ಚಲೋ ಉಡುಪಿ: ಭಾವಲಹರಿಯಲ್ಲಿ ಇಮಾಮ್ ಗೋಡೆಕಾರ

ಬುಲ್ಲೇಷಾಗೊಂದು ದೂರು
ಕಾರಣ ಬೇಕಿಲ್ಲ ನಮ್ಮನ್ನು ಕೊಲ್ಲೋಕೆ ಓ ಬುಲ್ಲೇಷಾ,
ತಿನ್ನುವ ಅನ್ನವೇ ಕುತ್ತಾಯ್ತು
ಜೀವಕೆ ಈ ಜಗದಲಿ.
ಹಾಲು ಹೈನದ ದನ ದೇವರಾಯ್ತು ಓ ಬುಲ್ಲೇಷಾ,
ಚಿನ್ನವಾಯ್ತು ಅದರ ಹಳದಿ ಮೂತ್ರ.
ಊಟಕೆ ಕೂತವನ ಮಾತಿಗೇ ಕರೆಯಲ್ಲ ಓ ಬುಲ್ಲೇಷಾ,
ಆದರೂ ಎಳೆದೊಯ್ದು ಹೆಣ ಕೆಡವಿದರೋ.
ದೇವರು ಕರುಣಾಮಯಿ ಎಂದರು ಓ ಬುಲ್ಲೇಷಾ,
ಅವನ ದರ್ಶನಕೆ ಹೋದವನ ಸುಟ್ಟರೋ ಅಂಗಳದಲಿ.
ಇದು ಗದ್ದುಗೆ ಹಿಡಿದವರ ರಾಜಧರ್ಮವಂತೆ ಓ ಬುಲ್ಲೇಷಾ,
ಮೆಟ್ಟಿಲುಗಳಾದವು ನನ್ನ ಜನರ ಹೆಣಗಳು ರಾಜಕೀಯದಲಿ.
ಚದರಂಗವಾಯ್ತು ಬದುಕೆಂಬುದು ಓ ಬುಲ್ಲೇಷಾ,
ಅರಸನಿಗಾಗಿ ಸಾಯಬೇಕು ಸೈನಿಕ ಯದ್ಧದಲಿ.
ಜಗಕೆ ಹಂಚಿದಷ್ಟೂ ಉಳಿವ ಪ್ರೀತಿ ನನ್ನ ಜನರದ್ದು ಓ ಬುಲ್ಲೇಷಾ,
ಆದರೂ ಸತ್ತರೆ ಹೂಳಲು ಜಾಗವಿಲ್ಲ ಈ ಭುವಿಯಲಿ.
ಇಮಾಮ್ ಗೋಡೆಕಾರ
ಪತ್ರಕರ್ತರು
ಸತ್ಯನಾರಾಯಣ ಪೇಟೆ, ಬಳ್ಳಾರಿ
Next Story





