ಮುಂಬೈ ಉಚ್ಚ ನ್ಯಾಯಾಲಯದ ತಡೆಯಾಜ್ಞೆ ವಿಸ್ತರಿಸಿದ ಸುಪ್ರೀಂ
ಹಾಜಿ ಅಲಿ ದರ್ಗಾಕ್ಕೆ ಮಹಿಳೆಯರಿಗೆ ಪ್ರವೇಶ
ಮುಂಬೈ,ಅ.7: ಇಲ್ಲಿಯ ಪ್ರಸಿದ್ಧ ಹಾಜಿ ಅಲಿ ದರ್ಗಾದ ಕೇಂದ್ರ ಸ್ಥಾನದ ಬಳಿ ಮಹಿಳೆಯರ ಪ್ರವೇಶದ ಮೇಲಿನ ನಿಷೇಧವನ್ನು ಹಿಂದೆಗೆದುಕೊಳ್ಳುವ ತನ್ನ ನಿರ್ಧಾರದ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಿ ಬಾಂಬೆ ಉಚ್ಚ ನ್ಯಾಯಾ ಲಯವು ನೀಡಿರುವ ತಡೆಯಾಜ್ಞೆಯ ಅವಧಿಯನ್ನು ಸರ್ವೋಚ್ಚ ನ್ಯಾಯಾಲಯವು ಇಂದು ಮುಂದಿನ ವಿಚಾರಣಾ ದಿನಾಂಕವಾದ ಅ.17ರವರೆಗೆ ವಿಸ್ತರಿಸಿದೆ.
ಆದರೆ, ಉಚ್ಚ ನ್ಯಾಯಾಲಯದ ನಿರ್ಧಾರವನ್ನು ಪ್ರಶ್ನಿಸಿ ಹಾಜಿ ಅಲಿ ದರ್ಗಾ ಟ್ರಸ್ಟ್ ಸಲ್ಲಿಸಿರುವ ಮೇಲ್ಮನವಿಯ ಸಂಕ್ಷಿಪ್ತ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶ ಟಿ.ಎಸ್.ಠಾಕೂರ್ ಮತ್ತು ನ್ಯಾ.ಎ.ಎಂ.ಖನ್ವಿಲ್ಕರ್ ಅವರನ್ನೊಳಗೊಂಡ ಪೀಠವು, ಟ್ರಸ್ಟ್ ಪ್ರಗತಿಪರ ನಿಲುವು ತಳೆಯುತ್ತದೆ ಎಂಬ ಆಶಯವನ್ನು ವ್ಯಕ್ತಪಡಿಸಿತು. ಟ್ರಸ್ಟ್ ಪರ ಹಾಜರಾಗಿದ್ದ ಹಿರಿಯ ವಕೀಲ ಗೋಪಾಲ ಸುಬ್ರಮಣಿಯಂ ಅವರು ತಾನು ಪ್ರಗತಿಪರ ಧೋರಣೆಯೊಂದಿಗೆ ಬಂದಿದ್ದೇನೆ ಎಂದು ಪೀಠಕ್ಕೆ ಭರವಸೆ ನೀಡಿದರಲ್ಲದೆ, ಎಲ್ಲ ಪವಿತ್ರ ಗ್ರಂಥಗಳು ಸಮಾನತೆಯನ್ನು ಉತ್ತೇಜಿಸಿವೆ ಮತ್ತು ಇದಕ್ಕೆ ವಿರುದ್ಧವಾದುದು ಸಲಹಾಯೋಗ್ಯವಲ್ಲ ಎಂದರು.
ಒಂದು ನಿರ್ದಿಷ್ಟ ಸ್ಥಳದ ಆಚೆಗೆ ಪುರುಷರು ಮತ್ತು ಮಹಿಳೆಯರಿಗೆ ಪ್ರವೇಶಾವಕಾಶವಿಲ್ಲ ಎಂದಾದರೆ ಯಾವುದೇ ಸಮಸ್ಯೆಯಿಲ್ಲ. ಆದರೆ ಕೆಲವರಿಗೆ ಮಾತ್ರ ಪ್ರವೇಶಾವಕಾಶ ನೀಡಿ ಇತರರನ್ನು ತಡೆದರೆ ಅದು ಸಮಸ್ಯೆಯಾಗುತ್ತದೆ ಎಂದೂ ಪೀಠವು ಹೇಳಿತು. ಸುಬ್ರಮಣಿಯನ್ ಕೋರಿಕೆಯ ಮೇರೆಗೆ ನ್ಯಾಯಾಲಯವು ವಿಚಾರಣೆಯನ್ನು ಅ.17ಕ್ಕೆ ಮುಂದೂಡಿತು.





