ಡಿಸಿ ಕಚೇರಿಯ 200 ಮಿ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ

ಚಿಕ್ಕಮಗಳೂರು, ಅ.8: ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ಸುತ್ತಲೂ ಇತರ ಸರಕಾರಿ ಕಚೇರಿಗಳ ವ್ಯಾಪ್ತಿಯಲ್ಲಿ ಸರಕಾರಿ ಕಾರ್ಯ ಕಲಾಪಕ್ಕೆ ಅಡ್ಡಿಯಾಗದಂತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಲಂ 144ರಡಿ ನಿಷೇಧಾಜ್ಞೆ ಜಾರಿಗೊಳಿಸಿರುವುದಾಗಿ ಉಪವಿಭಾಗೀಯ ದಂಡಾಧಿಕಾರಿಗಳ ಆದೇಶ ತಿಳಿಸಿದೆ.
ಈ ಹಿಂದೆಯೇ ಜಿಲ್ಲಾಧಿಕಾರಿಗಳ ಕಚೇರಿಯ ಸುತ್ತ ನೂರು ಮೀಟರ್ ವ್ಯಾಪ್ತಿಯಲ್ಲಿ ತಾಲೂಕು ದಂಡಾಧಿಕಾರಿಗಳ ನಿಷೇಧಾಜ್ಞೆ ಜಾರಿಯಲ್ಲಿತ್ತು. ಈ ಆದೇಶ ಜಾರಿಗೊಂಡ ಪ್ರಾರಂಭದಲ್ಲಿ ಪ್ರತಿಭಟನೆ, ಧರಣಿ ಮುಂತಾದ ಚಟುವಟಿಕೆಗಳು ಜಿಲ್ಲಾಧಿಕಾರಿಗಳ ಕಚೇರಿಯಿಂದ ಸ್ವಲ ದೂರದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿವಾಸದ ಮುಂಭಾಗದ ರಸ್ತೆ ಬದಿ ನಡೆಸಲಾಗುತ್ತಿತ್ತು.
ಆನಂತರ ಒಮ್ಮೆ ಶಾಸಕ ಸಿ.ಟಿ.ರವಿ ಅವರ ನೇತೃತ್ವದಲ್ಲಿ ಕಾರ್ಯಕರ್ತರು ನಡೆಸಿದ ಚಳವಳಿಯ ಸಂದರ್ಭದಲ್ಲಿ ಈ ನಿಷೇಧಾಜ್ಞೆಯನ್ನು ಕಡೆಗಣಿಸಿ ಜಿಲ್ಲಾಧಿಕಾರಿಗಳ ಕಚೇರಿಯ ಗೇಟಿನ ಮುಂಭಾಗದಲ್ಲಿ ಅಡ್ಡಲಾಗಿ ನಡೆಸಿದರಿಂದ ಹಿಂದಿನ ಪರಿಪಾಠ ಬದಿಗಿರಿಸಿ ಇತರ ಸಂಘಟನೆಗಳು ಕೂಡ ಡಿ.ಸಿ.ಕಚೇರಿ ಗೇಟಿಗೆ ಅಡ್ಡಲಾಗಿ ಧರಣಿ ಆರಂಭಿಸಿದ್ದರು.
ಈ ಹಿಂದೆ ಹೀಗೆ ಸಾರ್ವಜನಿಕರು ಜಿಲ್ಲಾಧಿಕಾರಿಗಳ ಕಚೇರಿ ಪ್ರವೇಶಿಸಿದರೆ ಧರಣಿ, ಚಳವಳಿಗಳು ಸುಗಮ ಆಡಳಿತಕ್ಕೆ ಅಡ್ಡಿಯಾಗುತ್ತದೆ ಎಂಬ ಕಾರಣಕ್ಕೆ ಅಂದಿನ ಜಿಲ್ಲಾಧಿಕಾರಿಗಳ ಸೂಚನೆಯಂತೆ ನಿಷೇಧಾಜ್ಞೆ ಜಾರಿಗೊಂಡಿತ್ತು ಎಂಬುದನ್ನು ಇಲ್ಲಿ ನೆನಪು ಮಾಡಿಕೊಳ್ಳಬಹುದಾಗಿದೆ. ಈ ಹಿಂದಿದ್ದ ತಾಲೂಕು ದಂಡಾಧಿಕಾರಿಗಳ ನೂರು ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಈಗ ವಿಸ್ತರಣೆಗೊಂಡಿದೆ.
ಈಗಿನ ಉಪವಿಭಾಗೀಯ ದಂಡಾಧಿಕಾರಿಗಳ ಆದೇಶದಂತೆ ಜಿಲ್ಲಾಧಿಕಾರಿಗಳ ಕಚೇರಿ ಸೇರಿದಂತೆ ಸುತ್ತಲೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಮತ್ತಿತರ ಸರಕಾರಿ ಕಚೇರಿ ಸುತ್ತಲೂ 200 ಮೀಟರ್ ವ್ಯಾಪ್ತಿಯಲ್ಲಿ ಚಳವಳಿ ನಡೆಸದಂತೆ ನಿರ್ಬಂಧ ಹೇರಿದಂತಾಗಿದೆ.
ಕಚೇರಿ ಎದುರು ಧರಣಿ: ಮೊಕದ್ದಮೆ ದಾಖಲು
ಚಿಕ್ಕಮಗಳೂರು, ಅ.8: ರೈತ ಆತ್ಮಹತ್ಯೆ ಪ್ರಕರಣ ಒಂದರಲ್ಲಿ ಪರಿಹಾರ ಧನ ವಿತರಿಸಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕೊಠಡಿ ಎದುರು ಅ.6ರಂದು ಧರಣಿ ನಡೆಸಿ ತಾಲೂಕು ದಂಡಾಧಿಕಾರಿಗಳು ಜಾರಿಗೊಳಿಸಿದ್ದ ನಿಷೇಧಾಜ್ಞೆ ಉಲ್ಲಂಘಿಸಿದ ಆರೋಪದಡಿ ಕರ್ನಾಟಕ ಪ್ರದೇಶ ಕಿಸಾನ್ ಖೇತ್ ಮಜ್ದೂರ್ ಕಾಂಗ್ರೆಸ್ ಘಟಕದ ರಾಜ್ಯಾಧ್ಯಕ್ಷ ಸಚಿನ್ ಮಿಗಾ ಮತ್ತು ಅವರ ಬೆಂಬಲಿಗರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ.
ಕೊಪ್ಪ ತಾಲೂಕಿನಲ್ಲಿ ಆರ್ಥಿಕ ಸಂಕಷ್ಟದಿಂದ ಆತ್ಮಹತ್ಯೆ ಮಾಡಿಕೊಂಡ ರೈತರೋರ್ವರಿಗೆ ಪರಿಹಾರ ಧನ ವಿತರಿಸಬೇಕೆಂಬ ಸರಕಾರದ ಆದೇಶದಂತೆ ಪರಿಹಾರ ನೀಡಿಲ್ಲ ಎಂದು ಆರೋಪಿಸಿ ಸಚಿನ್ ಮಿಗಾ ಸೇರಿದಂತೆ ಅವರ ಬೆಂಬಲಿಗರು ನೇರವಾಗಿ ಜಿಲ್ಲಾಧಿಕಾರಿಗಳ ಕಚೇರಿಯ ಮಹಡಿ ಮೇಲಿರುವ ಡಿಸಿ ಕೊಠಡಿ ಎದುರು ಕುಳಿತು ಧರಣಿ ನಡೆಸಿದ್ದಲ್ಲದೆ ಘೋಷಣೆ ಕೂಗಿದ್ದರು.
ಜಿಲ್ಲಾಧಿಕಾರಿಗಳ ಗೈರು ಹಾಜರಿ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿ ಎಂ.ಎಲ್. ವೈಶಾಲಿ ಅವರು ಪ್ರತಿಭಟನಾಕಾರರಿಗೆ ಮನವರಿಕೆ ಮಾಡಿದರೂ ಅವರ ಸೂಚನೆಯನ್ನು ಮಾನ್ಯ ಮಾಡದೆ ಧರಣಿ ಮುಂದುವರಿಸಿದ್ದರಿಂದ ಪೊಲೀಸರು ಚಳವಳಿ ನಿರತರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದು ಬಿಡುಗಡೆ ಮಾಡಿದ್ದರು.
ಆದರೆ ತಾಲೂಕು ದಂಡಾಧಿಕಾರಿಗಳು ಈ ಹಿಂದೆ ಜಾರಿಗೊಳಿಸಿದ್ದ ಜಿಲ್ಲಾಧಿಕಾರಿಗಳ ಕಚೇರಿ ಸುತ್ತಲು ನೂರು ಮೀಟರ್ ವ್ಯಾಪ್ತಿಯಲ್ಲಿನ ನಿಷೇಧಾಜ್ಞೆ ಉಲ್ಲಂಘಿಸಿ ತಮ್ಮ ಕೊಠಡಿ ಬಳಿ ಬಂದು ಪ್ರತಿಭಟನೆ ನಡೆಸಿದ್ದರ ಹಿನ್ನೆಲೆಯಲ್ಲಿ, ಆನಂತರ ಆಗಮಿಸಿದ ಜಿಲ್ಲಾಧಿಕಾರಿ ಜಿ.ಸತ್ಯವತಿ ಅವರು ಪ್ರತಿಭಟನಾಕಾರರ ವಿರುದ್ಧ ಕಾನೂನು ಕ್ರಮ ಕೋರಿ ಠಾಣೆಗೆ ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ನಗರ ಠಾಣಾ ಪೊಲೀಸರು ಸಚಿನ್ ಮಿಗಾ ಮತ್ತು ಇತರರ ವಿರುದ್ಧ ಅಕ್ರಮ ಕೂಟ, ತಾಲೂಕು ದಂಡಾಧಿಕಾರಿಗಳ ನಿಷೇಧಾಜ್ಞೆ ಉಲ್ಲಂಘನೆ, ಕಾನೂನು ಪರಿಪಾಲನೆಯಲ್ಲಿ ಅವಿದೇಯತೆ ಮುಂತಾದ ಆರೋಪದ ಐಪಿಸಿ ಕಲಂಗಳಡಿ ಮೊಕದ್ದಮೆ ದಾಖಲು ಮಾಡಿದ್ದಾರೆ.







