ಸಂಪ್ಯ ಠಾಣಾಧಿಕಾರಿಯಿಂದ ದೌರ್ಜನ್ಯ, ಸುಳ್ಳು ಕೇಸು ದಾಖಲು: ಆರೋಪ
ಪುತ್ತೂರು, ಅ.8: ಸಂಪ್ಯ ಠಾಣಾಧಿಕಾರಿಯವರು ತನ್ನ ಮೇಲೆ ದೌರ್ಜನ್ಯ ನಡೆಸಿ, ಸುಳ್ಳು ದಾಖಲೆಯನ್ನು ಮಾಡಿ ವಿನಾ ಕಾರಣ ಒಂದು ತಿಂಗಳ ಕಾಲ ಜೈಲಿನಲ್ಲಿರುವಂತೆ ಮಾಡಿದ್ದು, ಈ ಅಧಿಕಾರಿಯ ವಿರುದ್ದ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಲಾಗುವುದು ಎಂದು ಒಳಮೊಗ್ರು ಗ್ರಾಮದ ಕುಂಬ್ರ ನಿವಾಸಿ ಆಸಿಕುದ್ದೀನ್ ಅಖ್ತರ್ ಎಂಬವರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪುತ್ತೂರು ಪರ್ಪುಂಜದಲ್ಲಿರುವ ರೆಸಾರ್ಟ್‌ನಲ್ಲಿ ನಡೆದ ಪ್ರಕರಣವೊಂದಕ್ಕೆ ಸಂಬಂಧಿಸಿ ಸಂಪ್ಯ ಠಾಣೆಯ ಠಾಣಾಧಿಕಾರಿಗಳು ವಿನಾ ಕಾರಣ ತನ್ನ ತಮ್ಮನನ್ನು ಠಾಣೆಗೆ ಕರೆಸಿಕೊಂಡಿದ್ದರು. ಈ ಬಗ್ಗೆ ವಿಚಾರಿಸಲೆಂದು ಹೋದ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ನನ್ನ ತಾಯಿಗೂ ಕೆಟ್ಟ ಶಬ್ದದಿಂದ ನಿಂದಿಸಿ ನನ್ನ ಹಲ್ಲೆ ನಡೆಸಿ ದೌರ್ಜನ್ಯ ಎಸಗಿದ್ದಾರೆ. ಅಲ್ಲದೆ ಪೊಲೀಸ್ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವುದಾಗಿ ಸುಳ್ಳು ದಾಖಲಿಸಿ ನ್ಯಾಯಾಲಯಕ್ಕೆ ಒಪ್ಪಿಸಿದರು. ಆ ಬಳಿಕ ಇಬ್ಬರು ಪೊಲೀಸರನ್ನು ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ತಾನು ಹಲ್ಲೆ ನಡೆಸಿರುವುದಾಗಿ ಇನ್ನೊಂದು ಕೇಸು ಫಿಕ್ಸ್ ಮಾಡಿದರು. ನಾನೋರ್ವ ಸಭ್ಯ ನಾಗರಿಕನಾಗಿದ್ದು ಈ ತನಕ ಯಾರಿಗೂ ತೊಂದರೆ ನೀಡಿಲ್ಲ. ನಾನು ಯಾರ ಮೇಲೆಯೂ ಹಲ್ಲೆ ನಡೆಸಿಲ್ಲ ಮತ್ತು ಕರ್ತವ್ಯಕ್ಕೆ ಅಡ್ಡಿ ಪಡಿಸಿಲ್ಲ ಎಂಬುದನ್ನು ಯಾವುದೇ ಪುಣ್ಯ ಸ್ಥಳದಲ್ಲಿ ಸತ್ಯ ಪ್ರಮಾಣ ಮಾಡಲು ಸಿದ್ಧನಿದ್ದೇನೆ. ನನ್ನ ಮೇಲೆ ಸುಳ್ಳು ಕೇಸು ದಾಖಲು ಮಾಡಿ ಒಂದು ತಿಂಗಳ ಕಾಲ ಜೈಲಿನಲ್ಲಿ ಬಂಧಿಸಿ ನನ್ನ ಮಾನನಷ್ಟ ಹಾಗೂ ಸಮಾಜದಲ್ಲಿ ತಲೆ ಎತ್ತಿ ನಡೆಯದಂತೆ ಮಾಡಿರುವ ವಿರುದ್ದ ನಾನು ಮಾನವ ಹಕ್ಕು ಆಯೋಗಕ್ಕೆ ದೂರು ನೀಡುತ್ತಿದ್ದೇನೆ. ಅಲ್ಲದೆ ಈ ಘಟನೆಯ ಹಿಂದೆ ಕಾಣದ ಕೈಗಳು ಕೆಲಸ ಮಾಡಿದ್ದು, ಘಟನೆಯ ಸತ್ಯಾಸತ್ಯತೆಯನ್ನು ತನಿಖೆ ನಡೆಸಿ ತನಗೆ ನ್ಯಾಯ ದೊರಕಿಸಿ ಕೊಡುವಂತೆ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳಿಗೆ, ಮುಖ್ಯಮಂತ್ರಿ, ಗೃಹ ಮಂತ್ರಿಗಳಿಗೆ ದೂರು ನೀಡುತ್ತಿರುವುದಾಗಿ ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅರಿಯಡ್ಕ ಅಬ್ದುರ್ರಹ್ಮಾನ್ ಮತ್ತು ಸಿರಾಜುದ್ದೀನ್ ಪರ್ಪುಂಜ ಉಪಸ್ಥಿತರಿದ್ದರು.





