ಮುಡಿಪು: ಎಸ್‌ಡಿಪಿಐನಿಂದ ಜಾತ್ಯತೀತ ಇಂಡಿಯಾ ಸಮಾವೇಶ

ಮಂಗಳೂರು, ಅ.7: ಶತಮಾನಗಳಿಂದ ದಲಿತರನ್ನು ನಿಕೃಷ್ಟ ಕೆಲಸಗಳಿಗೆ ಮಾತ್ರ ಸೀಮಿತಗೊಳಿಸಿದ ನಮ್ಮ ವ್ಯವಸ್ಥೆಯಲ್ಲಿ ಈಗಲೂ ಅದೇ ನಿಕೃಷ್ಟ ಕೆಲಸಗಳಿಗೆ ದಲಿತರನ್ನು ಹಿಂಸಿಸಲಾಗುತ್ತದೆ. ದೇಶದಲ್ಲಿ ಮುಸ್ಲಿಮರು, ದಲಿತರು, ನಿರಂತರ ಅಭದ್ರತೆಯಿಂದ ಜೀವಿಸುತ್ತಿದ್ದು, ಗೋ ರಾಜಕೀಯ ಮೂಲಕ ಹಿಂಸೆಯನ್ನು ಕ್ರಮಬದ್ಧಗೊಳಿಸುವ ಪ್ರಯತ್ನ ನಡೆಸಲಾಗುತ್ತಿದೆ. ಆದ್ದರಿಂದ ಶೋಷಿತ ವರ್ಗ ಎಲ್ಲರೂ ಒಟ್ಟು ಸೇರಿ ದೇಶದ ಜಾತ್ಯತೀತತೆಯನ್ನು ಉಳಿಸುವ ಆಂದೊಲನ ನಡೆಸುವ ಅವಶ್ಯಕತೆ ಇದೆ ಎಂದು ಸೋಶಿಯಲ್ ಡೆಮೋಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಕಾರ್ಯದರ್ಶಿ ಇಲ್ಯಾಸ್ ಮಹಮ್ಮದ್ ತುಂಬೆ ಹೇಳಿದ್ದಾರೆ.
ಅವರು ಎಸ್‌ಡಿಪಿಐ ಮಂಗಳೂರು ವಿಧಾನಸಭಾ ಕ್ಷೇತ್ರ ವತಿಯಿಂದ ಮುಡಿಪುವಿನಲ್ಲಿ ಹಮ್ಮಿಕೊಂಡ ಜಾತ್ಯತೀತ ಸಮಾವೇಶದಲ್ಲಿ ಮಾತನಾಡುತ್ತಿದ್ದರು.
ಎಸ್‌ಡಿಪಿಐ ಮಂಗಳೂರು ವಿಧಾನಸಭಾ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಹಾರಿಸ್ ಮಲಾರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾದ್ಯಕ್ಷ ಹನೀಫ್ ಖಾನ್ ಕೊಡಾಜೆ, ರಾಜ್ಯ ಕಾರ್ಯದರ್ಶಿ ಆಕ್ರಮ್ ಹಸನ್, ದಲಿತ ಸಂಘರ್ಷ ಸಮಿತಿ ಮತ್ತು ಎಸ್ಡಿ ಪಿ ಐ ಜಿಲ್ಲಾ ನಾಯಕ ಆನಂದ್ ಮಿತ್ತಬೈಲ್, ಸಜಿಪ ಗ್ರಾಮ ಪಂಚಾಯತ್ ಅಧ್ಯಕ್ಷ ನಾಸಿರ್ ಸಜಿಪ ಮಾತನಾಡಿದರು.
ಬಂಟ್ವಾಳ ಪುರಸಭಾ ಸದಸ್ಯ ಇಕ್ಬಾಲ್ ಐ.ಎಂ.ಆರ್., ಪುದು ಗ್ರಾಮ ಪಂಚಾಯತ್ ಸದಸ್ಯ ಸುಲೈಮಾನ್, ಜಿಲ್ಲಾ ಸಮಿತಿ ಸದಸ್ಯ ಅಶ್ರಫ್ ಮಂಚಿ, ರಾಜ್ಯ ಕಾರ್ಯದರ್ಶಿಬಶೀರ್ ಅಜ್ಜಿನಡ್ಕ, ಜಿಲ್ಲಾ ಕಾರ್ಯದರ್ಶಿ ಅಲ್ಪೋನ್ಸ್ಫ್ರಾಂಕೊ, ನವಾಝ್ ಉಳ್ಳಾಲ, ಇರ್ಶಾದ್ ಅಜ್ಜಿನಡ್ಕ ಮುಂತಾದವರು ಉಪಸ್ಥಿತರಿದ್ದರು.
ಮುಡಿಪುವಿನಲ್ಲಿ ಪಕ್ಷದ ನೂತನ ಕಚೇರಿಯನ್ನು ಉದ್ಘಾಟನೆ ಮಾಡಲಾಯಿತು. ಆಸಿಫ್ ಪಜೀರು ಸ್ವಾಗತಿಸಿ ಸಂಶುದ್ದೀನ್ ವಂದಿಸಿದರು. ಝಾಹಿದ್ ನಿರೂಪಿಸಿದರು.







