ವಿರಾಟ್ ಕೊಹ್ಲಿಗೆ ಪ್ರಧಾನಿ ಮೋದಿ ಶ್ಲಾಘನೆ

ಇಂದೋರ್, ಅ.8: ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಟೀಮ್ ಇಂಡಿಯಾದ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರನ್ನು ಶ್ಲಾಘಿಸಿದರು. ಪ್ರಧಾನಿ ಅವರು ಕೊಹ್ಲಿ ಅವರನ್ನು ಶ್ಲಾಘಿಸಿದ್ದು, ಕೊಹ್ಲಿ ಕ್ರಿಕೆಟ್‌ನಲ್ಲಿ ತೋರಿದ ಸಾಧನೆಗೆ ಅಲ್ಲ. ಬದಲಿಗೆ ಪ್ರಧಾನಿಯವರ ಮಹತ್ವಾಕಾಂಕ್ಷೆಯ ‘ಸ್ವಚ್ಛ ಭಾರತ್’ ಅಭಿಯಾನದಲ್ಲಿ ಕೈಜೋಡಿಸಿದ್ದಕ್ಕಾಗಿ.
ಶುಕ್ರವಾರ ಭಾರತ ತಂಡ ಹೋಳ್ಕರ್ ಸ್ಟೇಡಿಯಂನಲ್ಲಿ ಪ್ರಾಕ್ಟೀಸ್ ನಡೆಸಿ ಪೆವಿಲಿಯನ್‌ಗೆ ತೆರಳುತ್ತಿದ್ದ ಸಂದರ್ಭದಲ್ಲಿ ಆಟಗಾರರು ಎಲ್ಲೆಂದರಲ್ಲಿ ಎಸೆದಿದ್ದ ನೀರಿನ ಬಾಟಲಿಗಳನ್ನು ಹೆಕ್ಕಿದ ಕೊಹ್ಲಿ ಬಳಿಕ ಅದನ್ನು ಕಸದ ತೊಟ್ಟಿಯಲ್ಲಿ ಹಾಕಿದರು. ಆಗ ಅವರ ಬಳಿ ಧಾವಿಸಿದ ಮೈದಾನದ ಸಿಬ್ಬಂದಿ ನೀವು ಮೈದಾನವನ್ನು ಸ್ವಚ್ಛ ಮಾಡುವುದು ಬೇಡ. ಅದು ನಮ್ಮ ಕೆಲಸ ಎಂದು ನಯವಾಗಿಯೇ ಹೇಳಿದರು. ಆಟಗಾರರು ಮೈದಾನದ ತುಂಬೆಲ್ಲಾ ನೀರಿನ ಬಾಟಲಿ ಎಸೆದಿದ್ದಾರೆ. ಅದನ್ನು ಕಸದ ತೊಟ್ಟಿಗೆ ಹಾಕುವುದು ನಮ್ಮ(ಆಟಗಾರರು) ಕೆಲಸ ಎಂದು ಕೊಹ್ಲಿ ಪ್ರತ್ಯುತ್ತರ ನೀಡಿದರು.
ಮೈದಾನದಲ್ಲಿ ಬೀಡುಬಿಟ್ಟಿದ್ದ ಮಾಧ್ಯಮಗಳು ಕೊಹ್ಲಿ ‘ಸ್ವಚ್ಛ ಭಾರತ್’ ಅಭಿಯಾನದಲ್ಲಿ ಭಾಗವಹಿಸಿದ್ದ ದೃಶ್ಯವನ್ನು ಸೆರೆ ಹಿಡಿದಿವೆ. ಅದನ್ನು ತಮ್ಮ ಚಾನಲ್‌ಗಳಲ್ಲೂ ಪ್ರಸಾರ ಮಾಡಿವೆ.
ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಕೊಹ್ಲಿಯ ಪ್ರಯತ್ನವನ್ನು ಚಾನಲ್‌ವೊಂದು ಶ್ಲಾಘಿಸುತ್ತಿರುವುದನ್ನು ಗಮನಿಸಿದ ಪ್ರಧಾನಮಂತ್ರಿ ಮೋದಿ ಅವರು ತಕ್ಷಣವೇ ತಮ್ಮ ಟ್ವೀಟರ್‌ನಲ್ಲಿ ಕೊಹ್ಲಿಯನ್ನು ಶ್ಲಾಘಿಸಿದರು.
ಇದಕ್ಕೆ ಉತ್ತರ ನೀಡಿರುವ ಕೊಹ್ಲಿ, ‘‘ಧನ್ಯವಾದ ನರೇಂದ್ರ ಮೋದಿ ಸರ್, ನಮ್ಮ ದೇಶದ ಒಳಿತಿಗಾಗಿ ಬದಲಾವಣೆ ತರಲು ನಾವೆಲ್ಲರೂ ಪ್ರಯತ್ನಿಸುತ್ತಿದ್ದೇವೆ. ನಿಮ್ಮ ನಾಯಕತ್ವದಿಂದ ನಾವೆಲ್ಲರೂ ಸ್ಫೂರ್ತಿ ಪಡೆದಿದ್ದೇವೆ’’ ಎಂದು ಹೇಳಿದ್ದಾರೆ.







