ಬನ್ಸಲ್ ಆತ್ಮಹತ್ಯೆಯ ಬಗ್ಗೆ ಬಿಜೆಪಿ ಅಧ್ಯಕ್ಷ ಅಮಿತ್‌ಶಾರನ್ನು ಪ್ರಶ್ನಿಸುವ ಧೈರ್ಯವಿದೆಯೇ?
ಪತ್ರಕರ್ತರಿಗೆ ಮನೀಷ್ ಸಿಸೋಡಿಯ ಸವಾಲು
ಹೊಸದಿಲ್ಲಿ, ಅ.7: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆ ನಡೆಸಿದ್ದ ಸೀಮಿತ ದಾಳಿಗೆ ಪುರಾವೆ ನೀಡುವಂತೆ ಆಗ್ರಹಿಸಿದುದಕ್ಕಾಗಿ ದಿಲ್ಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲರನ್ನು ಟೀಕಿಸಿದ ಬಿಜೆಪಿ ಅಧ್ಯಕ್ಷ ಅಮಿತ್ ಶಾರ ವಿರುದ್ಧ ದಿಲ್ಲಿಯ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಶುಕ್ರವಾರ ತೀವ್ರ ದಾಳಿ ಆರಂಭಿಸಿದ್ದಾರೆ.
ಅದಕ್ಕಾಗಿ ಅವರು ಟ್ವೀಟರನ್ನು ಬಳಸಿ ಕೊಂಡಿದ್ದು, ಕೇಂದ್ರ ಸರಕಾರದ ಅಧಿಕಾರಿ ಬಿ.ಕೆ. ಬನ್ಸಲ್‌ರ ಆತ್ಮಹತ್ಯಾ ಪತ್ರದಲ್ಲಿ ಹೆಸರು ಕಾಣಿಸಿಕೊಂಡಿರುವ ಬಗ್ಗೆ ಶಾರನ್ನು ಪ್ರಶ್ನಿಸಲು ಯಾವ ಪತ್ರಕರ್ತನಿಗಾದರೂ ಧೈರ್ಯವಿದೆಯೇ? ಎಂದು ಸವಾಲು ಹಾಕಿದ್ದಾರೆ.
ಬನ್ಸಲ್‌ರ ಆತ್ಮಹತ್ಯಾ ಪತ್ರದ ಬಗ್ಗೆ ಯಾವನೇ ಪತ್ರಕರ್ತ ಶಾರನ್ನು ವಿಚಾರಿಸಿದ್ದಾನೆಯೇ? ಅಥವಾ ಆತ್ಮಹತ್ಯೆಯ ಬಳಿಕ ಪತ್ರಕರ್ತರು ಅಲ್ಲಿಗೆ ಹೋಗಿದ್ದಾರೆಯೇ? ಎಂದು ಸಿಸೋಡಿಯ ಪ್ರಶ್ನಿಸಿದ್ದಾರೆ.
ತನ್ನ ವಿರೋಧಿಗಳಿಗೆ ದೇಶಭಕ್ತಿಯ ಕುರಿತು ಪ್ರಮಾಣಪತ್ರ ನೀಡುತ್ತಿದ್ದಾರೆಂದು ಶಾರ ವಿರುದ್ಧ ಕಿಡಿಕಾರಿರುವ ಅವರು, ಈಗ ಶಾ ಬೇರೆಯವರಿಗೂ ದೇಶಭಕ್ತಿಯ ಪ್ರಮಾಣಪತ್ರ ವಿತರಿಸಲಿದ್ದಾರೆ. ಅವರ ಕ್ರಿಮಿನಲ್ ಹಿನ್ನೆಲೆಯ ಕುರಿತು ಇಡೀ ದೇಶಕ್ಕೆ ತಿಳಿದಿದೆ. ಅರವಿಂದ ಕೇಜ್ರಿವಾಲರ ಹೆಸರನ್ನು ಉಚ್ಚರಿಸಲು ಶಾರಿಗೆ ಯೋಗ್ಯತೆಯಿಲ್ಲ. ರಾಜಕೀಯ ಸದಾಚಾರಕ್ಕೆ ಅವರೊಂದು ಕಪ್ಪು ಚುಕ್ಕೆಯಾಗಿದ್ದಾರೆಂದು ಆರೋಪಿಸಿದ್ದಾರೆ.
ಭಾರತೀಯ ಸೇನೆ ಇಡೀ ದೇಶಕ್ಕೆ ಸೇರಿದುದಾಗಿದೆ. ಈ ದೇಶದ ಜನರದಾಗಿದೆ. ಸೈನಿಕರು ನಮ್ಮವರಾಗಿದ್ದಾರೆ. ಅಮಿತ್ ಶಾರನ್ನು ಭಾರತೀಯ ಸೇನೆಯ ಪ್ರಭಾರಿಯನ್ನಾಗಿ ಯಾರು ಮಾಡಿದ್ದಾರೆಂದು ಸಿಸೋಡಿಯಾ ಪ್ರಶ್ನಿಸಿದ್ದಾರೆ.





