ದರೋಡೆಗೆ ಸಂಚು: ಆರು ಮಂದಿ ಬಂಧನ

ಮಂಗಳೂರು, ಅ. 7: ನಗರದ ಹೊರ ವಲಯದ ಮರಕಡ ಬಸ್ಸು ನಿಲ್ದಾಣದ ಬಳಿ ನಿಂತ ದರೋಡೆಗೆ ಸಂಚು ರೂಪಿಸುತ್ತಿದ್ದ 6 ಮಂದಿಯ ತಂಡವನ್ನು ಕಾವೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಗೌತಮ್ ಆಕಾಶಭವನ (26), ಕೌಶಿಕ್ ಆಕಾಶಭವನ (22), ವಿಶಾಲ್ ಕುಮಾರ್ ಕುಂಜತ್ತಬೈಲ್ (22), ಪ್ರೀತಮ್ ಆಕಾಶಭವನ (22), ರಿತೇಶ್ ಆಕಾಶಭವನ (19), ವಿಶಾಲ್ ದಾಸ್ ಆಕಾಶ್‌ಭವನ (31) ಎಂದು ಗುರುತಿಸಲಾಗಿದೆ.
ತಂಡವೊಂದು ಮರಕಡ ಬಸ್ಸು ತಂಗುದಾಣದ ಬಳಿ ದರೋಡೆಗೆ ಸಂಚು ರೂಪಿಸುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಗುರುವಾರ ರಾತ್ರಿ 12:15ರ ಹೊತ್ತಿಗೆ ಕಾವೂರು ಠಾಣಾ ಪಿಎಸ್ಸೈ ಉಮೇಶ್ ಕುಮಾರ್ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದಾರೆ. ಪೊಲೀಸರನ್ನು ಕಂಡ ಯುವಕರು ಅಲ್ಲಿಂದ ಓಡಲು ಯತ್ನಿಸಿದಾಗ ಅವರನ್ನು ಪೊಲೀಸರು ಬೆನ್ನಟ್ಟಿ ಹಿಡಿದಿದ್ದಾರೆ. ಬಳಿಕ ವಿಚಾರಣೆ ನಡೆಸಿದಾಗ ಆರೋಪಿಗಳು ರಸ್ತೆಯಲ್ಲಿ ಹೋಗುವ ವಾಹನವನ್ನು ಅಡ್ಡಹಾಕಿ ದರೋಡೆಗೆ ಸಂಚು ರೂಪಿಸುತ್ತಿದ್ದಾರೆಂದು ತಿಳಿದು ಬಂದಿದೆ.
ಆರೋಪಿಗಳಿಂದ ಪೊಲೀಸರು ಮೆಣಸಿನ ಹುಡಿ, 2 ಚೂರಿಯನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





