ಜಯಪುರದಲ್ಲಿ ಚಲೋ ಉಡುಪಿ ಜಾಥಾಕ್ಕೆ ಸಂಭ್ರಮದ ಸ್ವಾಗತ

ಚಲೋಉಡುಪಿ, ಸ್ವಾಭಿಮಾನಿ ಸಂಘರ್ಷ ಜಾಥಾದ ನಾಲ್ಕನೇ ದಿನವಾದ ಇಂದು, ಜಯಪುರದಲ್ಲಿ ನಡೆದ ಚಲೋಉಡುಪಿ ಜಾಥಾವನ್ನು ಬರಮಾಡಿಕೊಂಡು, ಬಹುಜನ ಸೋಷಿಯಲ್ ಫೌಂಡೇಷನ್ ನ ಗೋಪಾಲ್ ಮೂರ್ತಿ ಅವರು ಮಾತನಾಡುತ್ತಾ, ಗೋ ರಕ್ಷಕರು ಮನೆಯಲ್ಲಿ ಹೋಗಿ ಫ್ರಿಡ್ಜ್ ಅಲ್ಲಿ ಏನಿದೆ ಎಂದು ಹುಡುಕುವ ಬದಲು, ಸ್ಲಮ್ ಗೆ ಹೋಗಿ ಗುಡಿಸಲು ಹುಡುಕಿ ಬಂಗಲೆ ಕಟ್ಟಿಸಿಕೊಡಲಿ, ಬಟ್ಟೆ ಇಲ್ಲದ ಹೆಣ್ಣು ಮಕ್ಕಳಿಗೆ ಬಟ್ಟೆ ಕೊಡಿಸಲಿ, ಹಾಲು ಇಲ್ಲದ ಮಕ್ಕಳಿಗೆ ಹಾಲು ಕೊಡಿಸಲಿ. ಎಂದರು
ಜಾಥಾವು ಜಯಪುರ ತಲುಪುವ ಹೊತ್ತಿಗೆ ಮಳೆ ಬರುತ್ತಿತ್ತು, ಮಳೆಯನ್ನೂ ಲೆಕ್ಕಿಸದೆ ಜನರು ಜಾಥಾಗಾಗಿ ಕಾದು ನಿಂತಿದ್ದರು. ಚಲೋಉಡುಪಿ ತಂಡದ ಪ್ರೀತಿಗಾಗಿ ಹಾಡುಗಾರರು ಹಾಡುಗಳನ್ನು ಹಾಡುವ ಮೂಲಕ ಕಾರ್ಯಕ್ರಮ ಪ್ರಾರಂಭವಾಯಿತು.
ಚಲೋಉಡುಪಿ ತಂಡದ ಪರವಾಗಿ ಹುಲಿಕುಂಟೆ ಮೂರ್ತಿ, ಕರ್ನಾಟಕದಲ್ಲಿ ಸಿಗುತ್ತಿರುವ ಬೆಂಬಲ ನೋಡಿ ಸಂತಸವಾಗುತ್ತಿದೆ.. ನಮಗೆ ಯಾಕೆ ನೀಲಿ ಬಾವುಟ, ಅಂಬೇಡ್ಕರ್ ಮತ್ತು ಸ್ವಾಭಿಮಾನ ಸಂಘರ್ಷ ಜಾಥಾ ಮುಖ್ಯವಾಯಿತು ಅಂದರೆ, ಇಂದು ದಲಿತರ ಸ್ವಾಭಿಮಾನದ ಮೇಲೆ ಕೇಸರಿ ಬಟ್ಟೆ ಹೊದಿಸಲಾಗಿದೆ, ಶೋಷಣೆ ಹೆಚ್ಚಾಗಿದೆ.. ಇದನ್ನು ನೋಡಿ ನಮ್ಮ ಆತ್ಮಸಾಕ್ಷಿ ಸತ್ತು ಹೋಗಿತ್ತು. ಗುಜರಾತ್ ನಲ್ಲಿ ನಡೆದ ಉನಾ ಹೋರಾಟ ನಮಗೆ ಸ್ಪೂರ್ತಿ ತುಂಬಿದೆ.. ಇದರಿಂದ ನಾವು ಒಂದು ಹೋರಾಟ ರೂಪಿಸಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಕೊಟ್ಟ ಕರೆಯ ಪ್ರತಿಕ್ರಿಯೆಯೇ ಈ ಹೋರಾಟ ಜಾಥಾ.. ದೇಶ ಪ್ರೇಮದ ಮುಖವಾಡ ತೊಟ್ಟಿರುವ ಕೇಸರಿಯ ಡೋಂಗಿ ದೇಶ ಭಕ್ತರು ಈ ದೇಶ ನಮ್ಮದು ಎಂದು ಹೇಳುತ್ತಿದ್ದಾರೆ.. ಇದನ್ನು ನಾವು ವಿರೋಧಿಸಿ ಇದು ನಾರಾಯಣ ಗುರು ಅವರ ಜಾಗ, ಇದು ನಮ್ಮ ದೇಶ ಎಂಬ ಸಂದೇಶವನ್ನು ನಾವು ಅವರಿಗೆ ತೋರಿಸಬೇಕು.. ನಮ್ಮ ಎದೆಯೊಳಗೆ ಅಂಬೇಡ್ಕರ್ ಅವರ ಸಂವಿಧಾನ ಇಳಿಯಲಿ.. 70-80ರ ದಶಕದಲ್ಲಿ ಹಿರಿಯರು ಹಚ್ಚಿದ ದೀಪವೆ ನಮ್ಮನ್ನು ಇನ್ನು ಬೆಳಗುತ್ತಿದೆ.. ಅವರ ಮಾರ್ಗದರ್ಶನದಲ್ಲಿ ಈ ಹೋರಾಟ ನಡೀತಿದೆ.. ನಮ್ಮ ಹೋರಾಟದ ಜೊತೆ, ಅಂಬೇಡ್ಕರ್, ನೀಲಿ ಬಾವುಟದ ಜೊತೆ ಮಹಿಳಾ, ತೃತೀಯ ಲಿಂಗಿ, ಕಮ್ಯುನಿಸ್ಟ್, ರೈತ ಹೀಗೆ ಎಲ್ಲಾ ಸಂಘಟನೆಯವರು ಇದ್ದಾರೆ.. ನೀವೂ ಕೂಡ ನಮ್ಮ ಜೊತೆ ಬನ್ನಿ, ಬೆಂಬಲಿಸಿ ಎಂದರು.
ಬಹುಜನ ಸೋಷಿಯಲ್ ಫೌಂಡೇಷನ್ ನ ಗೋಪಾಲ್ ಮೂರ್ತಿ ಮಾತನಾಡಿ, ಇಂದು ದೇಶದಲ್ಲಿ ಸ್ವತಂತ್ರ ಬಂದು ಇಷ್ಟು ವರ್ಷ ಆದರೂ ಬಡತನ ಇದೆ, ಶೋಷಣೆ ಇದೆ.. ಅಂಬೇಡ್ಕರ್ ಅವರ ಸಂವಿಧಾನ ಸರಿಯಾಗಿ ಜಾರಿ ಆಗಿದ್ದರೆ ಹೀಗೆ ಶೋಷಣೆ, ಬಡತನ ಇರುತ್ತಿರಲಿಲ್ಲ.. ಇಂದು ಕೈ ಗಡಿಯಾರ ಕಟ್ಟಿದ್ದಾರೆ ಅನ್ನುವ ಕಾರಣಕ್ಕೆ, ಹೊಸ ಬಟ್ಟೆ ಹಾಕಿದ್ದಾರೆ ಅನ್ನುವ ಕಾರಣಕ್ಕೆ, ದನದ ಮಾಂಸ ತಿನ್ನುತ್ತಾರೆ ಅನ್ನುವ ಕಾರಣಕ್ಕೆ ದಲಿತರ ಮಾರಣ ಹೋಮ ಮಾಡುತ್ತಿದ್ದಾರೆ.. ಇಂದು ನಕಲಿ ಗೋ ರಕ್ಷಕರು ನಮ್ಮ ದೇಶದಲ್ಲಿ ಇದ್ದಾರೆ ಎಂದು ನಮ್ಮ ಪ್ರಧಾನಿ ಮೋದಿ ಅವರೇ ಒಪ್ಪಿಕೊಂಡಿದ್ದಾರೆ.. ಈ ನಕಲಿ ಗೋ ರಕ್ಷಕರು ಮನೆಯಲ್ಲಿ ಹೋಗಿ ಫ್ರಿಡ್ಜ್ ಅಲ್ಲಿ ಏನಿದೆ ಎಂದು ಹುಡುಕುವ ಬದಲು, ಸ್ಲಮ್ ಗೆ ಹೋಗಿ ಗುಡಿಸಲು ಹುಡುಕಿ ಬಂಗಲೆ ಕಟ್ಟಿಸಿಕೊಡಲಿ, ಬಟ್ಟೆ ಇಲ್ಲದ ಹೆಣ್ಣು ಮಕ್ಕಳಿಗೆ ಬಟ್ಟೆ ಕೊಡಿಸಲಿ, ಹಾಲು ಇಲ್ಲದ ಮಕ್ಕಳಿಗೆ ಹಾಲು ಕೊಡಿಸಲಿ.. ಗೋ ಮಾಂಸ ತಿನ್ನಬೇಡಿ ಅನ್ನಲು ಯಾರಿಗೂ ಹಾಕಿಲ್ಲ.. ಮನೆ ಇಲ್ಲದೆ, ಊಟ ಇಲ್ಲದೆ, ಮಲಗಲೂ ಜಾಗ ಇಲ್ಲದೆ ಪ್ರಾಣಿಗಳಂತೆ ಬದುಕುತ್ತಿದ್ದಾರೆ.. ಇದನ್ನು ನೋಡದ ಈ ಜನ ಕೇವಲ ಮುಸ್ಲಿಂ-ದಲಿತ ವಿರೋಧಿ ಕೆಲಸವನ್ನು ಮಾಡುತ್ತಿದ್ದಾರೆ.. ಈ ಜಾಥದಿಂದ ದಲಿತ,ಅಲ್ಪಸಂಖ್ಯಾತ, ಮಹಿಳೆ ಎಲ್ಲರು ಒಂದಾಗಬೇಕು.. ಚಲೋಉಡುಪಿ ಈವೆಂಟ್ ಆಗಬಾರದು ಇದು ಒಂದು ಮೂವ್ಮೆಂಟ್ ಆಗಬೇಕು.. ಅತ್ಯಂತ ಪರಿಶ್ರಮದಿಂದ 12 ವರ್ಷ ಹೋರಾಟ ಮಾಡಿ ಅಂಬೇಡ್ಕರ್ ಅವರು ಎಲ್ಲಾ ಸಮುದಾಯಕ್ಕೆ ವೋಟಿನ ಹಕ್ಕನ್ನು ಕೊಡಿಸಿದ್ದಾರೆ, ಇದನ್ನು ಅರ್ಥ ಮಾಡಿಕೊಂಡು ಹಿಂದುಳಿದ ಸಮುದಾಯ ಸಂಘಪರಿವಾರ ಬಿಟ್ಟು ಬರಬೇಕು.. ಇದನ್ನೆಲ್ಲ ಅರ್ಥ ಮಾಡಿಕೊಂಡು ಒಂದಾಗಿ ಹೋರಾಟ ಮಾಡಿದ್ರೆ ಶೋಷಣೆ ನಿಲ್ಲಿಸಬಹುದು.. ಬಿಜೆಪಿ ಅವರು ದಲಿತರಿಗೆ ದೇಗುಲ ಪ್ರವೇಶ ಹೋರಾಟದ ನಿರ್ಣಯವನ್ನು ಪ್ರಸ್ತಾಪಿಸುತ್ತಾ, ನಮಗೆ ದೇವಸ್ಥಾನ ಅಗತ್ಯವಿಲ್ಲ ನಮಗೆ ಶಾಲಾ ಕಾಲೇಜು ಅಗತ್ಯವಿದೆ, ನಮಗೆ ಭೂಮಿ ಕೊಡಿ ಎಂದರು. ಈ ನಮ್ಮ ಚಲೋಉಡುಪಿ ಹೋರಾಟದ ಪ್ರತಿಫಲ ಏನಾಗಿರಬೇಕು ಅಂದ್ರೆ ಮುಂದಿನ ಚುನಾವಣೆಯಲ್ಲಿ ಮನುವಾದಿ ರಾಜಕಾರಣಿಗಳ ಸೋಲು ಕಾಣುವಂತೆ ಮಾಡಬೇಕು.. ನೀವು ಇನ್ನು ಮುಂದೆ ಸತ್ತ ದನಗಳನ್ನ ಮುಟ್ಟಬೇಡಿ, ಚರ್ಮ ತೆಗಿಯಬೇಡಿ. ನನ್ನ ಮನವಿ ಏನಂದರೆ ಮುಸ್ಲಿಂ, ಕ್ರಿಶ್ಚಿಯನ್ ಮತ್ತು ದಲಿತರು ಒಂದಾಗಬೇಕು ನಾವು ಚಲೋ ಉಡಪಿಯನ್ನು ಬೆಂಬಲಿಸೋಣ ಎಂದರು.
ಮುನೀರ್ ಕಾಟಿಪಳ್ಳ ಮಾತನಾಡುತ್ತಾ, ಜೈ ಭೀಮ್ ನಮ್ಮದೂ ಕೂಡ, ನಿಮ್ಮ ಜತೆ ನಾವು ಯಾವಾಗಲೂ ಇರ್ತಿವಿ, ಈ ಹೋರಾಟ ನಮ್ಮದೂ ಕೂಡ.. ಈ ಮಲೆನಾಡು ದಲಿತ-ದಮನಿತ ಶೋಷಣೆಗೆ ದಾಖಲೆ ಸೃಷ್ಟಿಸಿದೆ. ಹಾಗೆಯೇ ಇಂದು ಅದಕ್ಕೆ ಪ್ರತ್ಯುತ್ತರ ನೀಡುವ ವಿಮೋಚನೆಯ ಹೋರಾಟವಾಗಿ ಚಲೋಉಡುಪಿ ಜಾಥಾ ಹೊರ ಹೊಮ್ಮಲಿದೆ ಮುಸಲ್ಮಾನರೂ ಈ ಹೋರಾಟಕ್ಕೆ ಬೆಂಬಲ ಸೂಚಿಸುವುದು ತುಂಬಾ ಅಗತ್ಯವಾಗಿದೆ.. ಇಂದು ಆಸ್ಪತ್ರೆ ಇಲ್ಲದೆ, ಔಷಧಿ ಇಲ್ಲದೆ ಜನ ಸಾಯುತ್ತಿದ್ದಾರೆ, ಶಿಕ್ಷಣ ಉಳ್ಳವರ ಪಾಲಾಗಿದೆ, 2-5 ಎಕರೆ ತುಂಡು ಭೂಮಿಗಾಗಿ ಬೇಡುವ ಸ್ಥಿತಿ ಎದುರಾಗಿದೆ, ಅಸಮಾನ ಶಿಕ್ಷಣವಿದೆ.. ಇದರ ಭಾದಿತರು ದಲಿತರೇ ಆಗಿದ್ದಾರೆ. ಸಾಮಾಜಿಕ ಅಸಮಾನತೆಗೆ ದಲಿತ ಅಲ್ಪಸಂಖ್ಯಾತರು ತುತ್ತಾಗಿದ್ದಾರೆ ಇದನ್ನು ಆಲೋಚನೆ ಮಾಡಬೇಕಿರುವ ಯುವ ಸಮುದಾಯ ನಕಲಿ ದೇಶ ಪ್ರೇಮ, ಧರ್ಮ ಪ್ರೇಮದ ಅಮಲಿನಲ್ಲಿ ಮುಳುಗಿದ್ದಾರೆ .ಇವರನ್ನು ಹೊರಗೆ ಕರೆತರಬೇಕಿದೆ. ಇದು ಇನ್ನೂ ಮುಂದೆ ಹೋಗಿ ಸ್ವಜಾತಿಯಲ್ಲೆ ಕೊಲೆಗಳನ್ನು ಮಾಡುತ್ತಿದ್ದಾರೆ.. ಈ ನಕಲಿ ದೇಶಪ್ರೇಮಿಗಳ ಬಣ್ಣ ಬಯಲು ಮಾಡಬೇಕಿದೆ. ಇದರ ವಿರುದ್ಧ ಸಮರಶೀಲ ಹೋರಾಟವನ್ನು ಅಂಬೇಡ್ಕರ್ ಅವರ ದಾರಿಯಲ್ಲಿ ಬುದ್ಧ, ನಾರಾಯಣಗುರು, ಭಗತ್ ಸಿಂಗ್ ಅವರ ದಾರಿಯಲ್ಲಿ ಒಟ್ಟಿಗೆ ಸಾಗಿ ಚಲೋಉಡುಪಿಯನ್ನು ಯಶಸ್ವಿಗೊಳಿಸಿಬೇಕಿದೆ ಎಂದರು.
ಕುವೆಂಪು ವಿ.ವಿಯ ಪ್ರೊ. ಕೇಶವ ಶರ್ಮ, ಡಾ. ಪ್ರೇಮ್ ಕುಮಾರ್ ಮತ್ತು ಇತರರು ಬೆಂಬಲ ಸೂಚಿಸಿ ಮಾತನಾಡಿದರು. ಕೊನೆಯಲ್ಲಿ ಚಲೋಉಡುಪಿ ತಂಡದಿಂದ ಬೀದಿನಾಟಕ ಪ್ರದರ್ಶನ ಮಾಡಲಾಯಿತು.







