ಸಂತೆ ಮಾರುಕಟ್ಟೆಯಲ್ಲಿಯೇ ವಾರದ ಸಂತೆಯಾಗಲಿ: ಪುತ್ತೂರು ನಾಗರಿಕ ಅಭಿವೃದ್ಧಿ ಸಮಿತಿ ಒತ್ತಾಯ
ಪುತ್ತೂರು, ಅ.8: ನಗರಸಭೆಯ ಮೂಲ ದಾಖಲೆಯಂತೆ ಈಗಿರುವ ನಗರಸಭಾ ಕಚೇರಿ ಕಟ್ಟಡವು ಸಂತೆ ಮಾರುಕಟ್ಟೆಗೆಂದು ನಿರ್ಮಿಸಲಾಗಿದ್ದು, ಈ ಮೂಲ ದಾಖಲೆಯನ್ನು ಪರಿಶೀಲನೆ ನಡೆಸಿ ಸಂತೆ ಮಾರುಕಟ್ಟೆಯನ್ನು ಮೂಲ ಕಟ್ಟಡದಲ್ಲಿಯೇ ನಡೆಸಲು ಅವಕಾಶ ಕಲ್ಪಿಸಬೇಕು ಎಂದು ಪುತ್ತೂರು ನಾಗರಿಕ ಅಭಿವೃದ್ಧಿ ಸಮಿತಿ ಅಧ್ಯಕ್ಷ ಇಬ್ರಾಹೀಂ ಗೋಳಿಕಟ್ಟೆ ಒತ್ತಾಯಿಸಿದ್ದಾರೆ.
ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸೋಮವಾರ ಸಂತೆ ನಡೆಸಿದಲ್ಲಿ ಕೋರ್ಟು ಇನ್ನಿತರ ಕಚೇರಿಗಳಿಗೆ ತೊಂದರೆಯಾಗುತ್ತಿದ್ದಲ್ಲಿ ರವಿವಾರ ವಾರದ ಸಂತೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.
ಎಡಿಬಿ ಯೋಜನೆಯಡಿಯಲ್ಲಿ 29 ಕೊಠಡಿಗಳ ಸಂತೆ ಮಾರುಕಟ್ಟೆಯನ್ನು ನಿರ್ಮಿಸಲಾಗಿದೆ. ಎಡಿಬಿಯಿಂದ ಇದಕ್ಕಾಗಿ ಲಕ್ಷಾಂತರ ರೂಪಾಯಿ ಸಾಲ ಪಡೆಯಲಾಗಿದೆ. ಆದರೆ ಕಟ್ಟಡ ನಿರ್ಮಾಣವಾದ ಬಳಿಕ ಸರಕಾರದ ಆದೇಶವಿಲ್ಲದೆ ನಗರಸಭಾ ಕಚೇರಿಯನ್ನಾಗಿ ಬಳಕೆ ಮಾಡಿಕೊಳ್ಳಲಾಗಿದೆ. ಇದರಿಂದಾಗಿ ಸಂತೆ ವ್ಯಾಪಾರಿಗಳು ಬೀದಿಗೆ ಬೀಳುವಂತಾಗಿದ್ದು, ಗ್ರಾಹಕರಿಗೆ ಸಮಸ್ಯೆಯಾಗಿದೆ ಎಂದು ಆರೋಪಿಸಿದರು.
ಸಂತೆ ಬೀದಿಗೆ ಬಿಜೆಪಿ, ಕಾಂಗ್ರೆಸ್ ಸಮಾನ ಕೊಡುಗೆ
ಸಂತೆ ಬೀದಿಗೆ ಬೀಳಲು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಸಮಾನ ಕೊಡುಗೆಯಿದೆ ಎಂದ ಅವರು ಬಿಜೆಪಿ ತನ್ನ ನಗರಸಭಾ ಅಧಿಕಾರ ಅವಧಿಯಲ್ಲಿ ಸಂತೆ ಕಟ್ಟಡವನ್ನು ತನ್ನ ಕಚೇರಿಯಾಗಿ ಮೊದಲಿಗೆ ಬಳಸಿಕೊಂಡರು. ಆಗ ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ ವೌನ ಸಮ್ಮತಿ ನೀಡಿತ್ತು. ಇದೀಗ ಮತ್ತೆ ಕಾಂಗ್ರೆಸ್ ಆಡಳಿತವಿದ್ದು ಅವರು ರೈತರಿಗೆ ಅನ್ಯಾಯವನ್ನು ಎಸಗಿದ್ದಾರೆ. ಕಾಂಗ್ರೆಸ್ ಬಿಜೆಪಿ ಚದುರಂಗದಾಟದಲ್ಲಿ ಜನಸಾಮಾನ್ಯರಿಗೆ ತೊಂದರೆಯಾಗಿದೆ ಎಂದು ಆರೋಪಿಸಿದರು.
ನ್ಯಾಯಾಂಗ ಹೋರಾಟ
ವಾರದ ಸಂತೆ ವಿಚಾರದಲ್ಲಿ ಮುಂದಿನ 10 ದಿನಗಳ ಒಳಗಾಗಿ ಸ್ಥಳೀಯರ ಸಮ್ಮುಖದಲ್ಲಿ ಮಾತುಕತೆ ನಡೆಸಿ ರೂಪುರೇಷೆಗಳನ್ನು ತಯಾರಿಸಿ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ನಾಗರಿಕ ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಕಾನೂನು ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ನಾಗರಿಕ ಅಭಿವೃದ್ಧಿ ಸಮಿತಿ ಪ್ರಧಾನ ಕಾರ್ಯದರ್ಶಿ ಸಿ.ಮೋಹನ ಗೌಡ, ಜೊತೆ ಕಾರ್ಯದರ್ಶಿ ಅಬ್ದುಲ್ ಅಝೀರ್ , ಸದಸ್ಯರಾದ ಹಂಝ ಕಬಕ ಮಮತ್ತು ಬಿ.ಎಂ. ಇಬ್ರಾಹಿಂ ಉಪಸ್ಥಿತರಿದ್ದರು.







