ಗೋವಾ: ಸುಗಂಧ ದ್ರವ್ಯ ವಿನ್ಯಾಸಕಿ ಮೋನಿಕಾ ನಿಗೂಢ ಸಾವು
ಪಣಜಿ, ಅ.7: ಭಾರತದ ಖ್ಯಾತ ಸುಗಂಧ ದ್ರವ್ಯ ವಿನ್ಯಾಸಕಿ ಮೋನಿಕಾ ಘುರ್ಡೆಯವರ ಮೃತ ದೇಹವು ಗೋವಾದ ಸಾನ್ಗೋಲ್ಡಾ ಪ್ರದೇಶದ ಅವರ ಮನೆಯಲ್ಲಿ ಶುಕ್ರವಾರ ಪತ್ತೆಯಾಗಿದೆ. ಕೈ-ಕಾಲುಗಳು ಕಟ್ಟಲ್ಪಟ್ಟು, ನಗ್ನವಾಗಿದ್ದ ಮೃತದೇಹ ಪತ್ತೆಯಾದ ಬಳಿಕ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.
39ರ ಹರೆಯದ ಮೋನಿಕಾ ಗುರುವಾರ ರಾತ್ರಿ ಒಬ್ಬರೇ ಮನೆಯಲ್ಲಿದ್ದ ವೇಳೆ, ಅವರನ್ನು ದರೋಡೆ ಮಾಡಿ, ಅತ್ಯಾಚಾರ ವೆಸಗಿ ಕೊಲೆ ಮಾಡಲಾಗಿದೆ ಯೆಂಬ ಶಂಕೆಯಿದೆಯೆಂದು ತನಿಖೆಯಲ್ಲಿ ಪಾಲ್ಗೊಂಡಿರುವ ಅಧಿಕಾರಿ ಯೊಬ್ಬರು ತಿಳಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪೊಲೀಸರು ಮೋನಿಕಾರ ನೆರೆಹೊರೆಯವರ ವಿಚಾರಣೆ ಆರಂಭಿಸಿದ್ದಾರೆ.
ಭಾರತದ ಅತ್ಯುತ್ತಮ ಸುಗಂಧ ದ್ರವ್ಯ ಉತ್ಪಾದಕರಲೊಬ್ಬರೆಂದು ಪರಿಗಣಿಸಲಾಗಿದ್ದ ಮೋನಿಕಾ, ಈ ವೃತ್ತಿಗೆ ಬರುವ ಮುನ್ನ ಯಶಸ್ವಿ ಛಾಯಾಗ್ರಾಹಕಿಯಾಗಿದ್ದರು. ಅವರು ಚೆನ್ನೈಯಲ್ಲಿ ತನ್ನ ಮೊದಲ ಪ್ರಯೋಗಾಲಯವನ್ನು ಸ್ಥಾಪಿಸಿದ ಬಳಿಕ, ವಿಶ್ವಾದ್ಯಂತ ‘ಪರಿಮಳ’ ಕಾರ್ಯಾಗಾರಗಳನ್ನು ನಡೆಸಲಾರಂಭಿಸಿದ್ದರು.
Next Story





