ಮುಖ್ಯಮಂತ್ರಿಯ ಹರಕೆ ತೀರಿಸಲು ತೆಲಂಗಾಣ ಸರಕಾರದಿಂದ ಮೂರು ಕೋ.ರೂ.ಖರ್ಚು!

ಹೈದರಾಬಾದ್,ಅ.8:ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರು ರವಿವಾರ ದುರ್ಗಾ ನವರಾತ್ರಿಯ ಸಂದರ್ಭದಲ್ಲಿ ವಾರಂಗಲ್‌ನಲ್ಲಿ ಭದ್ರಕಾಳಿ ದೇವಿಗೆ ಮೂರು ಕೋ.ರೂ.ಗೂ ಅಧಿಕ ವೌಲ್ಯದ 11.7 ಕೆ.ಜಿ.ತೂಕದ ಸ್ವರ್ಣ ಕಿರೀಟವನ್ನು ಸಮರ್ಪಿಸಲಿದ್ದಾರೆ.
ಪ್ರತ್ಯೇಕ ತೆಲಂಗಾಣ ಸ್ಥಾಪನೆಗಾಗಿ ಹೋರಾಟದ ಸಂದರ್ಭದಲ್ಲಿ ರಾವ್ ದೇವಿಗೆ ಸ್ವರ್ಣ ಕಿರೀಟದ ಹರಕೆಯನ್ನು ಹೊತ್ತುಕೊಂಡಿದ್ದರು.
ತೆಲಂಗಾಣ ಸರಕಾರವು ಹೈದರಾಬಾದ್‌ನ ಪ್ರಮುಖ ಚಿನ್ನಾಭರಣ ವ್ಯಾಪಾರಿಯ ಮೂಲಕ ಸ್ವರ್ಣ ಕಿರೀಟವನ್ನು ಮಾಡಿಸಿದ್ದು, ಖುದ್ದು ರಾವ್ ಅವರೇ ಶುಕ್ರವಾರ ರಾತ್ರಿ ಅಲ್ಲಿಗೆ ತೆರಳಿ ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ತಾನು ಹೇಳಿಕೊಂಡಿದ್ದ ಹರಕೆ ತೀರಿಸಲು ಸರಕಾರದ ಬೊಕ್ಕಸದಿಂದ ಹಣವನ್ನು ಖರ್ಚು ಮಾಡಿಸಿರುವ ರಾವ್ ಅವರ ಕ್ರಮ ಜನರು ಹುಬ್ಬೇರಿಸುವಂತೆ ಮಾಡಿರುವುದು ಇದು ಮೊದಲ ಬಾರಿಯೇನಲ್ಲ. 2015,ಡಿಸೆಂಬರ್‌ನಲ್ಲಿ ರಾವ್ ಹಮ್ಮಿಕೊಂಡಿದ್ದ ಧಾರ್ಮಿಕ ಕಾರ್ಯಕ್ರಮವೊಂದಕ್ಕೆ ಕೋಟ್ಯಂತರ ರೂ.ಗಳು ವೆಚ್ಚವಾಗಿದ್ದವು. ಹಿತೈಷಿಗಳ ದೇಣಿಗೆಯೊಂದಿಗೆ ತನ್ನ ವೈಯಕ್ತಿಕ ಹಣದಿಂದ ಖರ್ಚುಗಳನ್ನು ನಿಭಾಯಿಸಲಾಗಿದೆ ಎಂದು ರಾವ್ ಸ್ಪಷ್ಟನೆ ನೀಡಿದ್ದರಾದರೂ ರಾಜ್ಯದ ಆರ್ಥಿಕ ಸ್ಥಿತಿ ಗಂಭೀರವಾಗಿದ್ದ ಸಂದರ್ಭ ಇಷ್ಟೊಂದು ಭಾರೀ ವೆಚ್ಚ ಟೀಕೆಗಳಿಗೆ ಕಾರಣವಾಗಿತ್ತು.







