ಹಂಗಾಮಿ ಸಿಎಂ ಅಗತ್ಯವಿಲ್ಲ, ಜಯಲಲಿತಾ ಚೇತರಿಸಿಕೊಳ್ಳುತ್ತಿದ್ದಾರೆ: ಎಡಿಎಂಕೆ
ಚೆನ್ನೈ,ಅ.7: ಜಯಲಲಿತಾ ಅವರು ಪ್ರಜ್ಞಾವಸ್ಥೆಯಲ್ಲಿದ್ದಾರೆ ಮತ್ತು ಚೇತರಿಸಿಕೊಳ್ಳುತ್ತಿದ್ದಾರೆ, ಹೀಗಾಗಿ ತಮಿಳುನಾಡಿಗೆ ಹಂಗಾಮಿ ಮುಖ್ಯಮಂತ್ರಿಯ ಅಗತ್ಯವಿಲ್ಲ ಎಂದು ಆಡಳಿತ ಎಡಿಎಂಕೆಯ ವಕ್ತಾರ ಆವಡಿ ಕುಮಾರ್ ಅವರು ಇಂದಿಲ್ಲಿ ತಿಳಿಸಿದರು.
ಹಂಗಾಮಿ ಮುಖ್ಯಮಂತ್ರಿಯನ್ನು ನೇಮಿಸಬೇಕೆಂಬ ಕಾನೂನಾತ್ಮಕ ಅಗತ್ಯವಿಲ್ಲ. ಈ ಹಿಂದೆ 2001 ಮತ್ತು 2014ರಲ್ಲಿ ಕಾನೂನಿನ ಅಡ್ಡಿಗಳಿಂದಾಗಿ ಮಾತ್ರ ರಾಜ್ಯದ ಹಣಕಾಸು ಸಚಿವ ಒ.ಪನ್ನೀರ್ ಸೆಲ್ವನ್ ಅವರು ಜಯಲಲಿತಾರ ಖುರ್ಚಿಯ ಮೇಲೆ ಕುಳಿತಿದ್ದರು ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತಿದ್ದ ಅವರು ಹೇಳಿದರು.
ಎಡಿಎಂಕೆ ಸ್ಥಾಪಕ ಎಂ.ಜಿ.ರಾಮಚಂದ್ರನ್ ಅವರು 1984ರಲ್ಲಿ ಅನಾರೋಗ್ಯದಿಂದಾಗಿ ಅಮೆರಿಕದ ಆಸ್ಪತ್ರೆಗೆ ದಾಖಲಾಗಿದ್ದರು,ಆದರೂ ಚುನಾವಣೆಯಲ್ಲಿ ಗೆದ್ದಿದ್ದರು. ಅವರು ಚೆನ್ನೈಗೆ ವಾಪಸಾದಾಗ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಡಿಎಂಕೆಯ ನಾಯಕ ಮುರಸೋಳಿ ಮಾರನ್ ಅವರು ಅನಾರೋಗ್ಯಪೀಡಿತರಾಗಿ ಹಾಸಿಗೆ ಹಿಡಿದಿದ್ದರೂ ತನ್ನ ನಿಧನದವರೆಗೆ ಕೇಂದ್ರದಲ್ಲಿ ಖಾತೆರಹಿತ ಸಚಿವರಾಗಿದ್ದರು ಎಂದು ಅವರು ಉದಾಹರಿಸಿದರು.
ಜ್ವರ ಮತ್ತು ನಿರ್ಜಲೀಕರಣದ ತೊಂದರೆಯಿಂದಾಗಿ ಜಯಲಲಿತಾ ಸೆ.22ರಿಂದ ಅಪೋಲೊ ಆಸ್ಪತ್ರೆಯಲ್ಲಿದ್ದಾರೆ. ಅವರು ಇನ್ನಷ್ಟು ಕಾಲ ಆಸ್ಪತ್ರೆಯಲ್ಲಿರಬೇಕಾಗುತ್ತದೆ ಎಂದು ಗುರುವಾರ ವೈದ್ಯರು ತಿಳಿಸಿದ್ದರು.





