ಅಂತಾರಾಷ್ಟ್ರೀಯ ಅಲ್ಟ್ರಾ ಮ್ಯಾರಥಾನ್ ಓಟದ ಸ್ಪರ್ಧೆ

ಚಿಕ್ಕಮಗಳೂರು ಅ.8 : ಕಾಫಿ ಡೇ ಆಯೋಜಿಸಿರುವ ಎರಡು ದಿನಗಳ ಕಾಲದ ಅಂತಾರಾಷ್ಟ್ರೀಯ ಮಟ್ಟದ ಪುರುಷ ಮತ್ತು ಮಹಿಳೆಯರ ಮಲೆನಾಡು ಅಲ್ಟ್ರಾ ಮ್ಯಾರಥಾನ್ ಓಟದ ಸ್ಪರ್ಧೆ ಜಿಲ್ಲೆಯ ಕಾಫಿ ಕಣಿವೆಯಲ್ಲಿ ಶನಿವಾರ ಆರಂಭಗೊಂಡಿತು.
ತರೀಕೆರೆ ತಾಲೂಕಿನ ಕೆಮ್ಮಣ್ಣುಗುಂಡಿ ಮತ್ತು ಲಾಲ್‌ಬಾಗ್ ಎಸ್ಟೇಟ್‌ನಲ್ಲಿ ಮುಂಜಾನೆ ಕಾಫೀ ಡೇ ಪ್ರಧಾನ ವ್ಯವಸ್ಥಾಪಕ ಚಿದಂಬರಂ ಅವರು ಮ್ಯಾರಥಾನ್‌ಗೆ ಚಾಲನೆ ನೀಡಿದರು.
ನಂತರ ದಟ್ಟ ಮಂಜು, ಕಾಫಿಯ ಕಂಪು ಹಾಗೂ ಹಸಿರು ಸಿರಿಯ ನಡುವೆ ಕಾಫಿ ತೋಟಗಳ ಕಡಿದಾದ ಅಂಕುಡೊಂಕಿನ ಹಾದಿಯಲ್ಲಿ ದೇಶ ಮತ್ತು ವಿದೇಶಗಳ ಸ್ಪರ್ಧಾಳುಗಳ ಮ್ಯಾರಥಾನ್ ಓಟ ಸಾಗಿತು.
ಸರ್ಪ ಸುತ್ತಿನ ಹಾದಿಯಲ್ಲಿ ಓಡುತ್ತಾ ಆಗಮಿಸಿದ ಓಟಗಾರರನ್ನು ರಸ್ತೆಯ ಬದಿಯಲ್ಲಿ ಗ್ರಾಮಸ್ಥರು ತೋಟಗಳ ಕೂಲಿ ಕಾರ್ಮಿಕರು ಕೌತುಕದಿಂದ ವೀಕ್ಷಿಸುವುದರ ಜೊತೆಗೆ ಚಪ್ಪಾಳೆ ತಟ್ಟಿ ಹುರಿದುಂಬಿಸಿದರು.
ದೇಶವಿದೇಶಗಳ ವಯೋವೃದ್ಧರು ಮತ್ತು ಮಹಿಳೆಯರು ಯುವಕರು ನಾಚುವಂತೆ ಓಡುವ ಮೂಲಕ ನೋಡುಗರ ಗಮನ ಸೆಳೆದರು. ಇದೇ ವೇಳೆ ಮಾಧ್ಯಮದೊಂದಿಗೆ ಯುವ ಓಟಗಾರ್ತಿ ಅಮೆರಿಕಾದ ಮೋನಿಕಾ ಮಾತನಾಡಿ, ಮಲೆನಾಡಿನ ಪ್ರಾಕೃತಿಕ ಸೌಂದರ್ಯದ ನಡುವೆ ಓಟವನ್ನು ಆಯೋಜಿಸಿರುವುದು ಮನವನ್ನು ಮುದಗೊಳಿಸಿದೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.
ಮುಂಬೈನ ವಯೋವೃದ್ಧ ಓಟಗಾರ ಗೌರಿಪ್ರಸಾದ್ ಕಾಫಿ ತೋಟಗಳ ನಡುವಿನ ಓಟ ತಮಗೆ ಹೊಸ ಅನುಭವವನ್ನು ಮತ್ತು ಹುರುಪನ್ನು ತಂದಿದೆ ಎಂದರು.
ಮಲೆನಾಡಿನ ಸಹಜ ಸಿದ್ಧವಾದ ತಂಪು ಹವಾಮಾನ ಓಟಗಾರರಿಗೆ ಹೆಚ್ಚಿನ ಹುರುಪು ನೀಡಿದಂತಿತ್ತು. ಕೇರಳ, ತಮಿಳುನಾಡು, ಮಹಾರಾಷ್ಟ್ರ, ಗೋವಾ, ಜಪಾನ್, ಸಿಂಗಪುರ್, ದುಬೈ, ಯು.ಎಸ್, ಯು.ಕೆ ಸೇರಿದಂತೆ 183 ಓಟಗಾರರು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.
50 ಕಿ.ಮೀ ಉದ್ದದ ಸ್ಪರ್ಧೆ ರಾತ್ರಿ ವೇಳೆಗೆ ಮುಕ್ತಾಯಗೊಳ್ಳಲಿದ್ದು, ಉಳಿದ 80 ಕಿ.ಮೀ ಮತ್ತು 110 ಕಿ.ಮೀ ಅಂತರದ ಸ್ಪರ್ಧೆ ರವಿವಾರ ಬೆಳಗ್ಗೆ ಮುಕ್ತಾಯಗೊಳ್ಳಲಿದೆ.







