ಪಾವೂರು: ಜಲಸಂರಕ್ಷಣೆ, ಪ್ಲಾಸ್ಟಿಕ್ ನಿಷೇಧ ಜಾಗೃತಿ ಕಾರ್ಯಕ್ರಮ

ಕೊಣಾಜೆ, ಅ.7: ಜಿಲ್ಲೆಯಲ್ಲಿ ಪ್ಲಾಸ್ಟಿಕ್ ನಿಷೇಧ ಹಾಗೂ ಪರಿಸರ ಸ್ವಚ್ಛತೆ ಸಂಬಂಧ ಜಾಗೃತಿ ಮೂಡಿಸಲಾಗಿದ್ದು, 5 ಸಾವಿರ ಮನೆಗಳಲ್ಲಿ ಒಣ ಪ್ಲಾಸ್ಟಿಕ್ ಶೇಖರಿಸಿ ಗುಜರಿಗೆ ಮಾರುವ ಕೆಲಸ ನಡೆಯುತ್ತಿದೆ. ಹರಿಯುವ ನೀರನ್ನು ಹಿಡಿದಿಟ್ಟುಕೊಂಡು ಇಂಗಿಸುವ ಪ್ರಯತ್ನ ನಡೆಯಬೇಕಿದೆ ಎಂದು ಮುಡಿಪು ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಶೀನ ಶೆಟ್ಟಿ ಹೇಳಿದರು. ಪಾವೂರು ಸರಕಾರಿ ಪ್ರೌಢಶಾಲೆಯಲ್ಲಿ ಮಂಗಳೂರು ವಿವಿ ಸಮಾಜಕಾರ್ಯ ವಿಭಾಗ, ಪಾವೂರು ಗ್ರಾಪಂ, ಮುಡಿಪು ಜನಶಿಕ್ಷಣ ಟ್ರಸ್ಟ್ ಆಶ್ರಯಲ್ಲಿ ಶುಕ್ರವಾರ ನಡೆದ ಜಲ ಸಂರಕ್ಷಣೆ ಮತ್ತು ಪ್ಲಾಸ್ಟಿಕ್ ನಿಷೇಧ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜನಶಿಕ್ಷಣ ಟ್ರಸ್ಟ್‌ನ ಕೃಷ್ಣ ಮೂಲ್ಯ ಮಾತನಾಡಿ, ಜಿಲ್ಲೆಯ ಜನ ಶಿಕ್ಷಣದಲ್ಲಿ ಮುಂದಿದ್ದರೂ ಜಲ ಸಾಕ್ಷರತೆಯಲ್ಲಿ ಹಿಂದಿದ್ದಾರೆ. ಮಕ್ಕಳ ಮುಖಾಂತರ ಜಲ ಹಾಗೂ ಸ್ವಚ್ಛತಾ ಆಂದೋಲನ ನಡೆಯಬೇಕು ಎಂದರು. ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಭಾರತಿ ಪಟಾಗಾರ ಮಾತನಾಡಿದರು. ಪಾವೂರು ಗ್ರಾಪಂ ಅಧ್ಯಕ್ಷ ಮುಹಮ್ಮದ್ ಫಿರೋಝ್ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಐ.ಬಿ.ಸಾದಿಕ್, ರುಫೀನಾ ಲೂವಿಸ್, ವಿವೇಕ್ ರೈ, ಅಂಗನವಾಡಿ ಕಾರ್ಯಕರ್ತೆ ಸರಸ್ವತಿ, ಜನ ಶಿಕ್ಷಣ ಟ್ರಸ್ಟ್ ಸಂಯೋಜಕಿ ಚಂಚಲಾ ಉಪಸ್ಥಿತರಿದ್ದರು. ಮಂಗಳೂರು ವಿವಿ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿನಿ ಕಾವ್ಯಶ್ರೀ ಸ್ವಾಗತಿಸಿದರು. ಶಾಲೆಯ ಮುಖ್ಯ ಶಿಕ್ಷಕ ಡಾ.ಪ್ರಶಾಂತ್ ಕುಮಾರ್ ಕೆ.ಎಸ್. ವಂದಿಸಿದರು. ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು.





