ಬೋಟ್ ಮಗುಚಿ ಮಗು ಸಮುದ್ರ ಪಾಲು : ನಿರ್ಲಕ್ಷ್ಯ ತೋರಿದ ಗುತ್ತಿಗೆ ಕಂಪೆನಿಗೆ ನೋಟಿಸ್

ಮಂಗಳೂರು, ಅ.7: ಕಳೆದ ಬುಧವಾರ ಪಣಂಬೂರು ಬೀಚ್‌ನಲ್ಲಿ ಸ್ಪೀಡ್‌ಬೋಟ್ ಮಗುಚಿ ಬಿದ್ದು ಮಗು ಸಮುದ್ರ ಪಾಲಾದ ಘಟನೆಗೆ ಸಂಬಂಧಿಸಿದಂತೆ ಬೀಚ್ ನಿರ್ವಹಣೆಯ ಗುತ್ತಿಗೆ ಕಂಪೆನಿಯ ನಿರ್ಲಕ್ಷ್ಯವೇ ಕಾರಣ ಎಂದು ತಿಳಿದು ಬಂದಿದ್ದು. ಈ ಸಂಬಂಧ ಪ್ರವಾಸೋದ್ಯಮ ಇಲಾಖೆ ಗುತ್ತಿಗೆ ಕಂಪೆನಿಗೆ ನೋಟೀಸು ಜಾರಿ ಮಾಡಿದೆ.
ಬೀಚ್ ನಿರ್ವಹಣೆ ಮತ್ತು ಬೋಟಿಂಗ್‌ಗೆ ಸಂಬಂಧಿಸಿ ಮಂಗಳೂರಿನ ಜ್ಯೋತಿ ಅಡ್ವಟೈಸರ್ ಕಂಪೆನಿಯು ಗುತ್ತಿಗೆಯನ್ನು ಪಡೆದುಕೊಂಡಿತ್ತು. ಕಳೆದ ಬೇಸಿಗೆ ಕಾಲದಲ್ಲಿ ಇವರು ಸ್ಪೀಡ್ ಬೋಟ್ ನಿರ್ವಹಣೆಯನ್ನು ಮಾಡುತ್ತಿದ್ದರು. ಆದರೆ ಮಳೆಗಾಲ ಆರಂಭವಾಗುವ ಮುನ್ನ ಪ್ರವಾಸೋದ್ಯಮ ಇಲಾಖೆ ಗುತ್ತಿಗೆ ಕಂಪೆನಿಗೆ ನೋಟಿಸ್ ಜಾರಿ ಮಾಡಿದ್ದು ಮಾನ್ಸೂನ್ ಆರಂಭವಾದ ಬಳಿಕದಿಂದ ಮುಂದಿನ ಆದೇಶ ಬರುವವರೆಗೆ ಬೋಟಿಂಗ್ ನಡೆಸದಂತೆ ಆದೇಶಿಸಿತ್ತು. ಅಲ್ಲದೆ ಕಂಪೆನಿ ಬಳಸುತ್ತಿದ್ದ ಬೋಟ್ ಬಳಕೆಗೆ ಸೂಕ್ತ ಅಲ್ಲ ಎನ್ನುವುದನ್ನೂ ಇಲಾಖೆ ತಿಳಿಸಿತ್ತು. ಆದರೆ ಇಲಾಖೆಯ ಆದೇಶವನ್ನು ನಿರ್ಲಕ್ಷಿಸಿದ ಕಂಪೆನಿ ಕಳೆದೆರಡು ತಿಂಗಳಿನಿಂದ ಬೋಟಿಂಗ್ ನಡೆಸುತ್ತಿತ್ತಲ್ಲದೆ, ಬಳಕೆಗೆ ಯೋಗ್ಯವಲ್ಲದ ಬೋಟ್ ಬಳಸುತ್ತಿತ್ತು ಎನ್ನಲಾಗಿದೆ.
ಕಳೆದ ಬುಧವಾರ ಪಣಂಬೂರು ಬೀಚಿಗೆ ಬಂದಿದ್ದ ಕುಟುಂಬವೊಂದನ್ನು ಗುತ್ತಿಗೆ ಕಂಪೆನಿ ಬಳಕೆಗೆ ಯೋಗ್ಯವಲ್ಲದ ಬೋಟ್‌ನಲ್ಲಿ ರೈಡಿಂಗ್ ನಡೆಸಿತ್ತು. ಪರಿಣಾಮ ಮರಳಿ ಬರುವ ವೇಳೆ ಬೋಟ್ ಕೆಟ್ಟು ನಿಂತು ಸೆರೆಯ ಅಬ್ಬರಕ್ಕೆ ಮಗುಚಿ ಬಿದ್ದು ಎರಡೂವರೆ ವರಷದ ಮಗು ನೀರು ಪಾಲಾಗಿತ್ತು. ಘಟನೆ ನಡೆದ ಕೂಡಲೇ ಎಚ್ಚೆತ್ತುಕೊಂಡ ಪ್ರವಾಸೋದ್ಯಮ ಇಲಾಖೆ ಕಂಪೆನಿಗೆ ನೋಟೀಸ್ ಜಾರಿ ಮಾಡಿದ್ದು ಆದೇಶ ಮೀರಿ ಬೋಟಿಂಗ್ ನಡೆಸಿದ ಬಗ್ಗೆ ಕಾರಣ ಕೇಳಿದೆ ಎಂದು ತಿಳಿದುಬಂದಿದೆ.
ಅಲ್ಲದೆ ಈ ಸಂಬಂಧ ಮೀನುಗಾರಿಕಾ ಇಲಾಖೆ, ಕೋಸ್ಟ್‌ಗಾರ್ಡ್ ಸಹಿತ ಸಂಬಂಧಿತ ಇಲಾಖೆಗಳಿಂದ ಪರವಾನಿಗೆ ಪಡೆದುಕೊಂಡಿದೆಯೇ? ಪಡೆದುಕೊಂಡಿದ್ದರೆ ಕೂಡಲೇ ಪ್ರವಾಸೋದ್ಯಮ ಇಲಾಖೆಗೆ ಹಾಜರು ಪಡಿಸುವಂತೆಯೂ ನೋಟಿಸ್‌ನಲ್ಲಿ ತಿಳಿಸಲಾಗಿದ್ದು. ಒಂದು ವೇಳೆ ಪರವಾನಿಗೆ ಇಲ್ಲದೆ ಬೋಟಿಂಗ್ ನಡೆಸಿದ್ದಾದರೆ ಗುತ್ತಿಗೆ ರದ್ದು ಪಡಿಸುವುದಾಗಿ ಪ್ರವಾಸೋದ್ಯಮ ಇಲಾಖೆ ನೋಟಿಸಿನಲ್ಲಿ ತಿಳಿಸಿದೆ ಎಂದು ಮೂಲಗಳು ತಿಳಿಸಿವೆ.







