ಬಿಸಿಸಿಐನಿಂದ ರಾಜ್ಯ ಕ್ರಿಕೆಟ್ ಸಂಘಗಳಿಗೆ ಹಣ ಬಿಡುಗಡೆಗೆ ಸುಪ್ರೀಂ ನಿರ್ಬಂಧ
ಹೊಸದಿಲ್ಲಿ,ಅ.7: ಬಿಸಿಸಿಐನಿಂದ ರಾಜ್ಯ ಕ್ರಿಕೆಟ್ ಸಂಘಗಳಿಗೆ ಹಣ ಬಿಡುಗಡೆಯನ್ನು ನಿರ್ಬಂಧಿಸಿ ಶುಕ್ರವಾರ ಆದೇಶಿಸಿದ ಸರ್ವೋಚ್ಚ ನ್ಯಾಯಾಲಯವು, ಹಣವನ್ನು ಈಗಾಗಲೇ ಸ್ವೀಕರಿಸಿರುವ ರಾಜ್ಯ ಸಮಿತಿಗಳು ತಾವು ನ್ಯಾ.ಲೋಧಾ ಸಮಿತಿಯು ಮಾಡಿರುವ ಸುಧಾರಣಾ ಶಿಫಾರಸುಗಳಿಗೆ ಬದ್ಧರೆನ್ನುವುದನ್ನು ಖಚಿತಪಡಿಸಿ ಮುಚ್ಚಳಿಕೆಯನ್ನು ಸಲ್ಲಿಸುವವರೆಗೆ ಅದನ್ನು ಬಳಸಿಕೊಳ್ಳುವಂತಿಲ್ಲ ಎಂದು ತಾಕೀತು ಮಾಡಿತು.
ಸೆ.30ರಂದು ಹಣವನ್ನು ಸ್ವೀಕರಿಸಿರುವ 13 ರಾಜ್ಯ ಕ್ರಿಕೆಟ್ ಸಮಿತಿಗಳು ಇಂತಹ ಮುಚ್ಚಳಿಕೆಯನ್ನು ಸಲ್ಲಿಸುವವರೆಗೂ ಆ ಹಣವನ್ನು ನಿರಖು ಠೇವಣಿಯನ್ನಾಗಿರಿಸಬೇಕು ಎಂದೂ ಅದು ಹೇಳಿತು. ಲೋಧಾ ಸಮಿತಿಯು ಶಿಫಾರಸು ಮಾಡಿರುವ ಸುಧಾರಣೆಗಳನ್ನು ಜಾರಿಗೆ ತರಲು ನಿರಾಕರಿಸುತ್ತಿರುವುದಕ್ಕಾಗಿ ಬಿಸಿಸಿಐ ಅನ್ನು ದಂಡನೆಗೊಳಪಡಿಸುವುದಾಗಿ ಸರ್ವೋಚ್ಚ ನ್ಯಾಯಾಲಯವು ಬೆದರಿಕೆಯನ್ನೊಡ್ಡಿರುವ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಸಂಭಾವ್ಯ ನಾಯಕತ್ವ ಬಿಕ್ಕಟ್ಟನ್ನು ಎದುರಿಸಬಹುದು. ಬಿಸಿಸಿಐ ತನಗೆ ಇಷ್ಟವಿರುವ ಸುಧಾರಣಾ ಕ್ರಮಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಲಾಗಿದೆ. ಸುಧಾರಣೆಗಳು ಜಾರಿಯಾಗುವವರೆಗೂ ಹಣ ಬಿಡುಗಡೆ ಮಾಡದಂತೆ ಲೋಧಾ ಸಮಿತಿಯು ನಿರ್ದೇಶಿಸಿದ್ದರೂ ಸೆ.29ರಂದು ರಾಜ್ಯ ಕ್ರಿಕೆಟ್ ಸಂಘಗಳಿಗೆ 400 ಕೋ.ರೂ.ಯನ್ನು ಬಿಡುಗಡೆ ಗೊಳಿಸುವ ಅನಿವಾರ್ಯವೇನಿತ್ತು ಎಂದು ಸರ್ವೋಚ್ಚ ನ್ಯಾಯಾಲಯವು ಗುರುವಾರ ಬಿಸಿಸಿಐನ್ನು ಪ್ರಶ್ನಿಸಿತ್ತು. ಶಿಫಾರಸುಗಳಿಗೆ ಮೊದಲೇ, ನವೆಂಬರ್ 2015ರಲ್ಲಿ ತೆಗೆದು ಕೊಳ್ಳಲಾಗಿದ್ದ ನಿರ್ಧಾರಕ್ಕನುಗುಣವಾಗಿ ಈ ಹಣವನ್ನು ವಿತರಿಸಲಾಗಿದೆ ಎಂದು ಬಿಸಿಸಿಐ ಪ್ರತಿಪಾದಿಸಿದ್ದರೂ, ತನ್ನ ವಾದವನ್ನು ಬೆಂಬಲಿಸುವ ಯಾವುದೇ ದಾಖಲೆಗಳನ್ನು ಮಂಡಿಸಲು ಅದಕ್ಕೆ ಸಾಧ್ಯವಾಗಿರಲಿಲ್ಲ.
ಸರ್ವೋಚ್ಚ ನ್ಯಾಯಾಲಯವು ಒಪ್ಪಿಕೊಂಡಿರುವ, ಲೋಧಾ ಸಮಿತಿಯು ಶಿಫಾರಸು ಮಾಡಿರುವ ಸುಧಾರಣೆಗಳನ್ನು ಜಾರಿಗೊಳಿಸುವ ಬಗ್ಗೆ ಯಾವುದೇ ಖಾತರಿಯನ್ನು ನೀಡಲು ಬಿಸಿಸಿಐ ಗುರುವಾರ ನಿರಾಕರಿಸಿತ್ತು. ಇದು ನ್ಯಾಯಾಂಗದೊಂದಿಗಿನ ಬಿಕ್ಕಟ್ಟನ್ನು ಇನ್ನಷ್ಟು ಹದಗೆಡಿಸಿದೆ.
ಬಿಸಿಸಿಐನ ಉದ್ಧಟತನದಿಂದ ನ್ಯಾಯಾಲಯವು ಎಷ್ಟೊಂದು ಕೋಪಗೊಂಡಿದೆಯೆಂದರೆ ಅದು ಮಂಡಳಿಯ ಉನ್ನತ ನಾಯಕತ್ವವನ್ನು ವಜಾಗೊಳಿಸುವುದಾಗಿ ಮತ್ತು ರಾಜ್ಯ ಕ್ರಿಕೆಟ್ ಸಂಘಗಳಿಗೆ ಹಣ ಬಿಡುಗಡೆಯನ್ನು ನಿಷೇಧಿಸಿ ಮಧ್ಯಾಂತರ ಆದೇಶವನ್ನು ಹೊರಡಿಸುವುದಾಗಿ ಬೆದರಿಕೆಯೊಡ್ಡಿತ್ತು,
ಸುಧಾರಣೆಗಳನ್ನು ಅಳವಡಿಸಿಕೊಳ್ಳದ್ದಕ್ಕೆ ರಾಜ್ಯ ಕ್ರಿಕೆಟ್ ಸಂಘಗಳನ್ನು ದೂರಿದ್ದ ಬಿಸಿಸಿಐ, ತನಗೆ ಅವುಗಳ ಮೇಲೆ ಯಾವುದೇ ನಿಯಂತ್ರಣವಿಲ್ಲವೆಂದು ಹೇಳಿತ್ತು. ಈ ಸಂಘಗಳು ಅಷ್ಟೊಂದು ಮೊಂಡುತನ ತೋರಿಸುತ್ತಿದ್ದರೆ ಅವುಗಳಿಗೆ ಹಣವನ್ನೇಕೆ ಕೊಡುತ್ತೀರಿ ಎಂದೂ ನ್ಯಾಯಾಲಯವು ಪ್ರಶ್ನಿಸಿತ್ತು.





