ಅಂತರ್ ಕಾಲೇಜು ಅಥ್ಲೆಟಿಕ್ ಕೂಟ: ಆಳ್ವಾಸ್ ಚಾಂಪಿಯನ್

ಉಡುಪಿ, ಅ.8: ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಮತ್ತು ಮಂಗಳೂರು ವಿಶ್ವವಿದ್ಯಾ ನಿಲಯದ ಸಹಯೋಗದಲ್ಲಿ ಉಡುಪಿ ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾದ ಮಂಗಳೂರು ವಿವಿ 36ನೇ ಅಂತರ್ ಕಾಲೇಜು ಅಥ್ಲೆಟಿಕ್ ಕೂಟದ ಪುರುಷರ ಮತ್ತು ಮಹಿಳೆಯರ ವಿಭಾಗಗಳೆ ರಡರಲ್ಲೂ ನಿರೀಕ್ಷೆಯಂತೆ ಮೂಡಬಿದ್ರೆ ಆಳ್ವಾಸ್ ಕಾಲೇಜು ತಂಡ ಅಗ್ರಸ್ಥಾನಿಯಾಗಿ ಚಾಂಪಿಯನ್ ಪಟ್ಟವನ್ನು ಗೆದ್ದುಕೊಂಡಿದೆ.
ಆಳ್ವಾಸ್ ಪುರುಷರ ತಂಡ ಒಟ್ಟು 276 ಅಂಕಗಳನ್ನು ಸಂಗ್ರಹಿಸುವ ಮೂಲಕ ಸೈಂಟ್ ಫಿಲೋಮಿನಾ ಕಾಲೇಜು ಅಸೋಸಿಯೇಷನ್ ಟ್ರೋಫಿ ಯನ್ನು ಕೈಗೆತ್ತಿಕೊಂಡರೆ, ಅದೇ ಮಹಿಳಾ ತಂಡ 256 ಅಂಕಗಳನ್ನು ಗಳಿಸುವ ಮೂಲಕ ಟ್ರೋಫಿಯನ್ನು ಮತ್ತೊಮ್ಮೆ ಜಯಿಸಿತು.
ಪುರುಷರ ವಿಭಾಗದಲ್ಲಿ ನಿಟ್ಟೆ ಡಾ.ಎನ್‌ಎಸ್‌ಎಎಂಎಫ್‌ಜಿ ಕಾಲೇಜು (35) ದ್ವಿತೀಯ, ಉಜಿರೆ ಎಸ್‌ಡಿಎಂ (30) ತೃತೀಯ ಹಾಗೂ ಮಂಗಳೂರು ವಿವಿ ಕ್ಯಾಂಪಸ್ ಮಂಗಳಗಂಗೋತ್ರಿ (29) ನಾಲ್ಕನೆ ಸ್ಥಾನ ಪಡೆದರೆ, ಮಹಿಳೆಯರ ವಿಭಾಗದಲ್ಲಿ ಉಜಿರೆ ಎಸ್‌ಡಿಎಂ (105) ದ್ವಿತೀಯ, ಮಂಗಳೂರು ವಿವಿ ಕ್ಯಾಂಪಸ್ (26) ತೃತೀಯ ಹಾಗೂ ನಿಟ್ಟೆ ಕಾಲೇಜು (19) ನಾಲ್ಕನೆ ಸ್ಥಾನವನ್ನು ಗಳಿಸಿತು. ವಿವಿ ಚಾಂಪಿಯನ್ ಅಥ್ಲೀಟ್: ಕ್ರೀಡಾಕೂಟದ ಅತ್ಯುತ್ತಮ ಪುರುಷ ಅಥ್ಲೆಟ್ ಪ್ರಶಸ್ತಿಯನ್ನು ಆಳ್ವಾಸ್‌ನ ಅನುರೂಪ್ ಪಡೆದರೆ, ಶ್ರೇಷ್ಠ ಮಹಿಳಾ ಅಥ್ಲೆಟ್ ಆಗಿ ಉಜಿರೆ ಎಸ್‌ಡಿಎಂ ನ ಅಕ್ಷತಾ ಪಿ.ಎಸ್. ಮೂಡಿಬಂದರು.
ಶನಿವಾರ ಇಡೀ ದಿನದಲ್ಲಿ ಮತ್ತೆ 12 ಹೊಸ ದಾಖಲೆಗಳು ಮೂಡಿಬಂದವು. ಇವುಗಳಲ್ಲಿ 7 ಪುರುಷ ವಿಭಾಗದಲ್ಲಿ ಹಾಗೂ ಐದು ಮಹಿಳಾ ವಿಭಾಗಗಳಲ್ಲಿ ದಾಖಲಾದವು. ಮೊದಲ ದಿನವಾದ ನಿನ್ನೆ 9 ಹೊಸ ಕೂಟ ದಾಖಲೆಗಳು ಬರೆಯಲ್ಪಟ್ಟಿದ್ದು, ಇವುಗಳಲ್ಲಿ 5 ಪುರುಷ ಹಾಗೂ 4 ಮಹಿಳಾ ವಿಭಾಗಗಳಲ್ಲಿ ಬಂದಿದ್ದವು. ಇದರಿಂದಉಡುಪಿಯಲ್ಲಿ ಒಟ್ಟು 21 ದಾಖಲೆಗಳನ್ನು (ಪುರುಷ:12,ಮಹಿಳೆ:9) ಹೊಸದಾಗಿ ಬರೆಯಲಾಗಿದೆ.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮುಖ್ಯ ಅತಿಥಿಗಳಾಗಿ ಜಿಪಂ ಅಧ್ಯಕ್ಷ ದಿನಕರ ಬಾಬು, ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಮೋಹನ್ ಆಳ್ವ, ತೆಂಕನಿಡಿಯೂರು ಗ್ರಾಪಂ ಅಧ್ಯಕ್ಷ ಜಯಕುಮಾರ್ ಬೆಳ್ಕಳೆ, ಉದ್ಯಮಿಗಳಾದ ಬಾಲಕೃಷ್ಣ ಹೆಗ್ಡೆ, ಪ್ರಖ್ಯಾತ್ ಶೆಟ್ಟಿ, ಸುರೇಶ್ ಶೆಟ್ಟಿ ಗುರ್ಮೆ, ಕಾಲೇಜು ಅಭಿವೃದ್ಧಿ ಸಮಿತಿಯ ಕೋಶಾಧಿಕಾರಿ ದಯಾನಂದ ಶೆಟ್ಟಿ, ರಾಜ್ಯ ಕ್ರೀಡಾ ಇಲಾಖೆಯ ಕಾರ್ಯದರ್ಶಿ ಡಾ.ಗಣನಾಥ ಎಕ್ಕಾರು, ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಕಿಶೋರ್ ಕುಮಾರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಬಾಲಕೃಷ್ಣ ಎಸ್.ಹೆಗ್ಡೆ ವಹಿಸಿ ದ್ದರು. ದೈಹಿಕ ಶಿಕ್ಷಣ ನಿರ್ದೇಶಕ ರಾಮಚಂದ್ರ ಪಾಟ್ಕರ್ ವಂದಿಸಿದರು. ಡಾ.ದುಗ್ಗಪ್ಪ ಕಜೆಕಾರ್ ಕಾರ್ಯಕ್ರಮ ನಿರೂಪಿಸಿದರು.







