ತಲಾಖ್ ವಿಷಯದಲ್ಲಿ ಕೇಂದ್ರ ಸರಕಾರದ ಹಸ್ತಕ್ಷೇಪ ಖಂಡನೀಯ : ಶಾಫಿ ಸಅದಿ

ಮಂಗಳೂರು, ಅ.8: ಕೇಂದ್ರ ಸರಕಾರವು ತ್ರಿವಳಿ ತಲಾಖ್ ಪದ್ಧತಿಯ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಪ್ರಮಾಣ ಪತ್ರ ನೀಡಲು ನಿರ್ಧರಿಸಿದ್ದು ಖಂಡನೀಯವೇಂದು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಶಾಫಿ ಸ ಅದಿ ಅಭಿಪ್ರಾಯಪಟ್ಟಿದ್ದಾರೆ.
ವಿವಿಧತೆಯಲ್ಲಿ ಏಕತೆಯನ್ನು ಎತ್ತಿಹಿಡಿಯುವ ಜಾತ್ಯಾತೀತ ದೇಶದಲ್ಲಿ ಹಲವಾರು ಜ್ವಲಂತ ಸಮಸ್ಯೆಗಳು ತಾಂಡವಾಡುತ್ತಿರುವಾಗ ಅನಗತ್ಯ ವಿಷಯಗಳಿಗೆ ಮೂಗುತೂರಿಸಿ ವಿವಾದ ಸೃಷ್ಟಿಸುತ್ತಿರುವ ಕೇಂದ್ರ ಸರಕಾರದ ನಡೆ ಹೊಣೆಗೇಡಿತನದಿಂದ ಕೂಡಿದ್ದಾಗಿದೆ. ಗೋವಿನ ಹೆಸರಿನಲ್ಲಿ ನಡೆಯುವ ಕ್ರೌರ್ಯ, ಗೋ ರಾಜಕೀಯ ಮುಂತಾದ ವಿಷಯಗಳ ಕುರಿತ ಮೌನ ವಹಿಸುವ ಕೇಂದ್ರ ಸರಕಾರವು ಸ್ತ್ರೀ ಸಮಾನತೆ, ಲಿಂಗ ಸಮಾನತೆಯ ಹೆಸರಿನಲ್ಲಿ ತಲಾಖ್ ವಿಷಯದಲ್ಲಿ ಅನಗತ್ಯವಾಗಿ ವಿವಾದ ಎಬ್ಬಿಸುತ್ತಿರುವುದು ಹಾಸ್ಯಾಸ್ಪದವಾಗಿದೆ.
ಕ್ರೀಡೆ,ಉದ್ಯೋಗ ಮುಂತಾದ ಕ್ಷೇತ್ರಗಳಲ್ಲಿ ಇದುವರೆಗೂ ಸಾಧಿಸಲು ಸಾಧ್ಯವಾಗದ ಸ್ತ್ರೀ ಸಮಾನತೆಯನ್ನು ಕೇವಲ ಮುಸ್ಲಿಂ ಷರೀಯತ್ ನಿಯಮವಾದ ತಲಾಖ್ ವಿಷಯದಲ್ಲಿ ಕಂಡುಕೊಳ್ಳುವುದು ನೆಗಡಿ ಬಾಧಿಸಿದವನ ಮೂಗು ಕೊಯ್ದಂತೆ ಆಗುವುದರಲ್ಲಿ ಸಂಶಯವಿಲ್ಲ ಎಂದು ಅವರು ಹೇಳಿದ್ದಾರೆ. ಪದೇ ಪದೇ ಅನಗತ್ಯ ವಿಷಯಗಳಿಗೆ ಕೈ ಹಾಕಿ ವಿವಾದ ಸೃಷ್ಟಿಸುತ್ತಿರುವ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಿಗೂ, ಕೇಂದ್ರ ಸರಕಾರಕ್ಕೂ, ತಲಾಖ್ ವಿರುದ್ಧ ಹೋರಾಡುವ ಮಹಿಳಾ ಹೋರಾಟಗಾರರಿಗೂ ತಲಾಖ್ ವಿಷಯದ ಕುರಿತು ಇಸ್ಲಾಮಿನ ಸಂಪೂರ್ಣವಾದ ನಿಲುವಿನ ಅರ್ಥವೇ ಗೊತ್ತಿಲ್ಲ.
ತಲಾಖ್ ವಿಷಯದಲ್ಲಿ ಅನಗತ್ಯ ವಿವಾದವನ್ನು ಸೃಷ್ಟಿಹಾಕಿ ಅದನ್ನು ನಿಷೇಧಿಸಹೊರಟವರು, ಇಸ್ಲಾಂ ಸ್ತ್ರೀಗೆ ನೀಡಿದ ಮಹರ್ ಅನ್ನುವ ಸಂಪ್ರದಾಯದ ಕುರಿತೂ ಅವಲೋಕಿಸಬೇಕಿದೆ. ತಲಾಖ್ ಇಸ್ಲಾಂ ಮುಸ್ಲಿಂ ಮಹಿಳೆಯರಿಗೆ ನೀಡಿದ ಬಂಧನವಲ್ಲ. ಮಹಿಳೆಯರಿಗೂ ಪುರುಷನಿಗೆ ತಲಾಖ್ ನೀಡಲು ಆಜ್ಞಾಪಿಸಿದೆ.ಇಸ್ಲಾಂ ಕಲ್ಪಿಸಿದ ಮಹರ್ ಸಂಪ್ರದಾಯ ವ್ಯವಸ್ಥೆಯನ್ನು ಜೀವಂತವಾಗಿಸಿ, ವರದಕ್ಷಿಣೆ ಎಂಬ ಪೆಡಂಭೂತವನ್ನು ಇಲ್ಲವಾಗಿಸಿದಲ್ಲಿ ಖಂಡಿತವಾಗಿಯೂ ಇಲ್ಲಿ ತಲಾಖ್ ಸಮಸ್ಯೆಗಳು ತಲೆದೋರುವ ಪ್ರಮೇಯವೇ ಉದ್ಭವಿಸುವುದಿಲ್ಲ. ಸಂವಿಧಾನದ ನಿಯಮಗಳಿಗೆ ವಿರುದ್ಧವಾಗಿ ವರ್ತಿಸಿ ಮುಸ್ಲಿಂ ವೈಯಕ್ತಿಕ ಕಾನೂನಿನ ಮೇಲೆ ಹಸ್ತಕ್ಷೇಪ ನಡೆಸುವ ಹುನ್ನಾರಗಳು ಕೇಂದ್ರ ಸರಕಾರದಿಂದ ನಡೆಯುತ್ತಿದೆ.
ಜಾತ್ಯಾತೀತ ದೇಶವಾದ ಭಾರತದಲ್ಲಿ ಆಯಾ ಧರ್ಮಗಳಿಗನುಣವಾಗಿ ಹಿಂದೂ ಧರ್ಮೀಯರಿಗೆ ಧಾರ್ಮಿಕ ಧತ್ತಿ ಇಲಾಖೆ ಇರುವಂತೆ ಇಲ್ಲಿನ ಮುಸ್ಲಿಮರಿಗೆ ಷರೀಯತ್ ನಿಯಮವಾದ ಮುಹಮ್ಮದಿಯನ್ ಲಾ ಇದೆ. ಅದರಲ್ಲಿ ಏನಿದೆಯೋ ಅದನ್ನು ಪಾಲಿಸಿಕೊಂಡು ಬಂದಂತಹ ಇಲ್ಲಿನ ಮುಸ್ಲಿಮರ ಧಾರ್ಮಿಕ ಹಕ್ಕನ್ನು ಕಸಿಯುವಂತಹ ಪ್ರಯತ್ನ ಖಂಡನೀಯ. ಮೂಲಭೂತ ಹಕ್ಕುಗಳಿಗೆ ವಿರುದ್ಧವಾಗಿರುವ ಯಾವುದೇ ವೈಯಕ್ತಿಕ ಕಾನೂನು ಅಸಿಂಧು ಅನ್ನುವ ಸರಕಾರದ ನಿಲುವು ಬಹುಸಂಖ್ಯಾತ ಮುಸ್ಲಿಮರ ಮೂಲಭೂತ ಹಕ್ಕು ಕಸಿದುಕೊಳ್ಳುವ ಕ್ರಮ ಎಂಬುದನ್ನು ಮರೆತಂತಿದೆ.
ವಿವಿಧತೆಯಲ್ಲಿ ಏಕತೆಯನ್ನು ಸಾರುವ ದೇಶದಲ್ಲಿ ಒಂದು ಧರ್ಮದ ಧಾರ್ಮಿಕ ವಿಚಾರಗಳಲ್ಲಿ ಹಸ್ತಕ್ಷೇಪ ನಡೆಸಿ,ಮುಸ್ಲಿಂ ಸಮುದಾಯದ ನಡುವೆ ಒಡಕನ್ನು ಸೃಷ್ಟಿಸುವ ವ್ಯವಸ್ಥಿತ ಷಡ್ಯಂತ್ರದ ವಿರುದ್ಧ ದೇಶದಾದ್ಯಂತ ಹೋರಾಟ ನಡೆಸಿ, ಶಾಬಾನ್ ಪ್ರಕರಣದ ಸಂದರ್ಭದಲ್ಲಿ ಪ್ರತಿಭಟಿಸಿದಂತೆ ಸಂವಿಧಾನದ ಆಶಯವನ್ನು ಗೌರವಿಸಿ ಕಾನೂನು ರೀತಿಯಲ್ಲಿ ಪ್ರತಿಭಟಿಸಬೇಕೆಂದು ಶಾಫಿ ಸ ಅದಿ ಹೇಳಿದ್ದಾರೆ.







