ರೂಪನ್ವಾಲ್ ಆಯೋಗದ ವರದಿ ವಿರೋಧಿಸಿ ಜೆಎಸಿ ರ್ಯಾಲಿ
ವೇಮುಲಾ ಆತ್ಮಹತ್ಯೆ ಪ್ರಕರಣ
ಹೈದರಾಬಾದ್, ಅ.7: ಹೈದರಾಬಾದ್ ವಿವಿಯ ವಿದ್ಯಾರ್ಥಿಯಾಗಿದ್ದ ರೋಹಿತ್ ವೇಮುಲಾನ ಆತ್ಮಹತ್ಯೆಯ ಕುರಿತಾಗಿ ನ್ಯಾಯಮೂರ್ತಿ ರೂಪನ್ವಾಲ್ ಆಯೋಗದ ವರದಿಯು ‘ರಾಜಕೀಯ ಪ್ರೇರಿತ’ ಎಂದು ಆರೋಪಿಸಿರುವ ಹೈದರಾಬಾದ್ ವಿವಿಯ ಸಾಮಾಜಿಕ ನ್ಯಾಯಕ್ಕಾಗಿ ಜಂಟಿ ಕ್ರಿಯಾ ಸಮಿತಿಯು, ಇಂದು ಪ್ರತಿಭಟನಾ ರ್ಯಾಲಿ ನಡೆಸುವುದಾಗಿ ತಿಳಿಸಿದೆ.
‘ರೋಹಿತ್ ವೇಮುಲಾನಿಗೆ ನ್ಯಾಯ’ ಎಂಬ ಬ್ಯಾನರ್‌ನಡಿ ಇಂದು ಸಂಜೆ ಕ್ಯಾಂಪಸ್‌ನಿಂದ ವಿವಿಯ ಪ್ರಧಾನ ದ್ವಾರದ ವರೆಗೆ ಪ್ರತಿಭಟನಾ ರ್ಯಾಲಿಯೊಂದನ್ನು ನಡೆಸಲಾಗುವುದೆಂದು ವೇಮುಲಾನ ಸಾವಿನ ಕುರಿತಾದ ಪ್ರತಿಭಟನೆಯ ನೇತೃತ್ವ ವಹಿಸಿರುವ ಸಾಮಾಜಿಕ ನ್ಯಾಯ ಜಂಟಿ ಕ್ರಿಯಾ ಸಮಿತಿ ಹೇಳಿದೆ.
ಈ ವರ್ಷ ಜ.17ರಂದು ರೋಹಿತ್ ವೇಮುಲಾ ಆತ್ಮಹತ್ಯೆ ಮಾಡಿಕೊಂಡಿದ್ದನು. ಈ ಬಗ್ಗೆ ತನಿಖೆಗಾಗಿ ಮಾನವ ಸಂಪನ್ಮೂಲ ಸಚಿವಾಲಯವು ನ್ಯಾ. ರೂಪನ್ವಾಲ್ ನೇತೃತ್ವದ ಆಯೋಗವನ್ನು ರಚಿಸಿತ್ತು. ಅದು, ರೋಹಿತ್ ವೇಮುಲಾ ದಲಿತನಲ್ಲ. ಆತ ವೈಯಕ್ತಿಕ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂಬ ತೀರ್ಮಾನಕ್ಕೆ ಬಂದಿದೆ. ಪ್ರಕರಣದಲ್ಲಿ ಆಯೋಗವು ಕೇಂದ್ರ ಸಚಿವರಾದ ಸ್ಮತಿ ಇರಾನಿ ಹಾಗೂ ಬಂಡಾರು ದತ್ತಾತ್ರೇಯರಿಗೆ ಕ್ಲೀನ್ ಚಿಟ್ ನೀಡಿದೆ.
ದಲಿತರಾದುದಕ್ಕಾಗಿ ರೋಹಿತ್ ವೇಮುಲಾ ಹಾಗೂ ಆತನ ತಾಯಿ ರಾಧಿಕಾ ವೇಮುಲಾ ಅನುಭವಿಸಿದ್ದ ತಾರತಮ್ಯ ಹಾಗೂ ಅವಮಾನವನ್ನು ಗಣನೆಗೆ ತೆಗೆದುಕೊಳ್ಳದೆ ರೂಪನ್ವಾಲ್ ಆಯೋಗವು ದೌರ್ಜನ್ಯಾತ್ಮಕ ವರದಿಯನ್ನು ನೀಡಿದೆ. ಅವರು ಪರಿಶಿಷ್ಟ ಜಾತಿಗಳಿಗಿರುವ ಸೌಲಭ್ಯ ಪಡೆಯಲು ಎಸ್ಸಿ ಪ್ರಮಾಣ ಪತ್ರ ಪಡೆದಿದ್ದರೆಂದು ಸಮಿತಿ ತೀರ್ಮಾನಿಸಿದೆಯೆಂದು ಜೆಎಸಿ ಹೇಳಿದೆ.
ಆಯೋಗದ ವರದಿಯು ರಾಜಕೀಯ ಪ್ರೇರಿತವಾಗಿದ್ದು, ಮೇಮುಲಾನ ವಿರುದ್ಧ ದೌರ್ಜನ್ಯ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದ ಆರೋಪಿಗಳ ಪರವಾಗಿದೆ. ಅದು, ಮಾನವ ಸಂಪನ್ಮೂಲ ಸಚಿವಾಲಯ ಗುರುತಿಸಿದ್ದ ಸಾಂಸ್ಥಿಕ ವ್ಯವಸ್ಥೆಯ ಲೋಪದ ಕುರಿತು ವಿಚಾರಣೆ ನಡೆಸಬೇಕೆಂಬ ಕಡ್ಡಾಯವನ್ನು ಮೀರಿದೆ. ಅದರ ಬದಲು ರೋಹಿತ್‌ನ ಜಾತಿಯ ಬಗ್ಗೆ ವ್ಯಾಪಕವಾಗಿ ಹೇಳುವುದನ್ನು ಆಯ್ಕೆ ಮಾಡಿದೆಯೆಂದು ಅದು ಆರೋಪಿಸಿದೆ.





