ತಣ್ಣಗಾದ ಕಾವೇರಿ ಕಿಚ್ಚು ತ್ತಿಬೆಲೆ ಗಡಿ ಪ್ರದೇಶದಲ್ಲಿ ವಾಹನ ಸಂಚಾರ ಪುನಾರಂಭ
ಬೆಂಗಳೂರು, ಅ.7: ಕಾವೇರಿ ಹೋರಾಟ ಹಿನ್ನೆಲೆಯಲ್ಲಿ ಕರ್ನಾಟಕ ಮತ್ತು ತಮಿಳುನಾಡಿನ ಮಧ್ಯೆ ಸ್ಥಗಿತಗೊಂಡಿದ್ದ ವಾಹನ ಸಂಚಾರ ಪುನಾರಂಭಗೊಂಡಿದೆ. ನಗರದ ಹೊರ ವಲಯ ಅತ್ತಿಬೆಲೆ ಗಡಿಭಾಗದಲ್ಲಿ ಗುರುವಾರದಿಂದ ವಾಹನಗಳ ಓಡಾಟಕ್ಕೆ ಪೊಲೀಸರು ಅವಕಾಶ ನೀಡಿದ್ದಾರೆ.
ಕಾವೇರಿ ವಿವಾದದಲ್ಲಿ ಭುಗಿಲೆದ್ದ ಆಕ್ರೋಶದಿಂದ ಉಭಯ ರಾಜ್ಯಗಳ ಗಡಿ ಪ್ರದೇಶಗಳಲ್ಲಿ ಅಶಾಂತಿ ಮತ್ತು ಅಭದ್ರತೆ ತಲೆದೋರಿತ್ತು. ಸುರಕ್ಷತೆಯ ದೃಷ್ಟಿಯಿಂದ ಪೊಲೀಸರು ಹೊಸೂರು ಮತ್ತು ಅತ್ತಿಬೆಲೆ ಗಡಿಯಲ್ಲಿ ಕಳೆದ ಒಂದು ತಿಂಗಳಿಂದ ಅಂತರರಾಜ್ಯ ವಾಹನಗಳ ಓಡಾಟಕ್ಕೆ ನಿರ್ಬಂಧ ಹೇರಲಾಗಿತ್ತು. ಇದರಿಂದ ಪ್ರಯಾಣಿಕರು, ವಾಹನ ಸವಾರರು ಮತ್ತು ಮಾಲಕರು ಪೇಚಿಗೆ ಸಿಲುಕಿದ್ದರು.
ಮಂಗಳವಾರ ಸುಪ್ರೀಂ ಕೋರ್ಟ್ ರಾಜ್ಯಪರ ತೀರ್ಪು ನೀಡಿದ ಬಳಿಕ ಹೋರಾಟದ ತೀವ್ರತೆ ಕಡಿಮೆಯಾಗಿದೆ. ಸದ್ಯ ಕಾವೇರಿ ಕಿಚ್ಚು ತಣ್ಣಗಾದ ಮೇಲೆ ಪೊಲೀಸರು ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಇದರಿಂದ ಪ್ರಯಾಣಿಕರು, ಕಾರ್ಮಿಕರು ವಾಹನಗಳ ಮಾಲಕರು ಮತ್ತು ಚಾಲಕರು ನಿಟ್ಟುಸಿರು ಬಿಟ್ಟಂತಾಗಿದೆ.ರ್ನಾಟಕದ ಗಡಿ ಅತ್ತಿಬೆಲೆ- ಹೊಸೂರಿನ ಗಡಿ ಭಾಗದಲ್ಲಿ ತಮಿಳುನಾಡು ಮತ್ತು ಕರ್ನಾಟಕದ ಕಡೆ ಬಸ್ಸು, ಲಾರಿ, ಕಾರು, ಕ್ಯಾಬ್, ಟ್ಯಾಕ್ಸಿ ಮತ್ತು ದ್ವಿಚಕ್ರವಾಹನಗಳು ಸೇರಿದಂತೆ ಎಲ್ಲ ರೀತಿಯ ವಾಹನಗಳ ಓಡಾಟ ಆರಂಭವಾಗಿದೆ. ರೈತರು ನಿರಾಳ: ಕಾವೇರಿ ಗಲಭೆ ಹಿನ್ನ್ನೆಲೆಯಲ್ಲಿ ತಮಿಳುನಾಡು ಮತ್ತು ಕರ್ನಾಟಕ ಗಡಿ ಭಾಗದಲ್ಲಿ ವಾಹನ ಸಂಚಾರ ನಿರ್ಬಂಧಿಸಿದ್ದರಿಂದ ರಾಜ್ಯದಿಂದ ತಮಿಳುನಾಡಿಗೆ ತರಕಾರಿ ಸಾಗಣೆ ಸ್ಥಗಿತಗೊಂಡಿತ್ತು. ಇದರಿಂದ ತರಕಾರಿ ಬೆಲೆ ದಿಢೀರ್ ಕುಸಿತ ಕಂಡು ರೈತರು ಅತಂತ್ರಕ್ಕೆ ಸಿಲುಕ್ಕಿದ್ದರು. ಸದ್ಯ ವಾಹನ ಸಂಚಾರ ಆರಂಭವಾಗಿರುವುದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಪಟಾಕಿ ವ್ಯಾಪಾರ ಚುರುಕು: ಕಾವೇರಿ ವಿವಾದದಿಂದ ವಾಹನ ಸಂಚಾರಕ್ಕೆ ನಿರ್ಬಂಧ ಹೇರಿದ್ದರಿಂದ ಪಟಾಕಿ ಉದ್ಯಮಕ್ಕೆ ಭಾರಿ ಪೆಟ್ಟು ಬಿದ್ದಿತ್ತು. ಇದರಿಂದ ಪಟಾಕಿ ಉದ್ಯಮಕ್ಕೆ ಕೋಟ್ಯಂತರ ರೂ.ಗಳ ನಷ್ಟ ಉಂಟಾಗುತ್ತದೆ ಎಂದು ಪಟಾಕಿ ಕಾರ್ಖಾನೆಗಳು ಲೆಕ್ಕಾಚಾರ ಹಾಕಿದ್ದವು. ತಮಿಳುನಾಡಿನ ಶಿವಕಾಶಿಯಿಂದ ರಾಜ್ಯಕ್ಕೆ ರಫ್ತು ಆಗುತ್ತಿದ್ದ ಶೇ.80 ರಷ್ಟು ಪಟಾಕಿಗಳ ಪ್ರಮಾಣ ಸ್ಥಗಿತಗೊಂಡಿತ್ತು. ಆದರೆ ಸದ್ಯ ವಾಹನ ಸಂಚಾರ ಪುನಾರಂಭವಾದ ಹಿನ್ನೆಲೆಯಲ್ಲಿ ಪಟಾಕಿ ಉದ್ಯಮ ಚುರುಕುಗೊಂಡಿದೆ. ದೀಪಾವಳಿ ಹಬ್ಬಕ್ಕೆ ಇನ್ನೂ 20 ದಿನಗಳ ಸಮಯಾವಕಾಶ ಇರುವುದರಿಂದ ಪಟಾಕಿ ಮಾರಾಟಗಾರರು ತಮಿಳುನಾಡಿನಿಂದ ಪಟಾಕಿಗಳನ್ನು ತರಿಸಿಕೊಳ್ಳುತ್ತಿದ್ದಾರೆ.







