ಉತ್ತರಾಖಂಡ: ಹಿಟ್ಟಿನ ಗಿರಣಿ ಪ್ರವೇಶಿಸಿದ್ದಕ್ಕಾಗಿ ದಲಿತನ ಹತ್ಯೆ
ಹಿಟ್ಟನ್ನು 'ಅಶುದ್ಧ'ಗೊಳಿಸಿದ್ದಕ್ಕೆ ಕತ್ತು ಕತ್ತರಿಸಿದ ಶಿಕ್ಷಕ!
.jpg)
ನೈನಿತಾಲ್,ಅ.8: ಕುಮಾಂವ್ ಹಿಲ್ಸ್‌ನ ಬಾಗೇಶ್ವರದ ಸರಕಾರಿ ಶಾಲೆಯ ಮೇಲ್ಜಾತಿಗೆ ಸೇರಿದ ಶಿಕ್ಷಕನೋರ್ವ ಹಿಟ್ಟಿನ ಗಿರಣಿಯನ್ನು ಪ್ರವೇಶಿಸಿ ಅದನ್ನು ‘ಅಶುದ್ಧ’ಗೊಳಿಸಿದ್ದಕ್ಕಾಗಿ ದಲಿತ ವ್ಯಕ್ತಿಯೋರ್ವನನ್ನು ಕುತ್ತಿಗೆ ಸೀಳಿ ಹತ್ಯೆ ಮಾಡಿದ್ದು, ಇದನ್ನು ವಿರೋಧಿಸಿ ಉತ್ತರಾಖಂಡದ ಹೆಚ್ಚಿನ ಕಡೆಗಳಲ್ಲಿ ದಲಿತರು ಭಾರೀ ಪ್ರತಿಭಟನೆಯನ್ನು ನಡೆಸಿದ್ದಾರೆ.
ಬಾಗೇಶ್ವರ ಜಿಲ್ಲೆಯ ಕರದಿಯಾ ಗ್ರಾಮದ ನಿವಾಸಿ,ದಲಿತ ಸೋಹನ ರಾಮ್(35) ಒಂದು ಚೀಲ ಗೋದಿಯನ್ನು ಹಿಟ್ಟು ಮಾಡಿಸಲೆಂದು ಗಿರಣಿಗೆ ನೀಡಿದ್ದ. ಅದನ್ನು ಒಯ್ಯಲೆಂದು ಬಂದಾಗ ಅದೇ ಗ್ರಾಮದ ಶಾಲೆಯಲ್ಲಿ ಶಿಕ್ಷಕನಾಗಿರುವ ಲಲಿತ್ ಕರ್ನಾಟಕ್ ಕೂಡ ಅಲ್ಲಿಗೆ ಬಂದಿದ್ದ. ಹಿಟ್ಟನ್ನು ಮುಟ್ಟುವ ಮೂಲಕ ಅದನ್ನು 'ಅಶುದ್ಧ'ಗೊಳಿಸಿದ್ದಕ್ಕಾಗಿ ಕರ್ನಾಟಕ್ ಅವಾಚ್ಯ ಶಬ್ದಗಳಿಂದ ಬೈಯ್ಯತೊಡಗಿದ್ದ. ಇದನ್ನು ಸೋಹನ ರಾಮ್ ಪ್ರಶ್ನಿಸಿದಾಗ ಅವರಿಬ್ಬರ ನಡುವೆ ವಾಗ್ವಾದ ನಡೆದಿತ್ತು. ಈ ವೇಳೆ ಕುಪಿತ ಕರ್ನಾಟಕ್ ತನ್ನ ಬಳಿಯಿದ್ದ ಹರಿತವಾದ ಆಯುಧದಿಂದ ಸೋಹನ ರಾಮ್‌ನ ಕುತ್ತಿಗೆಯನ್ನೇ ಸೀಳಿದ್ದು, ಆತ ತಕ್ಷಣವೇ ಕುಸಿದು ಬಿದ್ದು ಸಾವನ್ನಪ್ಪಿದ್ದ.
ಪೊಲೀಸರಿಗೆ ದೂರು ನೀಡಿದರೆ ಗಂಭೀರ ಪರಿಣಾಮವನ್ನು ಎದರಿಸಬೇಕಾಗುತ್ತದೆ ಎಂದು ಕರ್ನಾಟಕ್‌ನ ತಂದೆ ಮತ್ತು ಸೋದರ ಹತ ಸೋಹನ ರಾಮ್‌ನ ಕುಟುಂಬಕ್ಕೆ ಬೆದರಿಕೆಯೊಡ್ಡಿದ್ದರು ಎಂದು ಹಿಟ್ಟಿನ ಗಿರಣಿಯ ಮಾಲಿಕ ಕುಂದನ್ ಸಿಂಗ್ ಭಂಡಾರಿ ಪೊಲೀಸರಿಗೆ ತಿಳಿಸಿದ್ದಾನೆ.
ಸೋಹನ ರಾಮ್‌ನ ಚಿಕ್ಕಪ್ಪ ಕೇಶವ ರಾಮ್ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ಗ್ರಾಮದ ಮೇಲ್ಜಾತಿಗಳ ಜನರು ಮತ್ತು ದಲಿತರು ಹಿಟ್ಟಿನ ಗಿರಣಿಯನ್ನು ಬಳಸಿಕೊಳ್ಳುತ್ತಿದ್ದಾರೆ. ಆದರೆ ನವರಾತ್ರಿ ಉತ್ಸವ ನಡೆಯುತ್ತಿರುವುದರಿಂದ ಗಿರಣಿಗೆ ಬರದಂತೆ ಮೇಲ್ಜಾತಿಗಳ ಜನರು ದಲಿತರಿಗೆ ತಾಕೀತು ಮಾಡಿದ್ದರು. ಅಗತ್ಯವಾದರೆ ದೇವರ ನೈವೇದ್ಯಕ್ಕಾಗಿ ಹಿಟ್ಟು ತಯಾರಾದ ಬಳಿಕವಷ್ಟೇ ಗಿರಣಿಗೆ ಬಂದು ಹಿಟ್ಟು ಮಾಡಿಸಿಕೊಳ್ಳುವಂತೆ ತಿಳಿಸಿದ್ದರು ಎಂದು ಕೇಶವ ರಾಮ್ ಸುದ್ದಿಗಾರರಿಗೆ ತಿಳಿಸಿದರು.
ಮುಖ್ಯ ಆರೋಪಿ ಕರ್ನಾಟಕ್,ಸಹ ಆರೋಪಿಗಳಾದ ಆತನ ತಂದೆ ಮತ್ತು ಸೋದರನನ್ನು ಗುರುವಾರ ಬಂಧಿಸಲಾಗಿದ್ದು,ನ್ಯಾಯಾಲಯವು ಅವರಿಗೆ 14 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಿದೆ ಎಂದು ಬಾಗೇಶ್ವರ ಎಸ್‌ಪಿ ಸುಖವೀರ್ ಸಿಂಗ್ ತಿಳಿಸಿದ್ದಾರೆ.







