೆ. ಗ್ರಾಮೀಣ ಭಾಗ ಮತ್ತು ನಗರ ಪ್ರದೇಶದ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದೇನೆ ಎಂದರು.
ಈ ವೇಳೆ ಪಪಂ ಅಧ್ಯಕ್ಷೆ ಜೈನಾಬಿ ಸಾಬ್, ಉಪಾಧ್ಯಕ್ಷೆ ಶರಾವತಿ ಮೇಸ್ತ, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ ಮೇಸ್ತ, ಜಿಪಂ ಅಧ್ಯಕ್ಷೆ ಜೈಶ್ರೀ ಮೊಗೇರ, ಮಾಜಿ ಶಾಸಕ ಡಾ.ಎಂ.ಪಿ.ಕರ್ಕಿ, ಜಗದೀಪ ತೆಂಗೇರಿ ಹಾಗೂ ಪಪಂ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.
ತಾಪಂ ಮುಖ್ಯಾಧಿಕಾರಿ ಅರುಣ ನಾಯ್ಕ ಸ್ವಾಗತಿಸಿದರು. ಅಧ್ಯಕ್ಷೆ ಜೈನಾಬಿ ಸಾಬ್ ವಂದಿಸಿದರು, ಸುದೀಶ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.







