ಕಾನೂನು ಅರಿವಿನಿಂದ ಉತ್ತಮ ಸಮಾಜ ನಿರ್ಮಾಣ: ನ್ಯಾಯಾಧೀಶೆ ಅನಿತಾ
ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ
ಚಿಕ್ಕಮಗಳೂರು, ಅ.8: ಕಾನೂನು ಸೇವಾ ಪ್ರಾಧಿಕಾರದ ಉಚಿತ ಕಾನೂನಿನ ನೆರವನ್ನು ಎಲ್ಲ ಅರ್ಹರು ಪಡೆದುಕೊಳ್ಳಬಹುದಾಗಿದೆ. ಪ್ರತಿಯೊಬ್ಬರಿಗೂ ಕಾನೂನಿನ ಅರಿವಿದ್ದ್ದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಕಡೂರಿನ ಪ್ರಧಾನ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶೆ ಅನಿತಾ ಹೇಳಿದರು.
ಕಡೂರು ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜು ವತಿಯಿಂದ ಆಯೋಜಿಸಲಾಗಿದ್ದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜನನ ಮತ್ತು ಮರಣ ದೃಢೀಕರಣ ಪತ್ರಗಳನ್ನು ಪ್ರತಿಯೊಬ್ಬರೂ ಹೊಂದಿರಲೇಬೇಕು. ಇವು ಸರಕಾರಿ ಸೌಲಭ್ಯ ಪಡೆಯಲು ಸಹಕಾರಿಯಾಗುತ್ತದೆ. ಎಂದು ತಿಳಿಸಿದರು. ಜಿಲ್ಲಾ ಕಾನೂನು ಸೇವಾ ಸಮಿತಿ ಸದಸ್ಯ ಕೆ.ಎನ್. ಬೊಮ್ಮಣ್ಣ ಮಾತನಾಡಿ, ಆಸ್ತಿ ಹಕ್ಕು, ಬಾಲ್ಯ ವಿವಾಹದ ದುಷ್ಪರಿಣಾಮ ಹಾಗೂ ವಿಶ್ವ ಕೈ ತೊಳೆಯುವ ದಿನಾಚರಣೆಯ ಮಹತ್ವವನ್ನು ತಿಳಿಸಿ, ಸ್ವಚ್ಛತೆಯನ್ನು ಕಾಪಾಡಿಕೊಂಡರೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ ಎಂದು ಹೇಳಿದರು.
ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಸೂರಿ ಶ್ರೀನಿವಾಸ್ ಮಾತನಾಡಿ, ಜನನ ಮತ್ತು ಮರಣ ಹಾಗೂ ಜೀವನಾಂಶ ಕಾಯ್ದೆ ಕುರಿತು ಮಾತನಾಡಿದರು.
ಸಹಾಯಕ ಸರಕಾರಿ ಅಭಿಯೋಜಕ ಹರೀಶ್‌ಕುಮಾರ್, ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಾಧಿಕಾರಿ ಎಚ್. ವಿ.ರಾಜಣ್ಣ, ವಕೀಲರ ಸಂಘದ ಅಧ್ಯಕ್ಷ ಹುಲ್ಲೇಹಳ್ಳಿ ರಾಜಶೇಖರ್, ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಸಿದ್ದಪ್ಪ, ಟಕ್ಕಳಿಕೆ ಉಮೇಶ್, ರಾಜಪ್ಪ ಕಾನಗೊಂಡನಹಳ್ಳಿ ಸಹಿಪ್ರಾ ಶಾಲಾ ಮುಖ್ಯ ಶಿಕ್ಷಕ ಗುರುವಪ್ಪ, ಗ್ರಾಮಸ್ಥರಾದ ರಾಜಪ್ಪ ಇತರರು ಮಾತನಾಡಿದರು.
ತಂಗಲಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಧನಪಾಳನಾಯ್ಕಾ ಅಧ್ಯಕ್ಷತೆ ವಹಿಸಿದ್ದರು.
ಈ ವೇಳೆ ಎನ್ನೆಸ್ಸೆಸ್ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.







