ಉತ್ತರಾಖಂಡದಲ್ಲಿ ದಲಿತನ ಶಿರಚ್ಛೇದನ: ಖಂಡನೆ
ಮೂಡಿಗೆರೆ, ಅ.8: ಉತ್ತರಾಖಂಡದ ಕದರಿಯ ಗ್ರಾಮದಲ್ಲಿ ಹಿಟ್ಟಿನ ಗಿರಣಿಯೊಳಗೆ ಪ್ರವೇಶಿಸಿ ಅಪವಿತ್ರ ಮಾಡಿದ್ದಾರೆ ಎಂದು ಆರೋಪಿಸಿ ಸೋಹನ್ ರಾಮ್(35) ಎಂಬ ದಲಿತನ ಶಿರಚ್ಛೇಧನ ನಡೆಸಿರುವ ಕೃತ್ಯವನ್ನು ಖಂಡಿಸುವುದಾಗಿ ಮೂಡಿಗೆರೆ ಬ್ಲಾಕ್ ಕಾಂಗ್ರೆಸ್ ವಕ್ತಾರ ಎಂ.ಎಸ್.ಅನಂತ್ ಹೇಳಿದರು.
ಅವರು ಈ ಕುರಿತು ಶನಿವಾರ ಹೇಳಿಕೆ ನೀಡಿದ್ದು, ಗೋದಿ ಹಿಟ್ಟು ತರುವ ಉದ್ದೇಶದಿಂದ ಕುಂದನ್ ಎಂಬವರು ನಡೆಸುತ್ತಿದ್ದ ಹಿಟ್ಟಿನ ಗಿರಣಿಗೆ ಸೋಹನ್ ಕುಮಾರ್ ತೆರಳಿದ್ದರು. ಆ ಸಮಯದಲ್ಲಿ ಮಧ್ಯೆ ಪ್ರವೇಶಿಸಿದ ಶಿಕ್ಷಕ ಲಲಿತ್ ಕರ್ನಾಟಕ್ ಎಂಬವರು ಹಿಟ್ಟಿನ ಗಿರಣಿಗೆ ಪ್ರವೇಶಿಸಿ ಅಪವಿತ್ರಗೊಳಿಸಿದ್ದಿಯೆ ಎಂದು ಗದರಿದಾಗ ಸೋಹನ್ ರಾಮ್ ಪ್ರತಿರೋಧ ತೋರಿದ್ದರು. ರೊಚ್ಚಿಗೆದ್ದ ಲಲಿತ್ ಕೈಲಿದ್ದ ಕುಡುಗೋಲಿನಿಂದ ಸೋಹನ್‌ರ ತಲೆ ಕಡಿದಿದ್ದಾರೆ. ಇಂತಹ ಕೃತ್ಯಗಳು ದೇಶದಾದ್ಯಂತ ನಡೆಯುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದಿದ್ದಾರೆ.
ಕಳೆದ ವರ್ಷ ಕರ್ನಾಟಕ ರಾಜ್ಯದ ಚಾಮರಾಜನಗರ ಜಿಲ್ಲೆಯಲ್ಲಿ ಇಬ್ಬರು ದಲಿತರ ಶಿರಚ್ಛೇದನ ನಡೆದಿತ್ತು. ಆ ಪ್ರಕರಣವನ್ನು ಆರೋಪಿಯು ಮಾನಸಿಕ ಅಸ್ವಸ್ಥನೆಂದು ಮುಚ್ಚಿ ಹಾಕುವ ವ್ಯವಸ್ಥಿತ ಷಡ್ಯಂತ್ರವೂ ನಡೆದಿದೆ. ಉತ್ತರ ಪ್ರದೇಶದಲ್ಲಿ ಕಳೆದ ವರ್ಷ ದೇವಸ್ಥಾನ ಪ್ರವೇಶಕ್ಕೆ ಹೋಗಿದ್ದ ದಲಿತನ ಮೇಲೆ ಪೆಟ್ರೋಲ್ ಸುರಿದು ಅಮಾನವೀಯ ರೀತಿಯಲ್ಲಿ ಕೊಲೆಗೈಯ್ಯಲಾಗಿತ್ತು ಎಂದು ಆರೋಪಿಸಿದರು.
ಆಧುನಿಕ ಯುಗದಲ್ಲಿ ಇಂತಹ ಅಮಾನವೀಯ ಹೇಯ ಕೃತ್ಯಗಳು ನಡೆಯುತ್ತಿರುವುದು ದುರಂತವೇ ಸರಿ. ದಲಿತರನ್ನು ದೇವಸ್ಥಾನಕ್ಕೆ, ಮನೆಯೊಳಗೆ, ಅಂಗಡಿಗೆ ಪ್ರವೇಶಿಸದಂತೆ ತಡೆದು ದೌರ್ಜನ್ಯ ಎಸಗುವುದನ್ನು ಆಡಳಿತಾರೂಡ ಸರಕಾರ ತಡೆಗಟ್ಟಬೇಕು.
ಬಿಜೆಪಿ ಪಕ್ಷದ ಆಡಳಿತ ಇರುವೆಡೆ ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿವೆ. ಕ್ಷುಲ್ಲಕ ವಿಚಾರಗಳಲ್ಲಿ ತಮ್ಮ ಮೇಲೆ ದೌರ್ಜನ್ಯ ನಡೆದರೆ ದಲಿತರು ಕಾನೂನನ್ನು ಕೈಗೆತ್ತಿಕೊಳ್ಳುವ ದಿನ ದೂರವಿಲ್ಲ. ದೌರ್ಜನ್ಯ ಎಸಗುವ ಆರೋಪಿಗಳ ಮೇಲೆ ಕಠಿಣ ಕಾನೂನು ಕ್ರಮ ನಡೆಯದಿದ್ದರೆ ಕಾಂಗ್ರೆಸ್ ಪಕ್ಷವು ಉಗ್ರ ಹೋರಾಟಕ್ಕೆ ಧುಮುಕಲಿದೆ ಎಂದು ಎಚ್ಚರಿಸಿದರು.







